

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿರುವ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ರಾಜ್ಯ ರಾಜಕೀಯಕ್ಕೆ ಹಿಂದಿರುಗುವ ಸುಳಿವನ್ನು ಮನದಾಳದ ಮಾತುಗಳ ಮೂಲಕ ಯುವ ಜನತೆ ಎದುರು ಪರೋಕ್ಷವಾಗಿ ತೆರೆದಿಟ್ಟಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ "ಪರಿಶ್ರಮಕ್ಕೆ ತಕ್ಕ ಪ್ರತಿಫಲ, 2028ಕ್ಕೆ ಇದೇ ನನ್ನ ಪ್ರತಿಜ್ಞೆ...' ಎಂದು ಪೋಸ್ಟ್ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
"ಕೆಪಿಎಸ್ಸಿ ನೇಮಕಾತಿಯಲ್ಲಿನ ಅಕ್ರಮ ಮತ್ತು ಕರ್ನಾಟಕದಲ್ಲಿ ನ್ಯಾಯಯುತ ನೇಮಕಾತಿಯ ಭವಿಷ್ಯ' ಎಂಬ ವಿಷಯ ಕುರಿತು ಶುಕ್ರವಾರ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆಪಿಎಸ್ಸಿಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಉದ್ಯೋಗಗಳ ನೇಮಕದಲ್ಲಿ ತಮಗಿರುವ ಹೊಸ ಆಲೋಚನೆಯನ್ನು ಬಿಚ್ಚಿಟ್ಟರು.
ಭ್ರಷ್ಟಾಚಾರದ ಕೂಪ: ಕರ್ನಾಟಕ ಲೋಕಸೇವಾ ಆಯೋಗ ಸಂಪೂರ್ಣ ನಿಷ್ಕ್ರಿಯವಾಗಿದೆ. ಪಾರದರ್ಶಕ, ನ್ಯಾಯಸಮ್ಮತವಾಗಿ ಅರ್ಹರನ್ನು ಆಯ್ಕೆ ಮಾಡಿ ಸರ್ಕಾರಿ ಸೇವೆಗೆ ಕಳಿಸಬೇಕಾದ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದೆ. ಹಣಕ್ಕಾಗಿ ಉದ್ಯೋಗವನ್ನು ಮಾರಿಕೊಳ್ಳಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಂಸ್ಥೆಗೆ ಹೋಗುವ ಅಧಿಕಾರಿಗಳು ಕೂಡ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಜಾತಿ ವ್ಯಾಮೋಹ: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು, ಪಶುವೈದ್ಯ ಇಲಾಖೆಯ ನೇಮಕಾತಿ ಸೇರಿದಂತೆ ಅನೇಕ ನೇಮಕ ಪ್ರಕ್ರಿಯೆಗಳಲ್ಲಿ ಅಗಾಧವಾದ ಭ್ರಷ್ಟಾಚಾರ ನಡೆದಿದೆ. ಅಲ್ಲದೆ ಕೆಎಎಸ್ ಆಯ್ಕೆ ಪ್ರಕ್ರಿಯೆಯೇ ಅವ್ಯವಹಾರದ ಕೂಪವಾಗಿದೆ. ಹಣದ ವ್ಯವಹಾರ, ಸ್ವಜನಪಕ್ಷಪಾತ, ಜಾತಿ ವ್ಯಾಮೋಹದಿಂದ ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಹೇಳಿಕೆಯಿಂದ ಉ.ಕ.ದವರಿಗೆ ನೋವು
"ಉತ್ತರ ಕರ್ನಾಟಕದ ಮಂದಿ ಬೆಂಗಳೂರಿಗೆ ಬಂದ ಮೇಲೆ ವಾಪಸ್ ಹೋಗಲ್ಲ, ಇಲ್ಲೆ ಇದ್ದುಬಿಡುತ್ತಾರೆಂಬ ಮುಖ್ಯಮಂತ್ರಿ ಹೇಳಿಕೆಯಿಂದ ನಮಗೆ ನೋವಾಗಿದೆ. ಕರ್ನಾಟಕ ಒಂದೇ. ಉತ್ತರ, ದಕ್ಷಿಣ ಎನ್ನುವ ಪ್ರಶ್ನೆಯೇ ಇಲ್ಲ. ಬೆಂಗಳೂರು ನಮ್ಮೆಲ್ಲರದ್ದು. ಯಾರೋ ಒಬ್ಬರಿಗೆ ಸೀಮಿತವಾದದ್ದಲ್ಲ. ಬೆಂಗಳೂರು ನಗರ ಅಭಿವೃದ್ಧಿ ಹೊಂದಿದ್ದರೂ ಅಕ್ಕಪಕ್ಕದ ಅನೇಕ ಹಳ್ಳಿಗಳು ಉತ್ತರ ಕರ್ನಾಟಕದ ಹಳ್ಳಿಗಳಂತೆ ತೀರಾ ಹಿಂದುಳಿದಿಲ್ಲವೆ ಎಂದು ಯಾದಗಿರಿಯ ವಿದ್ಯಾರ್ಥಿನಿ ಪ್ರಶ್ನಿಸಿದರು.
