ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧದ ಆಕ್ಷೇಪಾರ್ಹ ಕಂಟೆಂಟ್​ ತೆರವಿಗೆ ಆದೇಶ| High court

Veerendra Heggade
Veerendra Heggade
Published on

ಪ್ರಮುಖ ಮುಖ್ಯಾಂಶಗಳು

  • ಒಂದು ವಾರದಲ್ಲಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ
ಬೆಂಗಳೂರು: ಧರ್ಮಸ್ಥಳದ ಧಮಾರ್ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಲಾದ ಆಕ್ಷೇಪಾರ್ಹ ಫೋಟೋ, ವಿಡಿಯೋ ಹಾಗೂ ಮಾನಹಾನಿಕರ ಕಂಟೆಂಟ್​ ಅನ್ನು ಒಂದು ವಾರದೊಳಗೆ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಶೀನಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ (ಮೇ 15) ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಎಸ್​.ಆರ್​. ಕೃಷ್ಣಕುಮಾರ್​ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಗೂಗಲ್​, ಮೆಟಾ (ಫೇಸ್​ಬುಕ್​), ವಾಟ್ಸ್​ಆ್ಯಪ್​ ಮತ್ತು ಇನ್​ಸ್ಟಾಗ್ರಾಂ ಸಂಸ್ಥೆಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕೇವಲ ಮಧ್ಯಸ್ಥಿಕೆದಾರರಾಗಿದ್ದು, ಇಂತಹ ತಿರುಚಿದ ಕಂಟೆಂಟ್​ ಹಂಚಿಕೆಯಾಗದಂತೆ ತಡೆಯಲು ಸರ್ಕಾರ ಮತ್ತು ಪೊಲೀಸರು ಸಕ್ರಿಯರಾಗಬೇಕು. ವೀರೇಂದ್ರ ಹೆಗ್ಗಡೆ ಅವರ ಕುಟುಂಬದವರು ಯಾವುದೇ ಕ್ರಿಮಿನಲ್​ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲದಿದ್ದರೂ, ದುರುದ್ದೇಶಪೂರ್ವಕವಾಗಿ ಅವರ ವಿರುದ್ಧ ಆನ್​ಲೈನ್​ನಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಇದರಿಂದ ಪ್ರತಿದಿನ ಕ್ಷೇತ್ರಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರ ಮುಂದೆ ಕುಟುಂಬವು ಮುಜುಗರ ಎದುರಿಸುವಂತಾಗಿದೆ ಎಂದು ತಿಳಿಸಿದರು.
ಸರ್ಕಾರದ ಪರ ವಕೀಲರು ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರವು ಶೀಘ್ರವಾಗಿ ಕಾರ್ಯಪ್ರವೃತ್ತವಾಗಲಿದೆ ಎಂದು ಭರವಸೆ ನೀಡಿದರು. ಗೂಗಲ್​ ಪರ ವಕೀಲರು ಪ್ರತಿಕ್ರಿಯಿಸಿ, ಹೆಚ್ಚಿನ ಆಕ್ಷೇಪಾರ್ಹ ಕಂಟೆಂಟ್​ 2025ರಲ್ಲಿ ಪ್ರಕಟವಾಗಿದ್ದು, ಬಹುತೇಕ ಯುಆರ್​ಎಲ್​ಗಳು ಫೇಸ್ಬುಕ್​ಗೆ ಸಂಬಂಧಿಸಿವೆ ಎಂದು ತಿಳಿಸಿದರು. #high court
ℹ️

ಪಟ್ಟಭದ್ರ ಹಿತಾಸಕ್ತಿಗಳಿಂದ ಅಪಪ್ರಚಾರ 

ಕಳೆದ ವಿಚಾರಣೆ ವೇಳೆ ಅರ್ಜಿದಾರರ ವಕೀಲರು, 2012ರ ಸೌಜನ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮಸ್ಥಳ ಮತ್ತು ಹೆಗ್ಗಡೆ ಕುಟುಂಬದ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿವೆ ಎಂದು ದೂರಿದ್ದರು. ಸಿಬಿಐ ತನಿಖೆಯಲ್ಲಿ ಕುಟುಂಬದ ಸದಸ್ಯರು ಆರೋಪಮುಕ್ತರಾಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ತುಚ್ಛವಾಗಿ ಚಿತ್ರಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ವಾದಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net