ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೈಡ್ರಾಮಾ: ರಸ್ತೆಗೆ ಅಡ್ಡಲಾಗಿ ಕುಳಿತು ಮುಸ್ಲಿಂ ಯುವಕರು, ಮಹಿಳೆಯರ ಧರಣಿ!

ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೈಡ್ರಾಮಾ
ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೈಡ್ರಾಮಾ
Published on
ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆಯು ಇಸ್ಲಾಂಪೇಟೆ ಪ್ರವೇಶಿಸಬಾರದೆಂದು ಆಗ್ರಹಿಸಿ ಮುಸ್ಲಿಂ ಯುವಕರು ಹಾಗೂ ಮಹಿಳೆಯರು ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಪ್ರತಿವರ್ಷದಂತೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯು ಇಸ್ಲಾಂಪೇಟೆ ಮಾರ್ಗವಾಗಿಯೇ ತೆರಳುತ್ತಿತ್ತು. ಆದರೆ, ಕಳೆದ ವರ್ಷ ಎರಡೂ ಧರ್ಮಗಳ ಹಬ್ಬಗಳು ಏಕಕಾಲಕ್ಕೆ ಬಂದಿದ್ದರಿಂದ, ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ಮೆರವಣಿಗೆಯ ಮಾರ್ಗವನ್ನು ಬದಲಾಯಿಸಿದ್ದರು. ಈ ವರ್ಷ ಎಂದಿನಂತೆ ಅದೇ ಮಾರ್ಗದಲ್ಲಿ ಮೆರವಣಿಗೆ ತೆರಳುತ್ತಿದ್ದಾಗ, ದಿಢೀರನೆ ಮುಸ್ಲಿಂ ಯುವಕರು ಹಾಗೂ ಮಹಿಳೆಯರು ಅಡ್ಡಿಪಡಿಸಿ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದರು.
ಪ್ರಾರಂಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಕೃಷ್ಣನಾಯ್ಕ ಅವರು ಸ್ಥಳಕ್ಕೆ ಭೇಟಿ ನೀಡಿ ಎರಡೂ ಸಮುದಾಯಗಳ ಮುಖಂಡರೊಂದಿಗೆ ಸಂಧಾನ ಮಾತುಕತೆ ನಡೆಸಿದರು. ಆದರೆ, ಇದಕ್ಕೆ ಸಮ್ಮತಿಸದ ಗಣೇಶೋತ್ಸವ ಸಮಿತಿಯವರು ನಿಗದಿತ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕೆಂದು ಪಟ್ಟುಹಿಡಿದರು. ಅಂತಿಮವಾಗಿ ಪೊಲೀಸರು ಎರಡೂ ಗುಂಪುಗಳ ಯುವಕರ ಮನವೊಲಿಸಿ, ಇಸ್ಲಾಂಪೇಟೆ ಬದಲಿಗೆ ಬೇರೆ ಮಾರ್ಗದಲ್ಲಿ ಮೆರವಣಿಗೆ ಸಾಗುವಂತೆ ಸೂಚಿಸಿದ ಕಾರಣ ಆಯೋಜಕರು ಮಾರ್ಗ ಬದಲಾಯಿಸಿ ಮೆರವಣಿಗೆಯನ್ನು ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net