ಹೊನ್ನಾರು ರಂಗೋತ್ಸವ

ಹೊನ್ನಾರು ರಂಗೋತ್ಸವ ತಂಡ
ಹೊನ್ನಾರು ರಂಗೋತ್ಸವ ತಂಡ
Published on

ಪ್ರಮುಖ ಮುಖ್ಯಾಂಶಗಳು

  • * ರವೀಂದ್ರ ಕಲಾಕ್ಷೇತ್ರದಲ್ಲಿ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ
  • * 5 ದಶಕಗಳ ಪೂರೈಸಿಕದ ಆರು ರಂಗ ತಂಡಗಳಿಂದ ಆಯೋಜನೆ
ಬೆಂಗಳೂರು: ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ಐದು ದಶಕಗಳಿಗೂ ಅಧಿಕ ಸೇವೆ ನೀಡುತ್ತಾ ಬಂದಿರುವ 6 ರಂಗ ತಂಡಗಳು ತಮ್ಮ ಸುವರ್ಣ ಸಂಭ್ರಮದ ಅಂಗವಾಗಿ ಫೆ. 21ರಿಂದ 26ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹೊನ್ನಾರು ರಂಗೋತ್ಸವ’ ನಾಟಕ ಪ್ರದರ್ಶನ ಆಯೋಜಿಸಿವೆ.
ರಂಗಸಂಪದ, ಸಮುದಾಯ, ಕಲಾ ಗಂಗೋತ್ರಿ, ಸ್ಪಂದನ, ನಟರಂಗ ಮತ್ತು ಬೆನಕ ಈ ಆರು ರಂಗತಂಡಗಳು ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ತಮ್ಮ ಕೊಡುಗೆಯ 50 ವರ್ಷಗಳ ಸಂಭ್ರದಲ್ಲಿದ್ದು, ಅದರ ನೆನಪಿಗಾಗಿ ಶನಿವಾರ ಆರಂಭವಾಗಲಿರುವ ‘ಹೊನ್ನಾರು ರಂಗೋತ್ಸವ’ದಲ್ಲಿ ಆರು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಉತ್ಸವದ ಸಂಚಾಲಕ ಹಾಗೂ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರು ದಿನಗಳ ಕಾಲ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಇರಲಿದ್ದು, ಬುಕ್ ಮೈ ಶೋನದಲ್ಲಿ ಟಿಕೆಟ್ ಲಭ್ಯವಿದೆ ಎಂದು ತಿಳಿಸಿದರು.
1970ರ ದಶಕದಲ್ಲಿ ಸ್ಥಾಪಿತವಾದ ಈ ತಂಡಗಳು ತುಘಲಕ್ (ನಟರಂಗ), ಬೆಲ್ಚಿ (ಸಮುದಾಯ), ಲಕ್ಷಪತಿ ರಾಜನ ಕಥೆ (ಸ್ಪಂದನ), ಪಂಪ ಭಾರತ (ಸಮುದಾಯ), ಸತ್ತ್ತವರ ನೆರಳು (ಬೆನಕ), ಮುಖ್ಯಮಂತ್ರಿ (ಕಲಾ ಗಂಗೋತ್ರಿ) ಮುಂತಾದ ನೆಲಮೂಲ ನಾಟಕಗಳನ್ನು ನಿರ್ಮಿಸಿವೆ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿವೆ. ಈ ತಂಡಗಳ ಮೂಲಕ ಸಿ.ಆರ್. ಸಿಂಹ, ಲೋಕೇಶ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಮುಂತಾದ ಅಪ್ರತಿಮ ನಟರು ಕನ್ನಡ ರಂಗಭೂಮಿಗೆ ದಕ್ಕಿದರು. ಇಲ್ಲಿ ಅಭಿನಯಿಸಿದ ಹಲವಾರು ಕಲಾವಿದರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ರಂಗತಂಡಗಳ ಕೊಡುಗೆಯನ್ನು ಸ್ಮರಿಸಿದರು.

ರಂಗೋತ್ಸವ:

ಹೊನ್ನಾರು ರಂಗೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಫೆ.21ರಂದು ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಫೆ.26ರಂದು ಸಮಾರೋಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭಾಗವಹಿಸಲಿದ್ದಾರೆ. ಉತ್ಸವದಲ್ಲಿ ವಿವಿಧ ಕ್ಷೇತ್ರದ ದಿಗ್ಗರು, ಕಲಾವಿದರು ಹಾಗೂ ಕಲಾಸಕ್ತರು ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ರಂಗಭೂಮಿ ಪ್ರವರ್ಧಮಾನಕ್ಕೆ ತಂದ ರಂಗಭೂಮಿ ದಿಗ್ಗಜರಾದ ಬಿ.ವಿ. ಕಾರಂತ, ಆರ್. ನಾಗೇಶ್, ಬಿ. ಚಂದ್ರಶೇಖರ್, ಸಿ.ಜಿ. ಕೃಷ್ಣಸ್ವಾಮಿ, ಆದ್ಯಾರಂಗಾಚಾರ್, ಎಂ.ಎಸ್. ಸತ್ಯು, ಪ್ರಸನ್ನ ಇತರರು. ಅದೇ ರೀತಿ ಚಂದ್ರಶೇಖರ್ ಕಂಬಾರ, ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಎಚ್.ಎಸ್. ಶಿವಪ್ರಕಾಶ್ ಮೊದಲಾದವರು ತಮ್ಮ ಕೃತಿಗಳ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರಿಗೆ ಈ ರಂಗೋತ್ಸವವನ್ನು ಅರ್ಪಿಸಿ, ರಂಗ ಗೌರವ ಸಲ್ಲಿಸಲಾಗುವುದು. ರಂಗೋತ್ಸವ ನಂತರ ಅದರ ಕುರಿತು ಸ್ಮರಣ ಸಂಚಿಕೆ ಹೊರತರಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಲಾವಿದರಾದ ಬಿ.ಜಯಶ್ರೀ, ಉಮಾಶ್ರೀ, ಗಿರಿಜಾ ಲೋಕೇಶ್, ಬಿ.ವಿ. ರಾಜಾರಾಂ, ಟಿ.ಎಸ್. ನಾಗಾಭರಣ, ವಿ.ಎಂ. ನಾಗೇಶ್, ಶಶಿಧರ್ ಬಾರೀಘಾಟ್ ಇದ್ದರು.
"

