ದಸರಾ ಉತ್ಸವದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ: ನಾಡಹಬಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ: ಎಚ್​ಡಿಕೆ

ಮೈಸೂರು ದಸರಾ 2026ರಲ್ಲಿ ಕಂಬಳ ಸೇರಿಸಲು ವಿರೋಧ
ಮೈಸೂರು ದಸರಾ 2026ರಲ್ಲಿ ಕಂಬಳ ಸೇರಿಸಲು ವಿರೋಧ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ 'ಕಂಬಳ' ಕದನ
  • ಕಂಬಳ ಸೇರಿಸುವುದು ಬೇಡ ಎಂಬುದು ಬಿಜೆಪಿ ನಾಯಕರು ವಿರೋಧ
  • ರಾಜ್ಯ ಸರ್ಕಾರ ನಿರ್ಧಾರಕ್ಕೆ ಬಿಜೆಪಿ ತೀವ್ರ ಅಸಮಾಧಾನ
ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದ್ದೇ ಆದರೂ ಕರಾವಳಿಯ ಕಂಬಳ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ಸದ್ಯ ರಾಜಕೀಯ ಅಂಗಳದಲ್ಲಿ ಬಲು ಜೋರಾಗಿವೆ. ಕಂಬಳ ಸೇರಿಸುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ಅಕ್ಷರಶಃ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತಾಗಿ ಟ್ವೀಟ್​ ಮಾಡಿರುವ ಸಚಿವರು, ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ. ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕ ಎಂದರು.
ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು. ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮ. ಇಂಥ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ ಎನ್ನುವುದು ನನ್ನ ಭಾವನೆ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಕಿಲ್ಲ ಎಂದಿದ್ದಾರೆ.

ಮೈಸೂರು ಬಿಜೆಪಿ ಸಂಸದ ಯದುವೀರ್​ ಹೇಳಿಕೆ

ನಾನು ಕಂಬಳವನ್ನು ವಿರೋಧಿಸುತ್ತಿಲ್ಲ. ಅದು ನಮ್ಮ ರಾಜ್ಯದ ಹೆಮ್ಮೆ. ಆದರೆ, ಮೈಸೂರಿನ ಜನತೆಯ ಭಾವನೆಯನ್ನು ಪ್ರತಿಧ್ವನಿಸುವ ನನ್ನ ನಿರಂತರ ನಿಲುವೇನೆಂದರೆ, ಈ ಸಾಂಪ್ರದಾಯಿಕ ಕ್ರೀಡೆಗೆ ಅದರದ್ದೇ ಆದ ಮೂಲ ನೆಲದಲ್ಲಿ ಗರಿಷ್ಠ ಉತ್ತೇಜನ ಮತ್ತು ಆಚರಣೆಯ ಗೌರವ ಸಿಗಬೇಕೇ ಹೊರತು, ಈಗಾಗಲೇ ತೀವ್ರ ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿರುವ ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು ಎಂದರು.
ಇಂದಿನ ಸಭೆಯಲ್ಲಿ ನಾನು ಈ ಸೇರ್ಪಡೆಯನ್ನು ಪ್ರಶ್ನಿಸಿದೆ ಮತ್ತು ಮರುಪರಿಶೀಲಿಸುವಂತೆ ಅಧಿಕೃತವಾಗಿ ವಿನಂತಿಸಿದೆ. ಈ ವಿಷಯದಲ್ಲಿ ನಾನು ಒಬ್ಬಂಟಿಯಾಗಿರಲಿಲ್ಲ. ಇತರ ಹಲವಾರು ನಾಯಕರು ಮತ್ತು ಸಮಿತಿಯ ಸದಸ್ಯರು ಸಹ ಇದೇ ರೀತಿಯ ಕಳಕಳಿಯನ್ನು ವ್ಯಕ್ತಪಡಿಸಿದರು. ಕಂಬಳದ ಸೇರ್ಪಡೆಗಾಗಿ ತೀವ್ರವಾಗಿ ಒತ್ತಾಯಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ನನ್ನ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ತೀವ್ರ ವಿಷಾದನೀಯ ಎಂದಿದ್ದಾರೆ.
ನಮ್ಮ ರಾಜ್ಯ ಹಬ್ಬಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯ ನಡಾವಳಿಗಳನ್ನು ಒಬ್ಬ ಜನಪ್ರತಿನಿಧಿಯು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸುವುದು ಅವರ ಸ್ಥಾನಕ್ಕೆ ತಕ್ಕುದಲ್ಲದ ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಡವಳಿಕೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net