_1785692959343.webp?w=480&auto=format%2Ccompress&fit=max)
_1785692959343.webp?w=480&auto=format%2Ccompress&fit=max)
ಮಳೆರಾಯ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ಕರ್ನಾಟಕದ ಬೆರಳೆಣಿಕೆಯ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಮಳೆರಾಯನ ಸುಳಿವೇ ಇಲ್ಲ. ಇನ್ನೊಂದೆಡೆ, ರಾಷ್ಟ್ರ ರಾಜಧಾನಿ ದೆಹಲಿ ಮಳೆನೀರಲ್ಲಿ ಮಿಂದೆದ್ದಿದೆ. ಕೆಲ ದಿನಗಳ ಹಿಂದೆಯಷ್ಟೇ ಮುಂಬಯಿಯ ಪರಿಸ್ಥಿತಿ ಕೂಡ ಹೀಗೆಯೇ ಇತ್ತು. ಇನ್ನು ಜಮ್ಮು ಕಾಶ್ಮೀರ ಮತ್ತು ಒಡಿಶಾದ ಹಲವು ಜಿಲ್ಲೆಗಳು ವಾಡಿಕೆಗಿಂತ ಹೆಚ್ಚೇ ಮಳೆಯನ್ನು ಕಂಡರೆ ಗುಜರಾತ್ ವರುಣನ ಪ್ರಕೋಪಕ್ಕೀಡಾಗಿ ನೆರೆಯನ್ನು ಸಂಭಾಳಿಸಲು ಹರಸಾಹಸ ಪಡಬೇಕಾಯಿತು. ಪ್ರಸಕ್ತ ವರ್ಷದ ಅಮರನಾಥ ಯಾತ್ರೆ ಈ ಕಾರಣಕ್ಕೇ ಕೆಲ ದಿನಗಳ ಕಾಲ ಸ್ಥಗಿತಗೊಂಡು ಇದೀಗ ಪುನರಾರಂಭಗೊಂಡಿದೆ. ಇಷ್ಟೊಂದು ವೈರುಧ್ಯಗಳು ಈ ಬಾರಿಯ ದವಸಧಾನ್ಯಗಳ ಉತ್ಪಾದನೆ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿವೆ.
ಸಾಮಾನ್ಯವಾಗಿ ನಾವು ಆಯಾ ವರ್ಷದ ಫಸಲಿನ ಕುರಿತು ಮಾತನಾಡುವಾಗ ಮಳೆಯಾಶ್ರಿತ ಬೆಳೆಗಳ ಕುರಿತೇ ಹೇಳುವುದು ವಾಡಿಕೆ. ಭಾರತದ ಶೇ. 60ರಷ್ಟು ಕೃಷಿ ಉತ್ಪನ್ನಗಳು ಮಳೆಯಾಶ್ರಿತವಾಗಿರುವಾಗ ಅದು ಸಹಜವೂ ಹೌದು. ಉಳಿದ ಶೇ. 40ರಷ್ಟು ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ಬೇಸಿಗೆಯ ಹಿಮಕರಗುವಿಕೆಯ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುವ ಕೃಷಿಯೂ ಇದೆ. ಹವಾಮಾನ ವೈಪರೀತ್ಯದಿಂದ ಮಳೆಯ ಪ್ರಮಾಣ ಕುಂಠಿತವಾಗಿ ಮಳೆಯಾಧಾರಿತ ಕೃಷಿ ಏದುಸಿರು ಬಿಡುತ್ತಿದ್ದರೆ ಅಂತಹುದೇ ಪರಿಸ್ಥಿತಿ ಭಾರತದ ಈಶಾನ್ಯ ಭಾಗದಲ್ಲಿರುವ ಹಿಮಕರಗುವಿಕೆಯ ಮೇಲೆ ಅವಲಂಬಿತವಾಗಿರುವ ರೈತರದ್ದಾಗಿದೆ. ಕಾರಣ ಜಾಗತಿಕ ತಾಪಮಾನದ ಹೆಚ್ಚಳ.
