ಕೆರೆ-ಕಟ್ಟೆ ಭರ್ತಿಗೆ ಹೇಮಾವತಿ ನೀರು ಹರಿಸಿ

ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಕಚೇರಿ ಎದುರು ರೈತ ಸಂಘ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದರು.
ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಕಚೇರಿ ಎದುರು ರೈತ ಸಂಘ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದರು.
Published on

ಕೆ.ಆರ್.ಪೇಟೆ:

ಹೇಮಾವತಿ ಜಲಾಶಯದಲ್ಲಿ 32 ಟಿಎಂಸಿ ನೀರಿದ್ದರೂ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಮುಂದಾಗಿಲ್ಲ ಎಂದು ಆರೋಪಿಸಿ ತಾಲೂಕು ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಹೇಮಾವತಿ ಎಡದಂಡೆ ನಾಲಾ ಉಪ ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಈ ಭಾಗದ ಶಾಸಕರು ಜವಾಬ್ದಾರಿಯುತವಾಗಿ ರೈತಪರವಾಗಿ ಕಾರ್ಯನಿರ್ವಹಿಸಿದ್ದರೆ ಇಂತಹ ಸಂಕಷ್ಟ ಎದುರಾಗುತ್ತಿರಲಿಲ್ಲ. ಅಣೆಕಟ್ಟೆಯಲ್ಲಿ ನೀರಿರುವಾಗಲೇ ಕೆರೆ-ಕಟ್ಟೆಗಳನ್ನು ತುಂಬಿಸಲು ಏನು ತೊಂದರೆ? ಅಧಿಕಾರಿಗಳ ಮಾತಿನಂತೆ ಏಕೆ ನಡೆಯಬೇಕು ಎಂದು ಪ್ರಶ್ನಿಸಿದರು.
ಹೇಮಾವತಿ ಜಲಾಶಯದ ನೀರಿನಿಂದ ತಾಲೂಕಿನ ಕೆರೆ-ಕಟ್ಟೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಹೇಮಗಿರಿ ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು. ಎ.ಜೆ.ರಾಮಚಂದ್ರರಾವ್ ನಾಲೆಗೆ ಪೂರ್ಣ ಪ್ರಮಾಣದ 1200 ಕ್ಯೂಸೆಕ್ ನೀರುಹರಿಸಿ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರೈತರಿಗೆ ನ್ಯಾಯ ದೊರೆಯುತ್ತಿಲ್ಲ. ಹೇಮಾವತಿ ಜಲಾನಯನ ಪ್ರದೇಶದ ಶಾಸಕರು ಒಗ್ಗಟ್ಟಾಗಿ ಹೋರಾಟ ನಡೆಸದಿರುವುದರಿಂದ ಅಣೆಕಟ್ಟೆಯಲ್ಲಿ ನೀರಿದ್ದರೂ ಕೆರೆ-ಕಟ್ಟೆಗಳಿಗೆ ಸಮರ್ಪಕವಾಗಿ ನೀರುಹರಿಯುತ್ತಿಲ್ಲ. ಶತಮಾನದ ಹಿಂದೆಯೇ ನಿರ್ಮಿಸಿರುವ ಮಂದಗೆರೆ ಹಾಗೂ ಹೇಮಗಿರಿ ನಾಲೆಗಳ ವ್ಯಾಪ್ತಿಯ ರೈತರು ಹೇಮೆಯ ನೀರಿನ ಮೊದಲ ಹಕ್ಕುದಾರರಾಗಿದ್ದಾರೆ. ಕಾವೇರಿ ಜಲವಿವಾದಕ್ಕೂ ನದಿ ಒಡ್ಡು ನಾಲೆಗಳಿಗೆ ನೀರುಹರಿಸುವುದಕ್ಕೂ ಸಂಬಂಧವಿಲ್ಲ. ಕೂಡಲೇ ಹೇಮಗಿರಿ ಹಾಗೂ ಮಂದಗೆರೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಎಚ್.ಟಿ.ಮಂಜು ಬೆಂಬಲ:

ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಅವರು, ರೈತ ಸಂಘದ ಹೋರಾಟದ ಶಕ್ತಿಯಿಂದಲೇ ನಾವು ಶಾಸಕನಾಗುವ ಹಾದಿ ಕಂಡುಕೊಂಡಿದ್ದು, ಇಂದಿಗೂ ರೈತ ಕಾರ್ಯಕರ್ತನಾಗಿಯೇ ಇದ್ದೇನೆ. ರೈತರಿಗೆ ನೀರು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ರಾಜ್ಯ ಜಲಸಂಪನ್ಮೂಲ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಇಂಜಿನಿಯರ್‌ಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಪ್ರಸ್ತುತ ಹೇಮಾವತಿ ಕಾಲುವೆಗಳಿಗೆ 1000 ಕ್ಯೂಸೆಕ್ ನೀರು ಬಿಡಿಸಲಾಗಿದ್ದು, ಇನ್ನಷ್ಟು ನೀರು ಹರಿಸುವಂತೆ ಸೂಚಿಸಿದ್ದೇನೆ ಎಂದರು.

19 ಟಿಎಂಸಿ ನೀರು ರೈತರ ಬಳಕೆಗೆ:

ಅಧೀಕ್ಷಕ ಇಂಜಿನಿಯರ್ ಗಂಗಾಧರ್ ಮಾತನಾಡಿ, ಗೊರೂರು ಅಣೆಕಟ್ಟೆಯಲ್ಲಿ 32 ಟಿಎಂಸಿ ನೀರಿದ್ದು, 13 ಟಿಎಂಸಿಯನ್ನು ಬೇಸಿಗೆಯ ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕಿದೆ. ಉಳಿದ 19 ಟಿಎಂಸಿ ನೀರು ರೈತರ ಬಳಕೆಗೆ ಲಭ್ಯವಿದೆ. ಸರ್ಕಾರದ ನಿರ್ದೇಶನದಂತೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಕೆನ್ನಾಳು ನಾಗರಾಜು, ಮರುವನಹಳ್ಳಿ ಶಂಕರ್, ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಬೂಕನಕೆರೆ ನಾಗರಾಜು, ಕಾಂಗ್ರೆಸ್ ಮುಖಂಡ ಸಿ.ಬಿ.ಚೇತನಕುಮಾರ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ತಾಲೂಕು ಕರವೇ ಅಧ್ಯಕ್ಷ ಶ್ರೀನಿವಾಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net