ಪತಿ-ಪತ್ನಿ ಜಗಳ, ಐವರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಗೃಹಿಣಿ ಶವವಾಗಿ ಪತ್ತೆ !
ವಿಜಯಪುರದ ಐತಿಹಾಸಿಕ ಭೂತನಾಳ ಕೆರೆ. ಒಳಭಾಗದಲ್ಲಿ ಶೋಭಾ ಜಾಲಗೇರಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭೂತನಾಳ ಕೆರೆಯಲ್ಲಿ ಆರು ಶವಪತ್ತೆ
ತೊರವಿ ಭಾಗದ ಐತಿಹಾಸಿಕ ಭೂತನಾಳ ಕೆರೆ
ವಿಜಯಪುರ ನಗರ ಹೊರವಲಯದಲ್ಲಿ ಘಟನೆ
ವಿಜಯಪುರ: ಪತಿ ಬುದ್ಧಿವಾದ ಹೇಳಿದ್ದಕ್ಕೆ ಸಿಟ್ಟಾಗಿ ತನ್ನ ಐವರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಗೃಹಿಣಿ ಐತಿಹಾಸಿಕ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಎಲ್ಲರೂ ಅಸುನೀಗಿದ್ದಾರೆ.
ತಿಕೋಟಾ ತಾಲ್ಲೂಕಿನ ತೊರವಿ ಗ್ರಾಮದ ಶಾಂತಿನಗರದ ನಿವಾಸಿ ಮಲ್ಲಿಕಾರ್ಜುನ ಭೀಮಸಿ ಜಾಲಗೇರಿ ಎಂಬುವರ ಪತ್ನಿ ಶೋಭಾ (35) ಹಾಗೂ ಐವರು ಮಕ್ಕಳು ಸಾವಿಗೀಡಾಗಿದ್ದಾರೆ. ವಿದ್ಯಾ(15), ಸುವರ್ಣ (13), ತಿಪ್ಪರಾಯ (12), ಸಾನಿಕಾ (10) ಹಾಗೂ ವಿಕಾಸ (6) ಮೃತಪಟ್ಟ ಮಕ್ಕಳು. ಬುಧವಾರ ಬೆಳಗ್ಗೆ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಕಂಡ ವಾಯುವಿಹಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಲ್ಲಿಕಾರ್ಜುನ ಕಟ್ಟಡ ಕಾರ್ಮಿಕನಾಗಿದ್ದು ಅತ್ಯಂತ ಬಡ ಕುಟುಂಬ. ಶೋಭಾ ಗೃಹಿಣಿಯಾಗಿದ್ದಳು. ಮಗಳು ವಿದ್ಯಾ ವಿಜಯಪುರದ ಎಸ್.ಎಸ್. ಹೈಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದರೆ, ಸುವರ್ಣ, ತಿಪ್ಪರಾಯ, ಸಾನಿಕಾ ಹಾಗೂ ವಿಕಾಸ ಶಾಲೆಗೆ ತೆರಳುತ್ತಿದ್ದರು. ತಿಪ್ಪರಾಯ ಮೂಕನಾಗಿದ್ದು, ವಿಜಯಪುರ ನಗರದ ಸ್ಪರ್ಶ ಶ್ರವಣದೋಷ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.
ಆ.23ರಂದು ರಾತ್ರಿ ಮಲ್ಲಿಕಾರ್ಜುನ ಅವರು, ಮುಂಜಾನೆ ಬೇಗ ಎದ್ದು ಪೂಜೆ ಮಾಡಿ ದೇವರಿಗೆ ತೆರಳಿ ಬಂದು ಊಟ ಸಿದ್ಧಪಡಿಸುವಂತೆ ಪತ್ನಿ ಶೋಭಾಗೆ ಬುದ್ಧಿವಾದ ಹೇಳಿದ್ದಾರೆ. ಈ ವಿಚಾರದಲ್ಲಿ ದಂಪತಿ ನಡುವೆ ಸಣ್ಣಪುಟ್ಟ ತಕರಾರು ಉಂಟಾಗಿತ್ತು. ಬಳಿಕ ಆ ದಿನ ಮಲ್ಲಿಕಾರ್ಜುನ ಮನೆಯ ಹೊರಗೆ ಮಲಗಿದ್ದು, ಶೋಭಾ ಮಕ್ಕಳೊಂದಿಗೆ ಮನೆಯೊಳಗೆ ಮಲಗಿದ್ದರು ಎನ್ನಲಾಗಿದೆ.
ಆ.24ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಎದ್ದು ಮನೆಯೊಳಗೆ ಹೋದಾಗ ಪತ್ನಿ ಹಾಗೂ ನಾಲ್ವರು ಮಕ್ಕಳು ಕಾಣಿಸಲಿಲ್ಲ. ವಿಜಯಪುರದಲ್ಲಿರುವ ಮಗ ತಿಪ್ಪರಾಯನ ಶಾಲೆಗೆ ತೆರಳಿ ವಿಚಾರಿಸಿದಾಗ, ಶೋಭಾ ಆತನನ್ನೂ ಕರೆದುಕೊಂಡು ಹೋಗಿದ್ದಾರೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.
ನಂತರ ತೊರವಿ ಹಾಗೂ ವಿಜಯಪುರ ನಗರ ಸೇರಿ ವಿವಿಧೆಡೆ ಹುಡುಕಾಡಿದರೂ ಪತ್ನಿ ಹಾಗೂ ಐವರು ಮಕ್ಕಳು ಪತ್ತೆಯಾಗಿಲ್ಲ. ಹೀಗಾಗಿ ಕಾಣೆಯಾಗಿರುವ ಪತ್ನಿ ಶೋಭಾ ಹಾಗೂ ಐವರು ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ಮಲ್ಲಿಕಾರ್ಜುನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಆ ಆರು ಜನರೂ ಶವವಾಗಿ ಪತ್ತೆಯಾಗಿದ್ದು ಬಂಧು-ಬಳಗದ ಆಕ್ರಂದನ ಮುಗಿಲು ಮುಟ್ಟಿದೆ.