ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಸಂದೇಶವಿದು!...ಕೆಪಿಸಿಸಿ ಹೊಣೆ ಹೊತ್ತ ಬೆನ್ನಲ್ಲೇ ರಾಷ್ಟ್ರೀಯ ನಾಯಕರಿಗೆ ಧನ್ಯವಾದ ತಿಳಿಸಿದ ಹರಿಪ್ರಸಾದ್! | BK Hariprasad

BK Hariprasad | ಕೆಪಿಸಿಸಿ ನೂತನ ಅಧ್ಯಕ್ಷ  ಬಿ ಕೆ ಹರಿಪ್ರಸಾದ್
BK Hariprasad | ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್
Published on
ಬೆಂಗಳೂರು: ಅಧಿಕಾರ, ಸಚಿವ ಸ್ಥಾನ ಹಾಗೂ ಸ್ಥಾನಮಾನ ಬೇಕು ಎನ್ನುವವರು ಸಿಎಂ ಡಿ.ಕೆ. ಶಿವಕುಮಾರ್ ಜೊತೆ ಹೋಗಿ. ಪಕ್ಷ, ಹೋರಾಟ ಹಾಗೂ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಬೇಕು ಎನ್ನುವವರು ನನ್ನ ಜೊತೆ ಬನ್ನಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕರೆ ನೀಡಿದ್ದು, ನಮ್ಮಲ್ಲಿ ಯಾವುದೇ ಬಣವಿಲ್ಲ, ಸರ್ಕಾರ ಮತ್ತು ಪಕ್ಷದಲ್ಲಿ ನಾವೆಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್​, ನನ್ನ ಮೇಲೆ ನಂಬಿಕೆಯಿಟ್ಟು ಹೈಕಮಾಂಡ್ ಈ ಜವಾಬ್ದಾರಿ ನೀಡಿದೆ. ಸೋನಿಯಾ ಗಾಂಧಿ ಅವರ ಆಶೀರ್ವಾದ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠ ನಾಯಕರು ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ನಾನು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಯಾವತ್ತೂ ಸಚಿವ ಸ್ಥಾನ ಬೇಕು ಎಂದು ಕೇಳಿದವನಲ್ಲ, ಅಧಿಕಾರಕ್ಕಾಗಿ ಇರುವವನಲ್ಲ, ನಾನೊಬ್ಬ ಕಾಂಗ್ರೆಸ್‌ನ ಸಾಮಾನ್ಯ ಸಿಪಾಯಿ. ನಮ್ಮ ಹಿರಿಯರ ಆದರ್ಶಗಳನ್ನು ಪಾಲಿಸಿಕೊಂಡು ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಸಹ​ ಹಂಚಿಕೊಂಡಿರುವ ಹರಿಪ್ರಸಾದ್​, ಇಂತಹ ಮಹತ್ವದ ಹುದ್ದೆಗೆ ತಮ್ಮನ್ನು ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್​ ಹೈಕಮಾಂಡ್‌ನ ಈ ತೀರ್ಮಾನವು ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಅಧಿಕಾರವಲ್ಲ, ಬದಲಿಗೆ ಇದು ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನವಾದ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಪರವಾಗಿ ನೀಡಿರುವ ಸ್ಪಷ್ಟ ಸಂದೇಶವಾಗಿದೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ದೀರ್ಘಕಾಲದಿಂದ ಪಕ್ಷದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿರುವ ಬಿ.ಕೆ. ಹರಿಪ್ರಸಾದ್ ಅವರು, ತಾವು ಎಂದಿಗೂ ಯಾವುದೇ ಅಧಿಕಾರದ ಹುದ್ದೆಗಳಿಗಾಗಿ ರಾಜಕೀಯ ಮಾಡಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ತತ್ವಗಳ ಜಾರಿಗೆ ಮುಡಿಪಾಗಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು ಹಾಗೂ ಹುದ್ದೆಗಿಂತ ಜನರ ಹಿತವೇ ಮುಖ್ಯ ಎಂಬ ತತ್ವದಡಿಯಲ್ಲೇ ತಾವು ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವೆಂಬ ಪಕ್ಷ ಕಟ್ಟುವ ಪವಿತ್ರ ಕಾಯಕವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