ನಾಟಕ ಪ್ರದರ್ಶನದ ವಿವರ: ಫೆ. 21: ರಂಗಸಂಪದವು ಉಮಾಶ್ರೀ ನಟಿಸಿರುವ ‘ಶರ್ಮಿಷ್ಠೆ’ ನಾಟಕ ಪ್ರಸ್ತುತಪಡಿಸಲಿದೆ. ಡಾ. ಬೇಲೂರು ರಘುನಂದನ್ ರಚನೆ, ಚದಂಬರ ರಾವ್ ಜಂಬೆ ನಿರ್ದೇಶನ ಹಾಗೂ ಅನೂಷ್ ಶೆಟ್ಟಿ ಸಂಗೀತ ಸಂಯೋಜನೆ ಇದೆ. ಫೆ.22: ಸಮುದಾಯ ತಂಡದಿಂದ ‘ಭಗವಂತನ ಮರಣ’ ನಾಟಕ ಪ್ರದರ್ಶನ. ಮೀರಾ ಅವರ ಕಥೆಯನ್ನು ಕನ್ನಡಕ್ಕೆ ಕೆ.ಪ್ರಭಾಕರ್ ಅನುವಾದಿಸಿದ್ದಾರೆ. ಸಂಗೀತ ಮತ್ತು ನಿರ್ದೇಶನದ ಹೊಣೆಯನ್ನು ಸ್ಯಾಮ್ ಕುಟ್ಟಿ ಪಟ್ಟಂಕರಿ ಹೊತ್ತಿದ್ದಾರೆ.ಫೆ.23: ನಟರಂಗ ತಂಡದಿಂದ ‘ನೀರಗನ್ನಡಿ’ ನಾಟಕ ಪ್ರದರ್ಶನ. ಡಾ. ಕೆ.ವೈ. ನಾರಾಯಣಸ್ವಾಮಿ ರಚನೆ, ಬಿ. ಸುರೇಶ್ ನಿರ್ದೇಶನ ಮತ್ತು ಎಂ.ಡಿ. ಪಲ್ಲವಿ ಅವರ ಸಂಗೀತವಿದೆ. ಫೆ.24: ಕಲಾ ಗಂಗೋತ್ರಿ ತಂಡದಿಂದ ‘MONEYಯೇ ದೇವರು’ ನಾಟಕ ಪ್ರದರ್ಶನ. ಅರಿಸ್ಟೋ ಫಿನೀಸ್ ಅವರ ಕೃತಿಯನ್ನು ಎಚ್.ಎಸ್. ಉಮೇಶ್ ಕನ್ನಡಕ್ಕೆ ಅನುವಾದಿಸಿದ್ದು, ಹರೀಶ್ ಆತ್ರೇಯ ರಂಗ ರೂಪ ನೀಡಿದ್ದಾರೆ. ನಿರ್ದೇಶನ ಡಾ. ಬಿ.ವಿ. ರಾಜಾರಾಂ ಮತ್ತು ಸಂಗೀತ ಪ್ರವೀಣ್ ಅವರದು.ಫೆ.25: ಸ್ಪಂದನ ತಂಡದಿಂದ ‘ಬೆಳಗಿನ ಕನಸು’ ನಾಟಕ ಪ್ರದರ್ಶನ. ಎಚ್.ಎಸ್. ವೆಂಕಟೇಶಮೂರ್ತಿ ರಚನೆಯ, ರೂಮಿ ಹರೀಶ್ ಸಂಗೀತ ಮತ್ತು ಬಿ.ಜಯಶ್ರೀ ನಿರ್ದೇಶನದಲ್ಲಿ ಮೂಡಿಬರಲಿದೆ.ಫೆ.26: ಬೆನಕ ತಂಡದಿಂದ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ. ಡಾ. ಚಂದ್ರಶೇಖರ ಕಂಬಾರ ರಚಿಸಿ ಸಂಗೀತ ನೀಡಿರುವ ಬಿ.ವಿ. ಕಾರಂತ ನಿರ್ದೇಶನದ ನಾಟಕವನ್ನು ಟಿ.ಎಸ್. ನಾಗಾಭರಣ ಮರು ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net