ತೆರಕಣಾಂಬಿಯಲ್ಲಿ ಹಿಂದೂ ಸಮಾಜೋತ್ಸವ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡರು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡರು.
Published on
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಹಿಂದೂ ಸಮಾಜೋತ್ಸವ ನೂರಾರು ಕಾರ್ಯಕರ್ತರು ಪಾಲ್ಗೊಂಡರು.

ಗ್ರಾಮದ ಲಕ್ಷ್ಮಿವರದರಾಜಸ್ವಾಮಿ ದೇವಾಲಯದ ಬಳಿಯಿಂದ ಅಲಂಕೃತ ವಾಹನದಲ್ಲಿ ಭಾರತಮಾತೆಯ ಭಾವಚಿತ್ರವನ್ನು ಇರಿಸಿ ಮಂಗಳವಾದ್ಯಗಳು ಹಾಗೂ ನಂಧೀಧ್ವಜದೊಂದಿಗೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತ ಜಿ.ನಂದೀಶ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮದ ಮೇಲೆ ನಿರಂತರ ದಾಳಿಗಳಾದರೂ ಅಳಿಯದೆ ಇನ್ನೂ ಉಳಿದಿದೆ. ಹಿಂದೂ ಧರ್ಮದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಲು ಹಾಗೂ ಹಿಂದುತ್ವದ ಮೂಲತತ್ವಗಳು ಹಾಗೂ ಅವುಗಳ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಿಂದೂ ಸಮಾಜೋತ್ಸವ ಆಚರಿಸಲಾಗುತ್ತಿದೆ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದಿಂದ ಜಗತ್ತಿಗೆ ಹಿಂದೂಗಳ ಶಕ್ತಿಯ ಅನಾವರಣವಾಗಿದೆ. ಹಿಂದೂ ಧರ್ಮ ಭಾರತದ ಆತ್ಮವಾಗಿದ್ದು, ಇದರ ನಾಶದಿಂದ ದೇಶವೇ ನಾಶವಾಗುತ್ತದೆ ಎಂಬ ಬಗ್ಗೆ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಹಾಗೂ ಆದಿಚುಂಚನಗಿರಿ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.

ರಾಷ್ಟ್ರೀಯ ಸೇವಾ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದ 5 ಸಾವಿರ ಸ್ಥಳಗಳಲ್ಲಿ ರಾಜ್ಯದ 200 ಕಡೆಗಳಲ್ಲಿ ಹಿಂದೂ ಸಮಾಜೋತ್ಸವ ಆಚರಿಸಲಾಗುವುದು. ಸದ್ಯ ನೆರೆಹೊರೆಯ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿದ್ದು, ಈ ಬಗ್ಗೆ ಹಿಂದೂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಮೂಲಕ ಹಿಂದೂಗಳ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸಿ ಜನಾಭಿಪ್ರಾಯ ಮೂಡಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ದೇಪಾಪುರ ಭಿಕ್ಷದ ಮಠಾಧ್ಯಕ್ಷರಾದ ಬಸವಣ್ಣ ಸ್ವಾಮೀಜಿ, ಹಿರಿಯ ಮುಖಂಡ ರವೀಂದ್ರ, ಹಿಂದೂ ಸಂಘಟನೆಯ ನಾಗೇಶ್, ನಂದೀಶ್, ಭಗತ್ ಸಿಂಗ್ ವೇದಿಕೆಯ ಸದಸ್ಯರು, ಅಕ್ಕಪಕ್ಕದ ಗ್ರಾಮಗಳಿಂದ ಬಂದಿದ್ದ ಹಿಂದೂ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net