ದೌರ್ಜನ್ಯ ಪ್ರಕರಣಗಳಲ್ಲಿ ಕೋರ್ಟ್​ಗಿದೆ ವಿವೇಚನಾಧಿಕಾರ| High court

ಹೈಕೋರ್ಟ್​
ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ವರು ಜಾತಿ ನಿಂದನೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
  • ಮೇಲ್ನೋಟಕ್ಕೆ ಸಾಕ್ಷ್ಯಗಳಿಲ್ಲ ಎಂದ ಹೈಕೋರ್ಟ್​
ಬೆಂಗಳೂರು: ದಲಿತ ವ್ಯಕ್ತಿ ಮತ್ತು ಆತನ ಸಹೋದರಿ ವಿರುದ್ಧ ಜಾತಿ ನಿಂದನೆ ಮಾಡಿ, ದೇವಸ್ಥಾನದಿಂದ ಹೊರಗೆ ಕಳುಹಿಸಿದ ಆರೋಪ ಎದುರಿಸುತ್ತಿರುವ ನಾಲ್ವರಿಗೆ ಹೈಕೋರ್ಟ್​ ತನ್ನ ವಿವೇಚನಾಧಿಕಾರ ಬಳಸಿ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರು ಗ್ರಾಮದ ಪ್ರಭಾ, ಕಾಂತಣ್ಣ, ಪುಟ್ಟೇಗೌಡ ಮತ್ತು ಪದ್ಮಾ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜಿ.ಎಸ್​. ಕಮಲ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಆರೋಪಿಗಳಿಗೆ ದೂರುದಾರರ ಜಾತಿಯ ಬಗ್ಗೆ ತಿಳಿದಿರಲಿಲ್ಲ ಎಂದ ಮೇಲೆ, ಅವರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವನ್ನು ಮೇಲ್ನೋಟಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನಲೆ:

ದೂರುದಾರರಾದ ಜಗದೀಶ್​ ಮತ್ತು ಅವರ ಸಹೋದರಿ ಫೆ.19ರಂದು ಸಂಜೆ 7.20ರಿಂದ 8ರ ಅವಧಿಯಲ್ಲಿ ಗ್ರಾಮದ ದೇವಸ್ಥಾನಕ್ಕೆ ತೆರಳಿದಾಗ, ದೇವಸ್ಥಾನದ ಅರ್ಚಕ ನಾರಾಯಣ ಗೌಡ ಮತ್ತು ಆರೋಪಿಗಳು, ಜಾತಿ ನಿಂದನೆ ಮಾಡಿ ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಈ ಇಡೀ ಟನೆಯನ್ನು ವಿಡಿಯೋ ಮಾಡಲಾಗಿದ್ದು, ಇದರ ಆಧಾರದಲ್ಲಿ ತುರುವೇಕೆರೆ ಪೊಲೀಸರು ಎಸ್​.ಸಿ&ಎಸ್​.ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿತ್ತು. ಇದರ ವಿರುದ್ಧ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 

ಅರ್ಜಿದಾರರ ವಾದವೇನಿತ್ತು?

ಅರ್ಜಿದಾರರ ಪರ ವಾದಿಸಿದ ವಕೀಲರು, ಆರೋಪಿಗಳು ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಸ್ಥಳಿಯ ನಿವಾಸಿಗಳಾಗಿದ್ದಾರೆ. ಅರ್ಚಕ ಮತ್ತು ದೂರುದಾರರ ನಡುವೆ ಜಗಳ ನಡೆಯುತ್ತಿರುವಾಗ ಇವರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದ್ದಾರೆಯೇ ಹೊರತು ಜಾತಿ ನಿಂದನೆ ಮಾಡಿಲ್ಲ. ವಿಡಿಯೋದಲ್ಲಿ ಮುಖ ಕಾಣಿಸಿದೆ ಎಂಬ ಮಾತ್ರಕ್ಕೆ ಆರೋಪಿಗಳನ್ನಾಗಿಸಿರುವುದು ಸರಿಯಲ್ಲ. ಅಲ್ಲದೆ, ಪ್ರಕರಣದ ಪ್ರಮುಖ ಆರೋಪಿ ಅರ್ಚಕನಿಗೆ ಈಗಾಗಲೇ ಜಾಮೀನು ಸಿಕ್ಕಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸರ್ಕಾರಿ ವಕೀಲರು ಜಾಮೀನು ನೀಡಬಾರದು ಎಂದು ವಾದಿಸಿದರು.
⚠️

ಸುಪ್ರೀಂ ತೀರ್ಪುಗಳ ಉಲ್ಲೇಖ 

ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಯಾವುದೇ ಗಂಭೀರ ಸಾಕ್ಷ$್ಯಗಳು ಕಂಡು ಬರುತ್ತಿಲ್ಲ. ದೌರ್ಜನ್ಯ ತಡೆ ಕಾಯ್ದೆ ಅಡಿ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಕಠಿನ ರ್ನಿಬಂಧವಿದೆ. ಆದರೆ, ಸಂತ್ರಸ್ತರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದಿರುವುದು ಕಾಯ್ದೆ ಅಡಿಯಲ್ಲಿ ಅಪರಾಧವಾಗುವುದಿಲ್ಲ. ದೌರ್ಜನ್ಯವು ಉದ್ದೇಶಪೂರ್ವಕವಾಗಿ ಜಾತಿ ಕಾರಣಕ್ಕಾಗಿಯೇ ನಡೆದಿರಬೇಕು ಮತ್ತು ಮೇಲ್ನೋಟಕ್ಕೆ ಅಪರಾಧ ನಡೆದಿರುವುದು ಕಂಡುಬರದಿದ್ದರೆ ನ್ಯಾಯಾಲಯಗಳು ತಮ್ಮ ವಿವೇಚನಾಧಿಕಾರ ಬಳಸಿ ಜಾಮೀನು ನೀಡಬಹುದು ಎಂಬ ಸುಪ್ರೀಂಕೋರ್ಟ್​ನ ಆದೇಶಗಳನ್ನು ತೀರ್ಪಿನಲ್ಲಿ ಉಲ್ಲೇಖಿಸಿ ಅರ್ಜಿ ಪುರಸ್ಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net