ಅಪಘಾತ ಪರಿಹಾರಕ್ಕೆ ಆರ್​ಸಿ ಮಾಲೀಕನೇ ಹೊಣೆ| High court

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 47 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್​ ಆದೇಶ
  • ಆರ್​ಸಿ ಅಲ್ಲಿ ಹೆಸರು ಬದಲಾವಣೆ ಅಗತ್ಯ
ಬೆಂಗಳೂರು: ವಾಹನ ಮಾರಾಟವಾಗಿದ್ದರೂ, ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರದಲ್ಲಿ (ಆರ್​ಸಿ) ಮಾಲೀಕತ್ವ ವರ್ಗಾವಣೆಯಾಗುವ ತನಕ ಅಪಘಾತ ಸಂಬಂಧಿತ ಹೊಣೆಗಾರಿಕೆಗಳು ನೋಂದಾಯಿತ ಮಾಲೀಕರದ್ದೇ ಆಗಿರುತ್ತದೆ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಮಾರತಹಳ್ಳಿಯ ಸುನಿಲ್​ ಕುಮಾರ್​ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್​.ಜಿ. ಪಂಡಿತ್​ ಮತ್ತು ಕೆ.ವಿ. ಅರವಿಂದ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ 47.15 ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಹಿಂದೆ ಸುಪ್ರೀಂಕೋರ್ಟ್​ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠವು, ಆರ್​ಸಿಯಲ್ಲಿ ಹೆಸರು ಬದಲಾಗುವ ತನಕ ನೋಂದಾಯಿತ ಮಾಲೀಕನೇ ಕಾನೂನುಬದ್ಧ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ.
ಸುನೀಲ್​ ಕುಮಾರ್​ ತಮ್ಮ ಬೈಕ್​ ಅನ್ನು ಶಬ್ರೇಜ್​ ಎಂಬುವರಿಗೆ ಮಾರಾಟ ಮಾಡಿದ್ದರು. ಈ ಬೈಕ್​ ಡಿಕ್ಕಿಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಹನುಮಂತ ಎಂಬುವರು 2020ರ ಜೂ.18ರಂದು ಮೃತರಾಗಿದ್ದರು. ಅವರ ಕುಟುಂಬ ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು.
ವಿಮಾ ದಾಖಲೆಗಳಲ್ಲಿನ ಸಮಸ್ಯೆಯಿಂದಾಗಿ ಮಾಲೀಕರೇ ಪರಿಹಾರ ವಿತರಿಸುವಂತೆ ಆದೇಶ ಮಾಡಿದ್ದ ನ್ಯಾಯಮಂಡಳಿ 33 ಲಕ್ಷ ರೂ. ಪರಿಹಾರ ನಿಗದಿಪಡಿಸಿತ್ತು. ಅದನ್ನು ಪಾವತಿಸುವಂತೆ ಸುನಿಲ್​ ಕುಮಾರ್​ ಮತ್ತು ಶಬ್ರೇಜ್​ ಅವರಿಗೆ ಆದೇಶಿಸಿತ್ತು. ಪರಿಹಾರ ಹೆಚ್ಚಳ ಕೋರಿ ಮೃತನ ಕುಟುಂಬದವರು ಹಾಗೂ ಆದೇಶ ಪ್ರಶ್ನಿಸಿ ಸುನಿಲ್​ ಮತ್ತು ಶಬ್ರೇಜ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಸುನಿಲ್​ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ಉಳಿದೆರಡು ಅರ್ಜಿಗಳನ್ನು ಪುರಸ್ಕರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net