ಲಡಾಖ್ ಗೊತ್ತಲ್ಲ. ಉತ್ತರದ ತುತ್ತತುದಿಯಲ್ಲಿ ಭಾರತಾಂಬೆಯ ಮುಡಿಯ ಹೂವಿನಂತೆ ಕಂಗೊಳಿಸುವ ಈ ಕೇಂದ್ರಾಡಳಿತ ಪ್ರದೇಶವು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಟಿಬೇಟ್ಗಳಿಂದ ಸುತ್ತುವರೆದಿದೆ. ಸಮುದ್ರಮಟ್ಟದಿಂದ ಸುಮಾರು 4000 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಹಲವಷ್ಟು ‘ಇಲ್ಲ’ಗಳ ನಡುವೆಯೂ ರೈತರು ಕೃಷಿಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಸ್ಥಳೀಯ ವಿಶೇಷವೆಂದೇ ಬಿಂಬಿತವಾಗಿರುವ ಎಪ್ರಿಕಾಟ್ ಜತೆಗೆ ಬಾರ್ಲಿ, ಹುರುಳಿ, ಗೋಧಿ, ಸೇಬು, ಗಜ್ಜರಿ, ಆಲೂಗಡ್ಡೆಗಳನ್ನು ಇಲ್ಲಿನ ರೈತರು ನಿಯಮಿತವಾಗಿ ಬೆಳೆಯುತ್ತಿದ್ದಾರೆ. ವಿಶೇಷವೆಂದರೆ ಈ ರೈತರಿಗೆ ಪ್ರತಿವರ್ಷ ಕೃಷಿಗೆ ಅವಕಾಶ ದೊರೆಯುವುದು ಬೇಸಿಗೆಯ ಮೂರ್ನಾಲ್ಕು ತಿಂಗಳು ಮಾತ್ರ. ಮೇ ತಿಂಗಳಿನಿಂದ ಆಗಸ್ಟ್ ಕೊನೆಯವರೆಗೆ 15-20 ಡಿಗ್ರಿಯ ಆಸುಪಾಸಿನಲ್ಲಿರುವ ಸ್ಥಳೀಯ ತಾಪಮಾನ ಚಳಿಗಾಲದಲ್ಲಿ ಶೂನ್ಯ ಡಿಗ್ರಿಗಿಂತ ಕೆಳಗಿಳಿದು ಮೈನಸ್ 30ರ ಆಸುಪಾಸಿನಲ್ಲಿರುತ್ತದೆ! ಅಷ್ಟು ಸಾಲದ್ದಕ್ಕೆ ಕಡಿಮೆ ಫಲವತ್ತತೆಯ ಮಣ್ಣು, ಎತ್ತರದ ಪ್ರದೇಶವಾಗಿರುವ ಕಾರಣ ಸೂರ್ಯಕಿರಣದಲ್ಲಿ ಹೆಚ್ಚಿನ ಪ್ರಮಾಣದ ಅತಿನೇರಳೆ ಕಿರಣಗಳು ಬೇರೆ. ಹೀಗಾಗಿ ಬೇಸಿಗೆಯ ಸಮಯವನ್ನು ಹೊರತುಪಡಿಸಿ ಉಳಿದೆಲ್ಲ ತಿಂಗಳುಗಳಲ್ಲಿ ಸಂಪೂರ್ಣ ಹಿಮಾಚ್ಛಾದಿತವಾಗಿರುವ ಈ ಪ್ರದೇಶದಲ್ಲಿ ಕೃಷಿಯ ಬಗ್ಗೆ ಊಹಿಸುವುದೂ ಕಷ್ಟ.