ದುರಿತ ಕಾಲದಲ್ಲಿ ದೊಡ್ಡ ಜವಾಬ್ದಾರಿ

ದೇಶದಲ್ಲಿ ದ್ವೇಷದ ರಾಜಕಾರಣ, ಧರ್ಮದ ಹೆಸರಿನಲ್ಲಿ ಧ್ರುವೀಕರಣ ಮತ್ತು ಸಂವಿಧಾನ ವಿರೋಧಿ ಪ್ರವೃತ್ತಿಗಳು ಹೆಚ್ಚುತ್ತಿರುವ ಇಂತಹ ಕಠಿಣ ಹಾಗೂ ದುರಿತ ಕಾಲದಲ್ಲಿ ತಮಗೆ ಈ ದೊಡ್ಡ ಜವಾಬ್ದಾರಿ ಸಿಕ್ಕಿರುವುದು ಹೊಸ ಸವಾಲಾಗಿದೆ ಎಂದಿರುವ ಹರಿಪ್ರಸಾದ್​ ಅವರು, ಪಕ್ಷದ ನಿಷ್ಠಾವಂತ ಮತ್ತು ಸೈದ್ಧಾಂತಿಕ ಕಾರ್ಯಕರ್ತರ ಬಲದಿಂದ ಈ ಸವಾಲನ್ನು ಯಶಸ್ವಿಯಾಗಿ ಎದುರಿಸುವ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನರ ಆಶೋತ್ತರಗಳನ್ನು ತಮಗೆ ಹತ್ತಿರದಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದಿರುವ ನೂತನ ಅಧ್ಯಕ್ಷರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬೂತ್ ಮಟ್ಟದಿಂದ ಸಂಘಟಿಸಿ ಸೈದ್ಧಾಂತಿಕವಾಗಿ ಬಲಪಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂಘಟನಾ ಕಾರ್ಯದಲ್ಲಿ ರಾಜ್ಯದ ಸಮರ್ಥ ಸೈದ್ಧಾಂತಿಕ ನಾಯಕರು ಮತ್ತು ಕಾರ್ಯಕರ್ತರು ತಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಕೇವಲ ಕಾಂಗ್ರೆಸ್ ಮಾತ್ರವಲ್ಲದೆ, ದೇಶದ ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವವರು, ಕೋಮುವಾದದ ವಿರುದ್ಧ ಹೋರಾಡುವವರು, ಸಂವಿಧಾನವನ್ನು ರಕ್ಷಿಸುವ ಹೋರಾಟಗಾರರು ಮತ್ತು ಪ್ರಗತಿಪರ ಚಿಂತನೆ ಹೊಂದಿರುವ ಕೋಟ್ಯಾಂತರ ಕಾಂಗ್ರೆಸ್ಸೇತರ ಕಾರ್ಯಕರ್ತರು ಹಾಗೂ ಜಾತ್ಯತೀತ ಯುವ ಸಮುದಾಯವೂ ನಮ್ಮೊಂದಿಗೆ ಒಗ್ಗೂಡಬೇಕಾದ ತುರ್ತು ಅಗತ್ಯವಿದೆ ಎಂದು ಕರೆ ನೀಡಿರುವ ಹರಿಪ್ರಸಾದ್​, ಸಂವಿಧಾನವೇ ನಮ್ಮ ದಾರಿ, ಸಾಮಾಜಿಕ ನ್ಯಾಯವೇ ನಮ್ಮ ಗುರಿ ಮತ್ತು ಜಾತ್ಯತೀತತೆಯೇ ನಮ್ಮ ಶಕ್ತಿ ಎಂಬ ಕಾಂಗ್ರೆಸ್‌ನ ಮೂಲ ಸಂದೇಶವನ್ನು ಮುಂಚೂಣಿಗೆ ತಂದು, ಎಐಸಿಸಿ ನೀಡಿದ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

ನಮ್ಮ ಕರ್ನಾಟಕ ಮಾಡೆಲ್ ಬಗ್ಗೆ ಹೆಮ್ಮೆ ಇದೆ

ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ನೂತನ ಅಧ್ಯಕ್ಷರು, ಇವತ್ತು ಇಡೀ ದೇಶ ಒಂದು ಕವಲು ದಾರಿಯಲ್ಲಿ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ನಾನು ಹಿಂದುಳಿದ ವರ್ಗ ಅಥವಾ ಮುಂದುವರಿದ ವರ್ಗಕ್ಕೆ ಸೇರಿದವನು ಅನ್ನೋದು ಮುಖ್ಯವಾಗುವುದಿಲ್ಲ. ಯೋಚನೆ ಮತ್ತು ನಿಲುವಿನಲ್ಲಿ ನಾನು ಮುಂದುವರಿದವರಿಗಿಂತಲೂ ಮುಂದುವರಿದವನು ಎಂದರು. 2028ರ ವಿಧಾನಸಭಾ ಚುನಾವಣೆಗೆ ನಾನೇ ಸಿಎಂ ಅಭ್ಯರ್ಥಿ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಇದೆಲ್ಲವೂ ಕೇವಲ ವಾಟ್ಸಪ್ ಯೂನಿವರ್ಸಿಟಿಯ ಅಪಪ್ರಚಾರವಷ್ಟೇ. ನನಗೆ ಸದ್ಯಕ್ಕೆ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಜವಾಬ್ದಾರಿ ಇದೆ. ಅಷ್ಟೇ ಅಲ್ಲದೆ, ಎನ್‌ಆರ್‌ಸಿ (NRC) ಮತ್ತು ಸಿಎಎ (CAA) ನಂತಹ ಕಾಯ್ದೆಗಳ ವಿರುದ್ಧ ಹೋರಾಡುವ ಹೊಣೆಗಾರಿಕೆಯೂ ನನ್ನ ಮೇಲಿದೆ ಎಂದು ಹೇಳಿದರು.

ನನಗೆ ಅಧಿಕಾರ ಎಂದಿಗೂ ಮುಖ್ಯವಲ್ಲ. ಜನಸಾಮಾನ್ಯರ ಧ್ವನಿಯಾಗಿ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ನಮಗೆ ದೇಶದಲ್ಲಿ ಬೇರೆಲ್ಲೂ ಇರುವ ಗುಜರಾತ್ ಮಾಡೆಲ್ ಬೇಕಾಗಿಲ್ಲ. ನಮಗೆ ನಮ್ಮ ಕರ್ನಾಟಕ ಮಾಡೆಲ್ ಬಗ್ಗೆ ಹೆಮ್ಮೆ ಇದೆ ಮತ್ತು ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net