ದೇವನಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ 2ನೇ ದಿನದ ‘ಕಾಂಗ್ರೆಸ್ ನಡೆ ಮತ ರಕ್ಷಣೆ ಕಡೆಗೆ’ ಕಾರ್ಯಾಗಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆ ಚುನಾವಣೆ ಕುರಿತ ಸಭೆ ನಡೆಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಭಾಗವಹಿಸಿದ್ದರು. ಕಾರ್ಯಾಗಾರಕ್ಕೆ ಪಕ್ಷದ ಪದಾಧಿಕಾರಿಗಳು ಮತ್ತು ಮೊದಲ ದಿನ ಗೈರಾಗಿದ್ದ ಸಚಿವರು ಮತ್ತು ಶಾಸಕರ ಹಾಜರಾತಿಗೆ ಸೂಚಿಸಲಾಗಿತ್ತು. ಕಾಂಗ್ರೆಸ್‌ನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 130 ಜನ ಭಾಗವಹಿಸಬೇಕಿತ್ತು. ಈ ಪೈಕಿ 60 ಪದಾಧಿಕಾರಿಗಳು ಗೈರಾಗಿದ್ದರು. ಅವರ ಪಟ್ಟಿ ತರಿಸಿಕೊಂಡ ಸುರ್ಜೇವಾಲಾ ಸಭೆಯಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.