ಮಣ್ಣಿನ ಫಲವತ್ತತೆ ಹೆಚ್ಚಿಸಲು ಎರೆಗೊಬ್ಬರ ಬಳಸಿ ಕೃಷಿ ಮಾಡುವ ತಂತ್ರವನ್ನು ಸ್ಥಳೀಯ ರೈತರು ಹಲವು ವರ್ಷಗಳಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಮಣ್ಣೇನೋ ಸರಿ, ನೀರು? ಬೇಸಿಗೆಯಲ್ಲಿ ಹಿಮಾಚ್ಛಾದಿತ ಬೆಟ್ಟಗಳಲ್ಲಿನ ಹಿಮ ಕರಗಿ ಜರಿಯಾಗಿ ಮೇಲಿಂದ ಹರಿದು ಬರುತ್ತದೆ. ಹೀಗೆ ಹರಿಯುವ ತೊರೆ, ಜರಿಗಳೇ ಇಲ್ಲಿನ ರೈತರ ಕೃಷಿಯ ಜೀವನಾಡಿ. ಅವುಗಳನ್ನು ತಮ್ಮ ಹೊಲಕ್ಕೆ ಹರಿಸಿ ಬೇಸಿಗೆ ಮುಗಿಯುವಷ್ಟರಲ್ಲಿ ಬಿತ್ತಿ ಬೆಳೆದು ಫಸಲನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದ ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಲಡಾಖ್ನ ಪರಿಸ್ಥಿತಿ ಬಿಗಡಾಯಿಸಿದೆ. ಜಾಗತಿಕ ತಾಪಮಾನದ ಹೆಚ್ಚಳದ ಬಿಸಿ ಇದೀಗ ಲಡಾಖಿ ರೈತರಿಗೂ ತಟ್ಟಿದೆ. ಬೇಸಿಗೆಯಲ್ಲಿ ನಿಧಾನವಾಗಿ ಕರಗಿ ಅಲ್ಲಿನ ಜನರಿಗೆ ಜೀವಜಲವನ್ನೊದಗಿಸುತ್ತಿದ್ದ ಹಿಮದ ಬೆಟ್ಟಗಳು ಇದೀಗ ಬೇಸಿಗೆಯ ಆರಂಭಕ್ಕೇ ಸಂಪೂರ್ಣ ಕರಗಿ ಬೆತ್ತಲಾಗಿ ಹೋಗುತ್ತಿದ್ದು ಲಡಾಖ್ ಥೇಟು ಮರುಭೂಮಿಯಂತೆ ಬರಡಾಗಿ ಮಾರ್ಪಡುತ್ತಿದೆ. ಬೇರೆ ಯಾವುದೇ ಆಯ್ಕೆಗಳಿಲ್ಲದ ಸ್ಥಳೀಯ ರೈತ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಲಡಾಖ್ನ ಕೃಷಿಯನ್ನು ಉಳಿಸಬೇಕೆಂದರೆ ತುರ್ತಾಗಿ ನೀರಿನ ವ್ಯವಸ್ಥೆಯಾಗಬೇಕಿರುವ ವಿಷಯವನ್ನು ಮನಗಂಡ ಇಲ್ಲಿನ ಕೆಲ ಯುವಕರು ಹೊಸ ಯೋಜನೆಯೊಂದನ್ನು ರೂಪಿಸಿದರು. ಆಸುಪಾಸಿನ ಹಿಮಶಿಖರಗಳನ್ನೇರಿ ಅಲ್ಲಿನ ಜಲಮೂಲಗಳನ್ನು ಕಂಡುಹಿಡಿದರು. ಆ ನೀರನ್ನು ತಮ್ಮ ಹೊಲಕ್ಕೆ ಹರಿಸಲು ಖುದ್ದು ತಾವೇ ಗುಂಡಿಗಳನ್ನು ತೋಡಿ ಕೊಳವೆಗಳನ್ನು ಹಾಯಿಸಿದರು. ಚಳಿಗಾಲದ ಮಧ್ಯಾಹ್ನದ ಸಮಯದಲ್ಲಿ ದಿನದ ತಾಪಮಾನ ಸ್ವಲ್ಪ ಏರುತ್ತಿದ್ದಂತೆಯೇ ಕರಗುವ ಹಿಮದ ನೀರಿನ ಜತೆಗೆ ಜರಿಯ ನೀರು ಸೇರಿಕೊಂಡು