

ಪ್ರಮುಖ ಮುಖ್ಯಾಂಶಗಳು
ನನಗೆ ತಿಳಿದ ಮಟ್ಟಿಗೆ ರಾಷ್ಟ್ರದ ಇತಿಹಾಸದಲ್ಲಿಯೇ ಬೃಹತ್ತಾದ ಭೂಹಾಗರಣ ನೈಸ್ ಅಕ್ರಮವಾಗಿದೆ. ನ್ಯಾಯಾಲವೂ ಕೂಡ ಇದೊಂದು ಹಗರಣದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಆಡಳಿತ ನಡೆಸುವ ರಾಜಕಾರಣಿಗಳೇ ಶಾಮೀಲಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಾಲಯಗಳಿಗೆ ತಪ್ಪು ಮಾಹಿತಿಗಳನ್ನು ಕೊಟ್ಟು ಸರ್ಕಾರಕ್ಕೆ ಛೀಮಾರಿ ಹಾಕಿಸುವ ದುಷ್ಕೃತ್ಯ ನಡೆದಿದೆ. ಸ್ಕೀಂ ಫಾರ್ ಸ್ಕ್ಯಾಮ್ ಯೋಜನೆ ಇದು. ಇದೆಲ್ಲವನ್ನು ನೋಡಿಕೊಂಡು ನಾವು ಮೌನಕ್ಕೆ ಶರಣಾಗಲು ಸಾಧ್ಯವೇ ಇಲ್ಲ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ನಾವೆಲ್ಲರೂ ಒಗ್ಗಟ್ಟಾಗಿ ಸೇರಿ ಈ ಅಕ್ರಮದ ವಿರುದ್ಧ ಹೋರಾಟ ನಡೆಸಬೇಕಿದೆ. ಹೋರಾಟ ಎಂದರೆ ನಾವೆಲ್ಲರೂ ಹೋಗಿ ಟೋಲ್ ಪ್ಲಾಝಗಳಿಗೆ ನುಗ್ಗಬೇಕು ಎಂದಲ್ಲ. ಆ ರೀತಿ ಮಾಡುವುದಿದ್ದರೆ ಯಾವತ್ತೂ ನೈಸ್ ಟೋಲ್ ಕೇಂದ್ರಗಳಿಗೆ ಜನರನ್ನು ನುಗ್ಗಿಸಿಬಿಡುತ್ತಿದ್ದೆ. ಶಾಂತಿಯುತ ಹೋರಾಟ ನಡೆಸುವುದು ನಮ್ಮ ಉದ್ದೇಶ. ನೀವು ಕೂತಿರುವ ಈ ಕಚೇರಿಯ ಹೆಸರು ಜೆಪಿ ಭವನ. ಲೋಕ ನಾಯಕ ಜಯಪ್ರಕಾಶನಾರಾಯಣ ಅವರ ಸ್ಪೂರ್ತಿ ಮತ್ತು ಆದರ್ಶದ ನೆಲೆಗಟ್ಟಿನ ಮೇಲೆ ನಮ್ಮ ಪಕ್ಷ ನಿಂತಿದೆ. ಇಂದಿರಾ ಗಾಂಧಿ ಅವರು ಈ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಇಡೀ ರಾಷ್ಟ್ರವನ್ನೇ ಸಂಘಟಿಸಿ ಹೋರಾಟ ನಡೆಸಿದ ಮಹಾನ್ ನಾಯಕರು ಅವರು. ಹೀಗಾಗಿ ನಮ್ಮ ಹೋರಾಟ ಶಾಂತಿ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದರು ಕುಮಾರಸ್ವಾಮಿ.