ಖಾತೆ ಫ್ರೀಜ್​ ಮಾಡುವಾಗ ನಿಯಮ ಪಾಲಿಸಿ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ತನಿಖಾ ಸಂಸ್ಥೆ ಆದೇಶ ಮೀರಿದ ನಿರ್ಬಂಧ ಬೇಡ
ಬೆಂಗಳೂರು: ತನಿಖಾ ಸಂಸ್ಥೆಗಳು ಎಷ್ಟು ಮೊತ್ತವನ್ನು ಖಾತೆಯಲ್ಲಿ ಫ್ರೀಜ್​ ಮಾಡಬೇಕು ಎಂದು ಆದೇಶಿಸುತ್ತದೆಯೋ ಅಷ್ಟನ್ನು ಮಾತ್ರ ಮಾಡಬೇಕು. ಅದರ ಹೊರತಾಗಿ ಸ್ವಯಂಪ್ರೇರಿತವಾಗಿ ಖಾತೆಯನ್ನು ಸಂಪೂರ್ಣ ರ್ನಿಬಂಧಿಸುವ ಅಧಿಕಾರ ಬ್ಯಾಂಕ್​ಗಳಿಗೆ ಇಲ್ಲ ಎಂದು ಹೈಕೋರ್ಟ್​ ಹೇಳಿದೆ.
ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಮಧು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ. ತನಿಖಾ ಸಂಸ್ಥೆಗಳ ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಬ್ಯಾಂಕುಗಳ ಪಾತ್ರ ಸೀಮಿತವಾಗಿರುತ್ತದೆ. ನಿಯಮಗಳನ್ನು ಪಾಲಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರು ಖಾಸಗಿ ಬ್ಯಾಂಕ್​ ಒಂದರಲ್ಲಿ ಖಾತೆ ಹೊಂದಿದ್ದರು. ಸೈಬರ್​ ಅಪರಾಧಕ್ಕೆ ಸಂಬಂಧಿಸಿದಂತೆ ಅವರ ಖಾತೆಯಲ್ಲಿನ ಹಣವನ್ನು ಫ್ರೀಜ್​ ಮಾಡುವಂತೆ ಗುಜರಾತ್​ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಂದ ಎರಡು ಪ್ರತ್ಯೇಕ ನೋಟಿಸ್​ಗಳು ಬ್ಯಾಂಕ್​ಗೆ ಬಂದಿತ್ತು. ಪೊಲೀಸರು ಫ್ರೀಜ್​ ಮಾಡಲು ಕೋರಿದ್ದ ಒಟ್ಟು ಮೊತ್ತ 25 ಸಾವಿರ ರೂಪಾಯಿ ಆಗಿದ್ದರೂ, ಭವಿಷ್ಯದಲ್ಲಿ ಹೆಚ್ಚಿನ ಆದೇಶಗಳು ಬರಬಹುದು ಎಂಬ ಕಾರಣಕ್ಕೆ ಬ್ಯಾಂಕ್​ ಸ್ವಯಂಪ್ರೇರಿತವಾಗಿ ಇಡೀ ಖಾತೆಯ ವ್ಯವಹಾರವನ್ನು ನಿರ್ಬಂಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.
ಬ್ಯಾಂಕ್​ನ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಬ್ಯಾಂಕ್​ ಖಾತೆ ಫ್ರೀಜ್​ ಮಾಡುವುದರಿಂದ ಖಾತೆದಾರನ ಮೇಲೆ ಗಂಭೀರ ನಾಗರಿಕ ಮತ್ತು ಆರ್ಥಿಕ ಪರಿಣಾಮಗಳು ಉಂಟಾಗುತ್ತವೆ. ಬ್ಯಾಂಕ್​ ಮತ್ತು ಗ್ರಾಹಕನ ನಡುವಿನ ಸಂಬಂಧವು ಒಪ್ಪಂದ ಮತ್ತು ವಿಶ್ವಾಸದ ಮೇಲೆ ಆಧಾರಿತವಾಗಿದೆ. ಖಾತೆಯಲ್ಲಿರುವ ಹಣ ಗ್ರಾಹಕನಿಗೆ ಸೇರಿದ್ದಾಗಿದ್ದು, ಬ್ಯಾಂಕುಗಳು ಕೇವಲ ತನಿಖಾ ಸಂಸ್ಥೆಗಳು ನೀಡಿದ ನಿರ್ದಿಷ್ಟ ಮಿತಿಗೆ ಮಾತ್ರ ಬದ್ಧವಾಗಿರಬೇಕು ಸ್ಪಷ್ಟಪಡಿಸಿದೆ. 

ಬ್ಯಾಂಕ್​ಗಳಿಗೆ ಸಾರ್ವತ್ರಿಕ ನಿರ್ದೇಶನ:

1. ತನಿಖಾ ಸಂಸ್ಥೆಗಳು ರ್ನಿದಿಷ್ಟ ಮೊತ್ತವನ್ನು ಉಲ್ಲೇಖಿಸಿದಾಗ, ಬ್ಯಾಂಕುಗಳು ಕೇವಲ ಅಷ್ಟೇ ಮೊತ್ತದ ಮೇಲೆ ರ್ನಿಬಂಧ ವಿಧಿಸಿ, ಇನ್ನುಳಿದ ಹಣವನ್ನು ಬಳಸಲು ಗ್ರಾಹಕರಿಗೆ ಮುಕ್ತ ಅವಕಾಶ ನೀಡಬೇಕು.
2. ಬ್ಯಾಂಕ್​ ಯಾವುದೇ ತನಿಖಾ ಸಂಸ್ಥೆ ಅಲ್ಲ. ತನಿಖಾ ಸಂಸ್ಥೆಗಳು ಇಡೀ ಖಾತೆಯನ್ನು ಫ್ರೀಜ್​ ಮಾಡಲು ಸ್ಪಷ್ಟವಾಗಿ ತಿಳಿಸದ ಹೊರತು ಅಥವಾ ಯಾವುದೇ ಶಾಸನಬದ್ಧ ಆದೇಶವಿಲ್ಲದ ಹೊರತು ಖಾತೆಯನ್ನು ಸಂಪೂರ್ಣ ಫ್ರೀಜ್​ ಮಾಡುವಂತಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net