ಕೊಳವೆಗಳ ಮೂಲಕ ಲಡಾಖ್ನ ಹೊಲಕ್ಕೆ ನುಗ್ಗಿ ಬಂತು. ಆದರೆ ಆ ಯುವಕರ ಯೋಚನೆ ಎರಡು ಹೆಜ್ಜೆ ಮುಂದಿತ್ತು. ಪೈಪ್ನಿಂದ ನುಗ್ಗಿ ಬರುತ್ತಿರುವ ನೀರನ್ನು ಸಾಯಂಕಾಲದವರೆಗೆ ಹೊಲಕ್ಕೆ ಹಾಯಿಸಿ ಸಂಜೆಯಾಗುತ್ತಿದಂತೆಯೇ ಆಕಾಶಕ್ಕೆ ಚಿಮ್ಮಿಸಿದರು. ಅದು ಸ್ಥಳೀಯ ತಾಪಮಾನ ಮತ್ತೆ ಶೂನ್ಯದತ್ತ ದೌಡಾಯಿಸುವ ಸಮಯ. ಕೊಳವೆಗಳ ಮೂಲಕ ನಭಕ್ಕೆ ಚಿಮ್ಮಿಸಲಾದ ನೀರು ಚಳಿಗೆ ಕೆಳಗೆ ಬೀಳುವಾಗ ಹಿಮವಾಗಿ ಬೀಳುತ್ತಿತ್ತು. ಯೋಜನೆಯಂತೆ ಈ ಪ್ರಕ್ರಿಯೆಯನ್ನು ಸ್ವಲ್ಪ ಕಾಲ ಮುಂದುವರೆಸಿ ಹಿಮದ ರಾಶಿಯನ್ನು ಸೃಷ್ಟಿಸಿ ರೈತರ ಹೊಲಗಳಲ್ಲಿ ಕೃತಕ ಹಿಮಸ್ತೂಪಗಳನ್ನು ರಚಿಸಲಾಯಿತು. ಬೇಸಿಗೆಯಲ್ಲಿ ಈ ಕೃತಕ ಸ್ತೂಪಗಳನ್ನು ಜಲಮೂಲಗಳನ್ನಾಗಿ ಬಳಸಬಹುದೆಂಬ ಯುವಕರ ದೂರಾಲೋಚನೆಗೆ ಆರಂಭಿಕ ಯಶಸ್ಸು ದೊರೆತು ಯುವಕರೂ ನಿಟ್ಟುಸಿರು ಬಿಟ್ಟರು.
ಯೋಜನೆ ಫಲಿಸಿದ ಸಂಭ್ರಮದಲ್ಲಿದ್ದ ಲಡಾಖಿ ಯುವಕರ ಖುಷಿಗೆ ತಣ್ಣೀರೆರಚಿದ್ದು ಅಲ್ಲಿನ ರಾತ್ರಿಯ ಚಳಿ. ರಾತ್ರಿಯಲ್ಲಿ ಮೈನಸ್ 20ಕ್ಕಿಂತ ಕೆಳಗಿಳಿಯುತ್ತಿದ್ದ ತಾಪಮಾನವು ಯುವಕರು ಹಾಕಿದ್ದ ಪೈಪುಗಳೊಳಗಿದ್ದ ನೀರನ್ನು ಹೆಪ್ಪುಗಟ್ಟಿಸಿ ಪೈಪುಗಳು ಒಡೆಯಲಾರಂಭಿಸಿದವು. ಇದಕ್ಕೂ ಬಗ್ಗದ ಆ ಯುವಕರು ಯೋಜನೆ ರೂಪಿಸಿ ‘ರಾತ್ರಿ ಕಾವಲುಪಡೆ’ ರಚಿಸಿದರು. ಆ ಕಾವಲುಪಡೆಯಲ್ಲಿದ್ದವರು ಸ್ಥಳೀಯ ತಾಪಮಾನ ಶೂನ್ಯದತ್ತ ಸಾಗುತ್ತಿದ್ದಂತೆಯೇ ಬೆಟ್ಟದ ಜಲಮೂಲದ ಬಳಿ ಬೆಂಕಿ ಹಾಕಿ ನೀರನ್ನು ಕಾಯಿಸಿ ಆ ಪೈಪ್ನೊಳಗೆ ಸುರಿದು ನೀರು ಮಂಜುಗಡ್ಡೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಚಳಿಯ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಇದೊಂದು ಆಸಾಧ್ಯ ಕಾರ್ಯಾಚರಣೆಯೆಂಬ ಸತ್ಯ ಆ ಯುವಕರಿಗೆ ಮನದಟ್ಟಾಯಿತು. ಅಲ್ಲಿಗೆ ಆ ಯುವಕರ ಶ್ರಮ ಪೈಪಿನಲ್ಲಿ ಹುಣಸೆಹಣ್ಣು ತೊಳೆದಂಗಾಯ್ತು!
