ದ್ವೇಷ ಸಾಧನೆಗಾಗಿ ಸುಳ್ಳು ಪ್ರಕರಣಗಳು ಹೆಚ್ಚಳ| High court

High court
High court
Published on
ಬೆಂಗಳೂರು: ವೈಯಕ್ತಿಕ ದ್ವೇಷ ಸಾಧನೆಗಾಗಿ ಪತಿಯ ಕುಟುಂಬವನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರವೃತ್ತಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಹೈಕೋರ್ಟ್​ ಕಳವಳ ವ್ಯಕ್ತಪಡಿಸಿದೆ.
ವಿದೇಶದಲ್ಲಿ ನೆಲೆಸಿರುವ ನಾದಿನಿಯು ತನ್ನ ಅತ್ತೆ- ಮಾವನಿಗೆ ಕರೆ ಮಾಡಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣ ರದ್ದುಗೊಳಿಸುವಾಗ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅವಲೋಕನ ಮಾಡಿದೆ. ದೂರವಾಣಿ ಕರೆಗಳ ಮೂಲಕ ಕಿವಿಯೂದುತ್ತಿದ್ದಾರೆ ಎಂಬ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. 
ಮಹಿಳೆಗೆ 2022ರ ಜುಲೈನಲ್ಲಿ ವಿವಾಹವಾಗಿದ್ದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ ನಂತರ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಸುಬ್ರಮಣ್ಯಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಲ್ಲಿ ಲಕ್ಸೆಂರ್ಬಗ್​ನಿಂದ ಫೋನ್​ ಮಾಡಿ ಅತ್ತೆ, -ಮಾವನ ಕಿವಿಯೂದಿ ತನ್ನ ವಿರುದ್ಧ ಪ್ರಚೋದಿಸುತ್ತಿದ್ದಾರೆ ಎಂದು ನಾದಿನಿ ವಿರುದ್ಧವೂ ಆರೋಪ ಹೊರಿಸಲಾಗಿತ್ತು. ಇದನ್ನು ರದ್ದುಕೋರಿ ಹೈಕೋರ್ಟ್​ಗೆ ವಿದೇಶದಲ್ಲಿರುವ ಮಹಿಳೆ ಅರ್ಜಿ ಸಲ್ಲಿಸಿದ್ದರು. ತನಗೆ 2017ರಲ್ಲೇ ಮದುವೆಯಾಗಿದ್ದು, ಅಣ್ಣನ ಮದುವೆಗಿಂತ ಮುಂಚಿನಿಂದಲೂ ತಾನು ವಿದೇಶದಲ್ಲೇ ನೆಲೆಸಿರುವುದಾಗಿ ಮತ್ತು ತನ್ನನ್ನು ದ್ವೇಷ ಸಾಧನೆಗಾಗಿ ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದರು.
ಎಚ್ಚರಿಕೆ ಅಗತ್ಯ:
ಸುಳ್ಳು ಆರೋಪಗಳನ್ನು ಹೊರಿಸಿ ಪತಿಯ ಕುಟುಂಬಸ್ಥರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರವೃತ್ತಿಯ ಬಗ್ಗೆ ಎಚ್ಚರದಲ್ಲಿರಬೇಕು. ಇಲ್ಲವಾದಲ್ಲಿ ಅದು ಕಾನೂನಿನ ದುರುಪಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ. ಇಂತಹ ಪ್ರವೃತ್ತಿ ಹೆಚ್ಚಳವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್​ ಕೂಡ ಹಲವು ಪ್ರಕರಣಗಳಲ್ಲಿ ಅಭಿಪ್ರಾಯಪಟ್ಟಿದೆ ಎಂದು ಹೈಕೋರ್ಟ್​ ತೀರ್ಪಿನಲ್ಲಿ ಹೇಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net