ಬನಹಟ್ಟಿಯಿಂದ ಬಾಗಲಕೋಟೆವರೆಗೂ ಪಾದಯಾತ್ರೆ

ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೂರಾರು ಬಾಗಲಕೋಟೆ ಜಿಲ್ಲಾಡಳಿತ ಭವನದ ವರೆಗೂ ಪಾದಯಾತ್ರೆ ನಡೆಸಿ, ಸೋಮವಾರ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೂರಾರು ಬಾಗಲಕೋಟೆ ಜಿಲ್ಲಾಡಳಿತ ಭವನದ ವರೆಗೂ ಪಾದಯಾತ್ರೆ ನಡೆಸಿ, ಸೋಮವಾರ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಗಳಿಗೆ ಮನವಿ
  • ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹ
  • ಜಿಲ್ಲಾಡಳಿತ ಭವನದ ಎದುರು ಧರಣಿ
ಬಾಗಲಕೋಟೆ: ಬನಹಟ್ಟಿ ತಾಲೂಕಿನ ಆಡಳಿತ ಭವನ (ಪ್ರಜಾಸೌಧ)ವನ್ನು ಬನಹಟ್ಟಿ ನಗರದ ಕಾಗವಾಡ-ಕಲಾದಗಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕಂದಾಯ ಇಲಾಖೆಯ ಸಿಟಿಎಸ್ ನಂ. 8822ರ 3 ಎಕರೆ 25 ಗುಂಟೆ ಜಮೀನಿನಲ್ಲಿ ನಿರ್ಮಿಸಬೇಕು ಎಂದು ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಬನಹಟ್ಟಿ ನಗರದಲ್ಲಿ 24 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸೋಮವಾರ ಜಿಲ್ಲಾಡಳಿತ ಭವನಕ್ಕೆ ವಿಸ್ತರಿಸಿತು. ಕಳೆದ ಮೂರು ದಿನಗಳ ಹಿಂದೆ ಶನಿವಾರ ಬನಹಟ್ಟಿಯಿಂದ 90 ಕಿ.ಮೀ. ವರೆಗೂ ಬಾಗಲಕೋಟೆ ಜಿಲ್ಲಾಡಳಿತ ಭವನದ ವರೆಗೂ ನೂರಾರು ಜನರು ಪಾದಯಾತ್ರೆ ಕೈಗೊಂಡು ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಒಳಗೆ ಪ್ರವೇಶಿಸಲು ಅವಕಾಶ ನೀಡದೇ ಪ್ರವೇಶ ದ್ವಾರ ಬಂದ್ ಮಾಡಿದ್ದರಿಂದ ದ್ವಾರದ ಎದುರು ಧರಣಿ ನಡೆಸಿದರು.
ಪ್ರಸ್ತುತ ರಬಕವಿ ಪಟ್ಟಣದ ಕಾರ್ಯನಿರ್ವಾಹಕ ಅಭಿಯಂತರ ಹೆಸರಿನಲ್ಲಿರುವ ಸಿಟಿಎಸ್ ನಂ.80ರ 3 ಎಕರೆ 18 ಗುಂಟೆ ಜಮೀನನ್ನು ಪ್ರಜಾಸೌಧ ನಿರ್ಮಾಣಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಆದೇಶವನ್ನು ರದ್ದುಪಡಿಸಿ, ಬನಹಟ್ಟಿಯಲ್ಲಿರುವ ಜಮೀನಿನಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಆದೇಶ ನೀಡಬೇಕು ಎಂದು ಸಮಿತಿ ಒತ್ತಾಯಿಸಿತು.
ಬನಹಟ್ಟಿ ತಾಲೂಕಿನ ಪ್ರಮುಖ ವಾಣಿಜ್ಯ ಹಾಗೂ ಜವಳಿ ಕೇಂದ್ರವಾಗಿದ್ದು, ನ್ಯಾಯಾಲಯ ಸಂಕೀರ್ಣ, ಪೊಲೀಸ್ ಕಚೇರಿ, ಉಪಖಜಾನೆ, ಸರ್ಕಾರಿ ಆಸ್ಪತ್ರೆ, ಬ್ಯಾಂಕ್‌ಗಳು ಸೇರಿ ಹಲವು ಪ್ರಮುಖ ಸಂಸ್ಥೆಗಳು ಇಲ್ಲಿವೆ. ಬನಹಟ್ಟಿಯ ಸಿಟಿಎಸ್ ನಂ.8822ರ ಜಮೀನಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಹಿಂದೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದ್ದರೂ ಯಾವುದೇ ಆಕ್ಷೇಪಣೆಗಳು ಬಂದಿರಲಿಲ್ಲ.
ಇದಕ್ಕೆ ವಿರುದ್ಧವಾಗಿ ರಬಕವಿಯ ಜಮೀನಿನಲ್ಲಿ ಪ್ರಜಾಸೌಧ ನಿರ್ಮಿಸಿದರೆ ಅಲ್ಲಿರುವ ಸರ್ಕಾರಿ ಕಟ್ಟಡಗಳು, ವಸತಿಗೃಹಗಳು, ಗಿಡಮರಗಳು ಹಾಗೂ ಹನುಮಂತ ದೇವಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರಿ ಆಸ್ತಿಗೆ ನಷ್ಟವಾಗುತ್ತದೆ. ಜೊತೆಗೆ ಪರಿಸರ ಮತ್ತು ಧಾರ್ಮಿಕ ವಿಚಾರಗಳಲ್ಲಿಯೂ ಸಮಸ್ಯೆ ಉಂಟಾಗಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
24 ದಿನಗಳಿಂದ ಸರದಿ ಸತ್ಯಾಗ್ರಹ: ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ಕಳೆದ 24 ದಿನಗಳಿಂದ ಸರದಿ ಸತ್ಯಾಗ್ರಹ ನಡೆಸಲಾಗುತ್ತಿದೆ. ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಬನಹಟ್ಟಿ ನಗರವೇ ಈ ವಿಚಾರದಲ್ಲಿ ಒಟ್ಟಾಗಿ ನಿಂತಿದೆ. ಸರ್ವ 48 ಸಮಾಜದವರು ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಹಾಗೂ ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಬನಹಟ್ಟಿ ನಗರ ಅಭಿವೃದ್ಧಿ ಹೋರಾಟ ಸಮಿತಿ ಎಚ್ಚರಿಸಿದೆ.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ಈ ಬಗ್ಗೆ ರಬಕವಿ-ಬನಹಟ್ಟಿ ಎರಡೂ ಕಡೆಯವರನ್ನು ಸೇರಿಸಿ ಸಭೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಒಳಗೊಂಡಂತೆ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಂಡು ಎಲ್ಲರಿಗೂ ಒಮ್ಮತ ಮೂಡಿಸುವ ಕೆಲಸ ಮಾಡುತ್ತೇವೆ. ಉಪವಾಸ ಸತ್ಯಾಗ್ರಹ ಆರಂಭಿಸಬಾರದು ಎಂದು ಮನವಿ ಮಾಡಿದರು.
ಆದರೆ, ಸಮಸ್ಯೆ ಬಗೆಹರಿಯದ ಹೊರತು ಪ್ರತಿಭಟನೆ ಕೈಬಿಡಲ್ಲ ಹಾಗೆಯೇ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಪ್ರತಿಭಟನಾಕಾರರು ಸ್ಪಷ್ಟವಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net