ಉಷ್ಣಾಂಶ ಹೆಚ್ಚಳ ಹಿನ್ನೆಲೆ: ಕರಾವಳಿಗೆ ಶಾಖದ ಅಲೆ ಎಚ್ಚರಿಕೆ-Heatwave

ಶಾಖದ ಅಲೆ(ಹೀಟ್‌ವೇವ್)
ಶಾಖದ ಅಲೆ(ಹೀಟ್‌ವೇವ್)
Published on
ಬೆಂಗಳೂರು: ರಾಜ್ಯದ ಹಲವೆಡೆ ಉಷ್ಣಾಂಶ ಹೆಚ್ಚಳದಿಂದಾಗಿ ಕೆಂಡದಂತಹ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಏ.11ರಿಂದ ಏ.13ರವರೆಗೆ ಶಾಖದ ಅಲೆ(ಹೀಟ್‌ವೇವ್) ಇರಲಿದ್ದು, ಈ ಅವಧಿಯಲ್ಲಿ ಹಗಲಿನ ವೇಳೆ ಓಡಾಡುವುದನ್ನು ಸಾರ್ವಜನಿಕರು ತಪ್ಪಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ಆದರೆ, ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ದಾಖಲಾಗುವ 36 ಡಿ.ಸೆ. ಉಷ್ಣಾಂಶವು ಕಲಬುರಗಿಯಲ್ಲಿ ಕಂಡುಬರುವ 42 ಡಿ.ಸೆ. ತಾಪಮಾನಕ್ಕೆ ಸಮವಾಗಿರುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಿಸಿಲಿನ ಝಳ ಹೆಚ್ಚಿರಲಿದೆ. ಆದ್ದರಿಂದ, ಬಿಸಿ ಮತ್ತು ತೇವಾಂಶದಿಂದ ಕೂಡಿದ ಉರಿ ಬಿಸಿಲು ಜೊತೆಗೆ ಸೆಖೆ ಇರುತ್ತಿದೆ. ರಾಜ್ಯದ ಶೇ.90 ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ.6 ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.
ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಮುಂದಿನ 2 ದಿನ, ಬೆಂಗಳೂರು ನಗರ, ಬೆಂ. ಗ್ರಾಮಾಂತರದಲ್ಲಿ ಏ.11ರಂದು ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಏ.12ರಿಂದ ಏ.17ವರೆಗೆ ಬಿರುಗಾಳಿ ಸಹಿತ ಸಾಧಾರಣ ವರ್ಷಧಾರೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಏ.14ರಿಂದ ಮುಂದಿನ 3 ದಿನ ಮಳೆ ಸುರಿಯಲಿದೆ. ಮುಂದಿನ 5 ದಿನ ಗರಿಷ್ಠ ತಾಪಮಾನದಲ್ಲಿ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net