‘ಕಷ್ಟಗಳೇ ಆವಿಷ್ಕಾರಗಳ ತಾಯಿ’ ಎನ್ನುತ್ತಾರಲ್ಲ... ಲಡಾಖ್ನ ನೀರಿನ ಬವಣೆಯ ವಿಷಯಕ್ಕೂ ಅದು ನಿಜವಾಯಿತು. ದೂರದ ಪರ್ವತಗಳಿಂದ ನೀರನ್ನು ಪೈಪುಗಳ ಮೂಲಕ ಹರಿಸಿ ಜತೆಗೆ ಕಷ್ಟಕಾಲಕ್ಕೆ ಖರ್ಚು ಮಾಡಲು ಹಿಮಸ್ತೂಪಗಳನ್ನು ಹೊಲದಲ್ಲೇ ನಿರ್ವಿುಸುವ ಯೋಜನೆಯೇನೋ ಕಾಗದದ ಮೇಲೆ ಚೆನ್ನಾಗಿತ್ತು. ಆದರೆ ಅದನ್ನು ಅಳವಡಿಸುವಲ್ಲಿ ಎದುರಾದ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆ ಯುವಕರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಯೋಜನೆ ನನೆಗುದಿಗೆ ಬಿತ್ತು. ಅಲ್ಲಿಗೆ ಕುಲಕಸುಬನ್ನು ಮುಂದುವರೆಸುವ ಲಡಾಖ್ನ ರೈತರ ಕೊನೆಯ ಆಸೆಯೂ ಕಮರಿ ಹೋಯಿತು.
ಇಂತಹ ಸಮಯದಲ್ಲಿ ಬಾಲಸುಬ್ರಮಣಿಯನ್ ಮತ್ತು ಬಾಸಿತ್ ಅಫ್ಜಲ್ ಎಂಬ ಇಬ್ಬರು ಜಲತಜ್ಞರು ಈ ಯುವರೈತರ ಸಂಪರ್ಕಕ್ಕೆ ಬಂದರು. ಹಿಮಸ್ತೂಪಗಳನ್ನು ನಿರ್ವಿುಸಲು ಲಡಾಖ್ನ ಯುವಕರು ಎದುರಿಸಿದ ಸವಾಲುಗಳು, ಪಟ್ಟ ಶ್ರಮದ ಕಥೆಯನ್ನು ಕೇಳಿದ ಅವರು ಈ ಸಂಪೂರ್ಣ ಆಲೋಚನೆಯನ್ನು ಒಂದು ಸ್ವಯಂಚಾಲಿತ ವ್ಯವಸ್ಥೆಯನ್ನಾಗಿಸುವ ಯೋಜನೆ ರೂಪಿಸಿದರು. ಅದರನ್ವಯ ಲಡಾಖ್ನ ಹೊಲಗಳಲ್ಲಿ ಸೌರವಿದ್ಯುತ್ ಮೇಲೆ ಕಾರ್ಯ ನಿರ್ವಹಿಸುವ ಹವಾಮಾನ ಕೇಂದ್ರಗಳು ಎದ್ದುನಿಂತವು. ನೀರನ್ನು ಹೊತ್ತು ತರುವ ಕೊಳವೆಗಳ ದಾರಿಯಲ್ಲಿ ಸ್ವಯಂಚಾಲಿತ ಸ್ಮಾರ್ಟ್ ಕವಾಟಗಳನ್ನು ಅಳವಡಿಸಲಾಯಿತು. ಬೆಟ್ಟದ ಮೇಲೆ ಹರಿಯುವ ನೀರನ್ನು ಎತ್ತಿ ಕೊಳವೆಗಳ ಮೂಲಕ ಹಾಯಿಸಲು ಸ್ವಯಂಚಾಲಿತ ಸ್ಮಾರ್ಟ್ ಪಂಪುಗಳನ್ನು ಸ್ಥಾಪಿಸಲಾಯಿತು. ‘ಹಿಮದ ಜಲಾಶಯ’ ಎಂಬ ಹೆಸರಿನ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕೇಂದ್ರ ನಿಯಂತ್ರಕವನ್ನು ಸುರಕ್ಷಿತ ಜಾಗೆಯಲ್ಲಿ ಅಳವಡಿಸಲಾಗಿರುತ್ತದೆ. ಆ ನಿಯಂತ್ರಕವು ನೀಡುವ ಅಣತಿಯಂತೆ ಈ ವ್ಯವಸ್ಥೆಯಲ್ಲಿರುವ ಎಲ್ಲ ಉಪಕರಣಗಳು ಕಾರ್ಯನಿರ್ವಹಿಸುತ್ತವೆ. ‘ಹಿಮದ ಜಲಾಶಯ’ ವ್ಯವಸ್ಥೆಯಲ್ಲಿ ಎತ್ತರದ ಬೆಟ್ಟಗಳಲ್ಲಿನ ಜಲಮೂಲಗಳಲ್ಲಿ ಅಳವಡಿಸಲಾದ ಪಂಪುಗಳು ಕೊಳವೆಗಳ ಮೂಲಕ ಹರಿಯುವ ನೀರಿಗೆ ಹೆಚ್ಚಿನ ಒತ್ತಡವನ್ನು ನೀಡಿ ಆ ಮೂಲಕ ಲಡಾಖ್ನ ಗದ್ದೆಯಲ್ಲಿರುವ ಮತ್ತೊಂದು ತುದಿಯಲ್ಲಿ ನೀರು ಕಾರಂಜಿಯಂತೆ ಹೆಚ್ಚು ಎತ್ತರಕ್ಕೆ ಚಿಮ್ಮುವಂತೆ ಮಾಡುತ್ತದೆ. ಇದರಿಂದ ಕೃತಕ ಮಂಜುಗಡ್ಡೆಯ ಸ್ತೂಪಗಳಲ್ಲಿ ಶೇಖರಣೆಯಾಗುವ ಮಂಜಿನ ಪ್ರಮಾಣ ಹೆಚ್ಚಿ ದೊಡ್ಡ ದೊಡ್ಡ ಸ್ತೂಪಗಳು ನಿರ್ವಣವಾಗುತ್ತವೆ. ಇಲ್ಲಿ ಕೊಳವೆಯ ತುದಿಯಿಂದ ಚಿಮ್ಮುವ ನೀರನ್ನು ಅತಿ ಸಣ್ಣ ಹನಿಗಳನ್ನಾಗಿ ಹಾರಿಬಿಡುವ ವ್ಯವಸ್ಥೆಯಿರುವ ಕಾರಣ ನಂತರ ಪರಿವರ್ತನೆಗೊಳ್ಳುವ ಹಿಮವು ತೆಳುಪದರದಂತೆ ಸ್ತೂಪಗಳ ಮೇಲೆ ಜಮೆಯಾಗಿ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಮತ್ತೊಂದೆಡೆ ಇದೇ ವ್ಯವಸ್ಥೆಗೆ ಸಂರ್ಪಸಲಾಗಿರುವ ಹವಾಮಾನ ಕೇಂದ್ರ ಮತ್ತು ನೀರನ್ನು ಸಾಗಿಸುವ ಕೊಳವೆಗಳಲ್ಲಿ ಅಳವಡಿಸಿರುವ ಸಂವೇದಕಗಳು ಹೊರಗಿನ ಹವಾಮಾನದ ಮತ್ತು ಕೊಳವೆಯೊಳಗೆ ಹರಿಯುತ್ತಿರುವ ನೀರಿನ ತಾಪಮಾನದ ಮೇಲೆ ನಿಗಾ ಇಟ್ಟು ಆ ಮಾಹಿತಿಯನ್ನು ಕೇಂದ್ರ ನಿಯಂತ್ರಕಕ್ಕೆ ರವಾನಿಸುತ್ತಿರುತ್ತವೆ. ಅದರನ್ವಯ ಕೊಳವೆಯೊಳಗಿನ ನೀರು ಹೆಪ್ಪುಗಟ್ಟುವ ಪರಿಸ್ಥಿತಿಯನ್ನು ಗ್ರಹಿಸಿದ ತಕ್ಷಣವೇ ನಿಯಂತ್ರಕವು ನೀರನ್ನು ಸಾಗಿಸುವ ಪಂಪುಗಳನ್ನು ಸ್ಥಗಿತಗೊಳಿಸಿ ಕೊಳವೆಯೊಳಗೆ ನೀರನ್ನು ಹರಿಸುವ ಮುಖ್ಯ ಕವಾಟವನ್ನು ಮುಚ್ಚಿ ಇನ್ನೊಂದೆಡೆ ಇರುವ ಕವಾಟವನ್ನು ತೆರೆದು ಪೂರ್ತಿ ಕೊಳವೆಯೊಳಗಿರುವ ನೀರನ್ನು ಹೊರಗೆ ಹರಿಯುವಂತೆ ಮಾಡಿ ಅದರೊಳಗೆ ಮಂಜುಗಡ್ಡೆಯಾಗುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.