ನೇಮಕಾತಿ ವಿಚಾರದಲ್ಲಿ ಸರ್ಕಾರದ ಮೇಲಿನ ನಂಬಿಕೆ ಸತ್ತುಹೋಗಿದೆ
ನೋಟಿಫಿಕೇಷನ್ನಿಂದ ಆಯ್ಕೆಪಟ್ಟಿ ಬಿಡುಗಡೆವರೆಗೂ ಕಾಯುವ ಸ್ಥಿತಿ
ಉ.ಕರ್ನಾಟಕದಿಂದ ಬೆಂಗಳೂರಿಗೆ ಬಂದು ವರ್ಷಗಟ್ಟಲೆ ಓದಬೇಕು
ಬೆಂಗಳೂರಿನಲ್ಲಿ ಉಳಿದು ಓದಲು ಪಿಜಿಗೆ ಹಣ ಕೊಡುವ ಸ್ಥಿತಿಯಲ್ಲಿಲ್ಲ
ಕೆಇಎಗೆ ಪರೀಕ್ಷಾ ಅಧಿಕಾರ ಹಸ್ತಾಂತರ ಲಾಭವಿಲ್ಲ
ಅಪ್ರಾಮಾಣಿಕ ಅಧಿಕಾರಿಗಳು ಹೆಚ್ಚಿರುವುದರಿಂದ ಸುಖವಿಲ್ಲ
ಒಮ್ಮೆ ಒಬ್ಬರು ಸರ್ಕಾರಿ ಉದ್ಯೋಗಕ್ಕೆ ನೇಮಕವಾದರೆ ಅವರಿಗೆ 35 ವರ್ಷ ಸೇವಾವಧಿ ಇರುತ್ತದೆ. ಆದರೆ ಪ್ರತಿ ಕುಟುಂಬಕ್ಕೆ ತಲಾ ಒಂದು ಉದ್ಯೋಗ ಕಲ್ಪಿಸುವ ಉದ್ದೇಶದಿಂದ 35 ವರ್ಷದ ಸೇವಾವಧಿಯನ್ನು 10ರಿಂದ 15 ಅಥವಾ 20 ವರ್ಷಕ್ಕೆ ಇಳಿಸಬೇಕು. ಇಷ್ಟು ಮಿತಿಯನ್ನು ಹಾಕುವ ಮೂಲಕ ಉದ್ಯೋಗಗಳನ್ನು ಎಲ್ಲರಿಗೂ ಕೊಡುವ ಪ್ರಯತ್ನ ಮಾಡಬಹುದು, ಕೆಲಸದಿಂದ ನಿವೃತ್ತಿಯಾದವರು ಬಳಿಕ ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ಇದರಿಂದ, ಉದ್ಯೋಗ ಸಿಗದವರಿಗೆ ಅವಕಾಶ ದೊರೆಯುತ್ತದೆ. ನಿರುದ್ಯೋಗ ನಿವಾರಣೆಯಲ್ಲಿ ದೊಡ್ಡ ಪ್ರಯತ್ನ ಮಾಡಿದಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನಾನು ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ. ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಇದನ್ನು ಕಾರ್ಯರೂಪಕ್ಕೆ ತಂದರೆ ಹೇಗೆ ಎಂದು ಆಲೋಚಿಸುತ್ತಿದ್ದೇನೆ. ನನ್ನ ಪ್ರಕಾರ ಪ್ರತಿ ಮನೆಗೂ ಕನಿಷ್ಠ ಒಂದು ಸರ್ಕಾರಿ ಕೆಲಸವಾದರೂ ದೊರೆಯಬೇಕು. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲಿ. ನೀವೂ (ಯುವಜನತೆ) ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.