ಶಹಾಪುರದಲ್ಲಿ ಬೃಹತ್​ ಹಿಂದೂ ಸಮಾವೇಶ ನಾಳೆ

ಶಹಾಪುರದಲ್ಲಿ ಸೋಮವಾರ ಹಮ್ಮಿಕೊಂಡ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಕರಪತ್ರವನ್ನು ಸೂಗುರೇಶ್ವರ ಶ್ರೀಗಳು ಶನಿವಾರ ಯಾದಗಿರಿಯಲ್ಲಿ ಬಿಡುಗಡೆ ಮಾಡಿದರು. ಶ್ರೀ ಸಿದ್ದೇಶ್ವರ ಶಿವಾಚಾರ್ಯ, ಶ್ರೀ ಮರುಳಮಹಾಂತ ಶಿವಾಚಾರ್ಯ, ಶ್ರೀ ಸೋಮೇಶ್ವರ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಚನ್ನವಿರ ಸ್ವಾಮೀಜಿ, ದೋರನಹಳ್ಳಿಯ ಶ್ರೀ ಚನ್ನವಿರ ಸ್ವಾಮೀಜಿ, ಚನ್ನಾರಡ್ಡಿ ಕೊಡಲ್​, ಗುರು ಕಾಮಾ, ಕರಣ ಸುಬೇದಾರ, ಅಡಿವೆಪ್ಪ ಜಾಕಾ, ಸುಭಾಷ ದೇವದುರ್ಗ, ಮಲ್ಲು ಪೂಜಾರಿ ಇತರರಿದ್ದರು.
ಶಹಾಪುರದಲ್ಲಿ ಸೋಮವಾರ ಹಮ್ಮಿಕೊಂಡ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಕರಪತ್ರವನ್ನು ಸೂಗುರೇಶ್ವರ ಶ್ರೀಗಳು ಶನಿವಾರ ಯಾದಗಿರಿಯಲ್ಲಿ ಬಿಡುಗಡೆ ಮಾಡಿದರು. ಶ್ರೀ ಸಿದ್ದೇಶ್ವರ ಶಿವಾಚಾರ್ಯ, ಶ್ರೀ ಮರುಳಮಹಾಂತ ಶಿವಾಚಾರ್ಯ, ಶ್ರೀ ಸೋಮೇಶ್ವರ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಚನ್ನವಿರ ಸ್ವಾಮೀಜಿ, ದೋರನಹಳ್ಳಿಯ ಶ್ರೀ ಚನ್ನವಿರ ಸ್ವಾಮೀಜಿ, ಚನ್ನಾರಡ್ಡಿ ಕೊಡಲ್​, ಗುರು ಕಾಮಾ, ಕರಣ ಸುಬೇದಾರ, ಅಡಿವೆಪ್ಪ ಜಾಕಾ, ಸುಭಾಷ ದೇವದುರ್ಗ, ಮಲ್ಲು ಪೂಜಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸೂಗೂರೇಶ್ವರ ಸ್ವಾಮೀಜಿ ಮಾಹಿತಿ
  • ಕನ್ಹೇರಿ ಶ್ರೀ ಸೇರಿ 300ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿ
ಯಾದಗಿರಿ: ಶಹಾಪುರದಲ್ಲಿ ಸೋಮವಾರ ಬಸವಾದಿ ಶಿವಶರಣರ ಹಿಂದೂ ವೇದಿಕೆ ಆಯೋಜಿಸಿದ್ದ ಬಸವಾದಿ ಶಿವಶರಣರ ಬೃಹತ್​ ಹಿಂದೂ ಸಮಾವೇಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಕನ್ಹೇರಿ ಮಠದ ಶ್ರೀ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಈ ಸಮಾವೇಶದ ಕೇಂದ್ರಬಿಂದುವಾಗಿದ್ದಾರೆ ಎಂದು ಕುಂಬಾರ ಬಡಾವಣೆ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ತಿಳಿಸಿದರು.
ಈ ಕುರಿತು ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6ಕ್ಕೆ ಶಹಾಪುರ ನಗರದ ಸಿಪಿಎಸ್​ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಈ ಸಮಾವೇಶದಲ್ಲಿ ಸುಮಾರು 10 ಜನ ಭಾಗವಹಿಸಲಿದ್ದಾರೆ. ಇದೊಂದು ಸಗರ ನಾಡಿನಲ್ಲಿ ಐತಿಹಾಸಿಕ ಸಮ್ಮೇಳನವಾಗಿ ಇತಿಹಾಸ ನಿರ್ಮಿಸಲಿದೆ ಎಂದರು.
ಸಮಾವೇಶ ರಾಜಕೀಯ ರಹಿತ ಮತ್ತು ಪಕ್ಷಾತಿತವಾಗಿದೆ. ರೈತರು ಸೇರಿ ಸಮಾಜದ ಜಾಗೃತಿ ಕುರಿತು ಕನ್ಹೇರಿ ಶ್ರೀಗಳು ಸನಾತನ ಹಿಂದೂ ಧರ್ಮ ಮತ್ತು ಕೃಷಿ ವಿಷಯ ಕುರಿತು ವಿಶೇಷ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಅಲ್ಲದೇ ದೇಶದ ಪರಂಪರೆ, ಸಾಂಸತಿಕ ಮತ್ತು ಈ ನೆಲದ ಐತಿಹಾಸಿಕ ಕುರಿತು ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಮಾತನಾಡುವ ಅವರು, ಒಡೆದು ಹೋಗುತ್ತಿರುವ ಹಿಂದೂ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಇದು ಯಾರ ಮತ್ತು ಯಾವುದೇ ಸಮುದಾಯದ ವಿರುದ್ಧದ ಸಮಾವೇಶ ಅಲ್ಲ. ಭಾರತೀಯರೆಲ್ಲರೂ ಹಿಂದೂಗಳೇ, ಆದರೇ ಕೆಲ ಹಿಂದೂ ದೇವರ ಮತ್ತು ಧರ್ಮಾಚರಣೆ ಬಗ್ಗೆ ಇಲ್ಲ&ಸಲ್ಲದ ಮಾತು ಆಡುವ ಮೂಲಕ ಒಡಕು ಮೂಡಿಸುತ್ತಿದ್ದಾರೆ. ಅದನ್ನು ತಡೆದು ನಾವೇಲ್ಲರೂ ಒಂದಾಗಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ ಎಂಬ ಸಂದೇಶ ರವಾನಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದರು.
ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯ, ಒಕ್ಕಲಿಗೇರ ಹಿರೇಮಠದ ಮರುಳಮಹಾಂತ ಶಿವಾಚಾರ್ಯ, ಸಗರದ ನಾಗಠಾಣಮಠದ ಸೋಮೇಶ್ವರ ಸ್ವಾಮೀಜಿ, ಇಟಗಿಯ ಚಂದ್ರಶೇಖರ ಸ್ವಾಮೀಜಿ, ಅಣಬಿ ಸೊಪ್ಪಿನಮಠದ ಚನ್ನವಿರ ಸ್ವಾಮೀಜಿ, ದೋರನಹಳ್ಳಿಯ ಸೊಪ್ಪಿನ ಮಠದ ಚನ್ನವಿರ ಸ್ವಾಮೀಜಿ, ಚನ್ನಾರಡ್ಡಿ ಕೊಡಲ್​, ಸುಭಾಷ ದೇವದುರ್ಗ, ಮಲ್ಲು ಪೂಜಾರಿ ಮುಂಡರಗಿ ಇತರರಿದ್ದರು.
ಬಸವಾದಿ ಶರಣರ ಭಾವಚಿತ್ರಗಳ ಮೆರವಣಿಗೆ
ಸಮಾವೇಶ ನಿಮಿತ್ತ ಅಂದು ಸಂಜೆ 4ಕ್ಕೆ ಸಾರೋಟದಲ್ಲಿ ಬಸವಾದಿ ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ. ಅದು ನಗರದ ಗುಗ್ಗಳ ಬಸವೇಶ್ವರ ದೇವಸ್ಥಾನ, ಗಾಂಧಿಚೌಕ್​, ಮೋಚಿಗಡ್ಡಾ, ಬಸವೇಶ್ವರ ವೃತ್ತ, ಹಳೇ ಬಸ್​ ನಿಲ್ದಾಣ, ಮೂಲಕ ಸಿಪಿಎಸ್​ ಶಾಲಾ ಮೈದಾನದಕ್ಕೆ ತಲುಪಲಿದೆ. 2000 ಮುತೆದೆಯರು ಕುಂಭದೊಂದಿಗೆ, ಜತೆಗೆ ಬಸವಾದಿ ಶಿವಶರಣರು ಅನುಯಾಯಿಗಳು, ರೈತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಗುರು ಕಾಮಾ ಕರಣ ಸುಬೇದಾರ ಮಾಹಿತಿ ನೀಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕಿದೆ
ಈ ಸಮಾವೇಶ ರದ್ದು ಪಡಿಸಬೇಕು, ಕನ್ಹೇರಿ ಶ್ರೀಗಳು ಶಹಾಪುರಕ್ಕೆ ಬರದಂತೆ ನಿರ್ಭಂಧ ಹೇರಬೇಕು, ಸಚಿವರು, ಶಾಸಕರು ಭಾಗವಹಿಸಬಾರದು ಹೀಗೆ ಕೆಲವರು ಏನೆಲ್ಲ ಹೇಳಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು ತಪ್ಪು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಇಂತಹ ಸಮಾವೇಶ ಮಾಡಬಹುದು. ಅವರ ಹೇಳಿಕೆ, ಮಾತುಗಳಿಗೆ ನಾವು ಕಿವಿಗೊಡುವುದಿಲ್ಲ ಮತ್ತು ಅದು ನಮಗೆ ಸಂಬಂಧವಿಲ್ಲ. ಅವರ ಕೆಲಸ ಅವರಿಗೆ, ನಮ್ಮ ಕೆಲಸ ನಮಗೆ. ನಾವಂತೂ ಸಚಿವ, ಶಾಸಕರಿಗೆ ಭಾಗವಹಿಸುವಂತೆ ಮಾಡಿ ಮಾಡಲಾಗಿದೆ ಎಂದು ಸಮಾವೇಶದ ಆಯೋಜಕ ಅಡಿವೆಲ್ಲ ಜಾಕಾ ಹೇಳಿದರು.
"

ಹಿಂದೂ ಒಂದಾಗಬೇಕು, ಒಡೆದು ಹೋಗುತ್ತಿರುವ ಸಮಾಜ ಮತ್ತೆ ಗಟ್ಟಿಯಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದಿನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು.

— > ವಿಜಯ ಪಾಟೀಲ್​ ಹಿಂದೂ ಸಮಾಜದ ಮುಖಂಡ ಯಾದಗಿರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net