ಲಡಾಖಿ ಯುವಕರ ಆಲೋಚನೆಗೆ ತಾಂತ್ರಿಕ ಸ್ಪರ್ಶ ನೀಡಿ ಅವರ ಕನಸನ್ನು ನನಸಾಗಿಸಿದ ಬಾಲಸುಬ್ರಮಣಿಯನ್ ಮತ್ತು ಬಾಸಿತ್ ಅವರ ಸಾಹಸವೀಗ ನವೋದ್ಯಮ. ‘ಏಕರ್ಸ್ ಆಫ್ ಐಸ್’ ಎಂಬ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆ ಈಗಾಗಲೇ ಲಡಾಖ್ನಲ್ಲಿ 12 ವಿವಿಧ ಸ್ಥಳಗಳಲ್ಲಿ ಈ ಸ್ವಯಂಚಾಲಿತ ಯೋಜನೆಯನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ಮೂಲಕ ಲಡಾಖ್ನಲ್ಲಿ 3.1 ಕೋಟಿ ಲೀಟರ್ನಷ್ಟು ಹೆಚ್ಚುವರಿ ಹಿಮ ಲಭ್ಯವಿದ್ದು ಇದನ್ನು ಸ್ಥಳೀಯ ಆಡಳಿತದ ನೆರವಿನೊಂದಿಗೆ ಮತ್ತಷ್ಟು ವಿಸ್ತರಿಸುವ ಯೋಜನೆ ಸಂಸ್ಥೆಗಿದೆ. ಈ ಯೋಜನೆಯ ಪರಿಣಾಮವೀಗ ಅಲ್ಲಿ ಅಂತರ್ಜಲದ ಮಟ್ಟ ಕೂಡ ಏರಿಕೆಯಾಗಿರುವುದನ್ನು ಸ್ಥಳೀಯರು ಗಮನಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ರಕ್ಷಣಾ ಇಲಾಖೆಯಡಿ ಎತ್ತರ ಪ್ರದೇಶದಲ್ಲಿ ಸಂಶೋಧನೆ ಕೈಗೊಳ್ಳುತ್ತಿರುವ ದಿಹಾರ್ ಸಂಸ್ಥೆಯು ಸ್ಥಳೀಯ ಕೃಷಿಕರಿಗಾಗಿ ಅತಿ ಕಡಿಮೆ ಖರ್ಚಿನ ಹಸಿರುಮನೆಗಳನ್ನು ರೂಪಿಸಿದೆ. ಕಲ್ಲಿನ ಗೋಡೆಯ ಪುಟ್ಟ ಕೋಣೆಯ ಮೇಲೆ ಪ್ಲಾಸ್ಟಿಕ್ ಮತ್ತು ಗೋಣಿಯ ಹೊದಿಕೆಗಳನ್ನು ಹೊದಿಸಿ ಒಳಗಿನ ತಾಪಮಾನ ಹೊರಗಿನಕ್ಕಿಂತ ಏಳೆಂಟು ಡಿಗ್ರಿ ಹೆಚ್ಚಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಈ ಕೊಠಡಿಯೊಳಗೆ ಇದೀಗ ರೈತರು ವರ್ಷಪೂರ್ತಿ ತರಹೇವಾರಿ ತರಕಾರಿ ಬೆಳೆಯುತ್ತಿದ್ದಾರೆ. ಜತೆಗೆ ಸ್ಥಳೀಯ ತೋಟಗಾರಿಕಾ ಇಲಾಖೆ ಇಲ್ಲಿನ ರೈತರೊಡನೆ ಕೈಜೋಡಿಸಿ ಸುರಂಗಗಳನ್ನು ತೋಡಿ ಅದರೊಳಗೆ ವಿವಿಧ ಬೆಳೆಗಳನ್ನು ಬೆಳೆಯುವ ಪ್ರಕ್ರಿಯೆ ಆರಂಭಿಸಿದೆ. ಲಡಾಖ್ ಈಗ ಹಿಮದ ಜತೆಗೆ ಮತ್ತೆ ಹಸಿರಿನ ಚಾದರ ಹೊದ್ದುಕೊಳ್ಳುತ್ತಿದೆ. ಊರು ಬಿಡುವ ತಯಾರಿಯಲ್ಲಿದ್ದ ಯುವಕರನ್ನು ಇಲ್ಲೇ ನೆಲೆಸುವಂತೆ ಮಾಡಿದೆ ತಂತ್ರಜ್ಞಾನ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)