ಹಾಜಬ್ಬ ಸಹಿತ ಮೂವರಿಗೆ ಗೌರವ ಡಾಕ್ಟರೇಟ್

 ಅಕ್ಷರ ಸಂತ ಹರೇಕಳ ಹಾಜಬ್ಬ, ಯಕ್ಷಗಾನ ಕಲಾವಿದ ಸೂರಿಕುಮೇರು ಕೆ.ಗೋವಿಂದ ಭಟ್,  ದೈವ ನರ್ತಕ ರವೀಶ್ ಪಡುಮಲೆ.
ಅಕ್ಷರ ಸಂತ ಹರೇಕಳ ಹಾಜಬ್ಬ, ಯಕ್ಷಗಾನ ಕಲಾವಿದ ಸೂರಿಕುಮೇರು ಕೆ.ಗೋವಿಂದ ಭಟ್, ದೈವ ನರ್ತಕ ರವೀಶ್ ಪಡುಮಲೆ.
Published on
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 44ನೇ ಘಟಿಕೋತ್ಸವ ಮಾ.28ರಂದು ಬೆಳಗ್ಗೆ 11ಕ್ಕೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗವಹಿಸಲಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. 162 ಪಿಎಚ್.ಡಿ, 56 ಚಿನ್ನದ ಪದಕ, 57 ನಗದು ಬಹುಮಾನ ಪ್ರದಾನ ಮಾಡಲಾಗುವುದು. 147 ರ‌್ಯಾಂಕ್ ಘೋಷಿಸಲ್ಪಟ್ಟಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ದಾಖಲಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಗಮನಾರ್ಹವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ 22,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 19,568(ಶೇ.88.74) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕ(ಯುಜಿ) ವಿಭಾಗದಲ್ಲಿ 18,825ರಲ್ಲಿ 16,541(ಶೇ.87.87), ಸ್ನಾತಕೋತ್ತರ(ಪಿಜಿ) ವಿಭಾಗದಲ್ಲಿ 3,225ರಲ್ಲಿ 3,027(ಶೇ.93.86) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಆಡಳಿತ ಕುಲಸಚಿವ ಗಣೇಶ್ ಸಂಜೀವ್, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ನಾಗಪ್ಪ ಗೌಡ, ಹಣಕಾಸು ಅಧಿಕಾರಿ ಪ್ರೊ.ಪಂಚಲಿಂಗ ಸ್ವಾಮಿ ಇದ್ದರು.
ಹಾಜಬ್ಬ ಸಹಿತ ಮೂವರಿಗೆ ಗೌರವ ಡಾಕ್ಟರೇಟ್
ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ, ಯಕ್ಷಗಾನ ಕಲಾವಿದ ಸೂರಿಕುಮೇರು ಕೆ.ಗೋವಿಂದ ಭಟ್(ಮರಣೋತ್ತರ), ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಕಲಾವಿದ ಕೆ.ಗೋವಿಂದ ಭಟ್ ಅವರ ಪದವಿಯನ್ನು ಏ.13ರಂದು ಅವರ ನಿವಾಸದಲ್ಲಿ ಪ್ರದಾನ ಮಾಡಲಾಗುವುದು. ದೈವ ನರ್ತಕರೊಬ್ಬರಿಗೆ ಮಂಗಳೂರು ವಿವಿಯಿಂದ ಇದೇ ಮೊದಲ ಬಾರಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.

ಆರ್ಥಿಕ ಶಿಸ್ತು, ವೆಚ್ಚಗಳಿಗೆ ಕಡಿವಾಣ

ವಿವಿಯ ಸಂಪನ್ಮೂಲ ಕ್ರೋಡೀಕರಣ ಹಾಗೂ ಹಂಚಿಕೆಯಲ್ಲಿ ಆರ್ಥಿಕ ಶಿಸ್ತು ತರಲಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಇದರಿಂದಾಗಿ ಉದ್ಯೋಗಿಗಳಿಗೆ ಸಕಾಲದಲ್ಲಿ ವೇತನ ಪಾವತಿ ಸಾಧ್ಯವಾಗುತ್ತಿದೆ. ಪದವಿ ಅಂಕಪಟ್ಟಿಯನ್ನೂ ವಿವಿ ವತಿಯಿಂದಲೇ ನೀಡಲಾಗುತ್ತಿದೆ. ವಿವಿಗೆ ಕೇಂದ್ರ ಪಿಎಂ ಉಷಾ ಯೋಜನೆಯಡಿ 20 ಕೋಟಿ ರೂ. ಬಿಡುಗಡೆಯಾಗಿದೆ. ಇದನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು. 7 ಕೋಟಿ ರೂ.ನಲ್ಲಿ ಎಐ ಲ್ಯಾಬ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಬಾರಿ 162 ಮಂದಿ ಪಿಎಚ್.ಡಿ ಮಾಡುತ್ತಿದ್ದಾರೆ. ಪಿಎಚ್.ಡಿ ಬೋಧಕರಾಗಲು ಕಾಯಂ ಉಪನ್ಯಾಸಕರ ಕೊರತೆ ಇದೆ. ವಿವಿ ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರು ಪಿಎಚ್.ಡಿ ಗೈಡ್ ಆಗುವಂತಿಲ್ಲ. ಹಾಗಾಗಿ ಸರ್ಕಾರಿ ಕಾಲೇಜುಗಳಲ್ಲಿ ಯುಜಿಸಿ ವೇತನ ಪಡೆಯುತ್ತಿರುವ ಕನಿಷ್ಠ 10 ವರ್ಷ ಉಪನ್ಯಾಸಕರಾಗಿ ಅನುಭವ ಇರುವವರಿಗೆ ಗೈಡ್ ಆಗಲು ಅವಕಾಶ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ತುಳು ಹಾಗೂ ಕೊಂಕಣಿ ಭಾಷೆಯಲ್ಲಿ ಕೋರ್ಸ್ ಆರಂಭಕ್ಕೆ ಸರ್ಕಾರದಿಂದ ಅಧಿಕೃತ ಅನುಮತಿ ಸಿಗಬೇಕು. ಅದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವಿವಿಯ 3 ಹಾಸ್ಟೆಲ್‌ಗಳಲ್ಲಿ 700 ವಿದ್ಯಾರ್ಥಿಗಳಿದ್ದು, ಅಡುಗೆಗೆ ಸೌದೆ ಬಳಕೆ ಮಾಡಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಅಭಾವವಿದ್ದರೂ, ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net