ಮಧ್ಯಂತರ ಜೀವನಾಂಶ ಪಡೆಯುವ ಹಕ್ಕು ಪತ್ನಿಗಿದೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ವಿವಾಹ ಕಾಯ್ದೆ ಅಡಿ ಹೈಕೋರ್ಟ್​ ಸ್ಪಷ್ಟನೆ
  • ಪತಿ ಸಲ್ಲಿಸಿದ ಅರ್ಜಿ ವಜಾ
ಬೆಂಗಳೂರು: ವಿಚ್ಚೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ ಕಾನೂನು ಹೋರಾಟ ನಡೆಸಲು ಮತ್ತು ಜೀವನ ನಿರ್ವಹಣೆಗಾಗಿ ಮಧ್ಯಂತರ ಜೀವನಾಂಶವನ್ನು ಪಡೆಯುವುದು ಪತ್ನಿಯ ಹಕ್ಕಾಗಿದೆ ಎಂದು ಹೈಕೋರ್ಟ್​ ಹೇಳಿದೆ.
ಪತ್ನಿಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಹಾಸನದ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಡಾ.ಕೆ. ಮನ್ಮಥರಾವ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸ್ಪಷ್ಟನೆ ನೀಡಿದೆ.
ಪತ್ನಿಗೆ ಯಾವುದೇ ಸ್ವತಂತ್ರ ಆದಾಯವಿಲ್ಲದ ಕಾರಣ ಆಕೆಗೆ ಆರ್ಥಿಕ ನೆರವು ನೀಡುವುದು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್​ 24ರ ಅಡಿಯಲ್ಲಿ ಅನಿವಾರ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಪತಿಯ ಆದಾಯವು 47 ಸಾವಿರ ರೂ. ಗೂ ಅಧಿಕ ಇದೆ ಎಂದು ಪರಿಗಣಿಸಿ, ಮಾಸಿಕ 10 ಸಾವಿರ ರೂ. ಜೀವನಾಂಶ ನೀಡುವಂತೆ ನಿರ್ದೇಶನ ನೀಡಿದೆ.
ಪತ್ನಿಯು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಪೆಟ್ಟಿಶಾಪ್​ ಕೂಡ ನಡೆಸುತ್ತಿದ್ದಾರೆ. ತಾನು ಅಂಗವಿಕಲನಾಗಿದ್ದು, ವಯಸ್ಸಾದ ತಾಯಿಯನ್ನು ಕೂಡ ನೋಡಿಕೊಳ್ಳಬೇಕಿದೆ. ಆದ್ದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಪತಿ ವಾದಿಸಿದ್ದರು. ಈ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಪತಿಯ ಒಟ್ಟು ಆದಾಯಯಕ್ಕೆ ಹೋಲಿಸಿದರೆ ಜೀವನಾಂಶದ ಪ್ರಮಾಣ ಹೆಚ್ಚಾಗಿಲ್ಲ ಎಂದು ತೀರ್ಪಿನಲ್ಲಿ ಹೇಳಿದ್ದು, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಪತ್ನಿಯ ಹಿಂದಿನ ವಿವಾಹದ ಬಗ್ಗೆ ಹೊರಿಸಲಾದ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಆದೇಶದಲ್ಲಿ ಹೇಳಿದೆ. #high court

ಪ್ರಕರಣದ ಹಿನ್ನಲೆ

ಹಾಸನ ಮೂಲದ ದಂಪತಿಯು 2020ರಲ್ಲಿ ವಿವಾಹವಾಗಿದ್ದರು. ದಂಪತಿಗಳ ನಡುವಿನ ಕಲಹದಿಂದ ವಿಚ್ಚೇದನ ಕೋರಿ ಪತಿ ಹಾಸನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯು ತನ್ನ ಮೇಲೆ ಕ್ರೌರ್ಯ ಎಸಗುತ್ತಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ನಡುವೆ ಪತ್ನಿಯು ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯ ಮಾಸಿಕ 10 ಸಾವಿರ ರೂ. ಜೀವನಾಂಶ ನಿಗದಿಪಡಿಸಿತ್ತು. ಇದನ್ನು ಪತಿ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net