ಹಂಪಿ ಉತ್ಸವ: ಅಭೇದ್ಯ ಪೊಲೀಸ್ ಬಂದೋಬಸ್ತ್

ಹಂಪಿಯಲ್ಲಿ ಬಂದೋಬಸ್ತ್‌ಗಾಗಿ ಮುಖ್ಯ ವೇದಿಕೆಯ ದ್ವಾರದಲ್ಲಿ ಪೊಲೀಸರು ನಿಯೋಜನೆಗೊಂಡಿರುವುದು.
ಹಂಪಿಯಲ್ಲಿ ಬಂದೋಬಸ್ತ್‌ಗಾಗಿ ಮುಖ್ಯ ವೇದಿಕೆಯ ದ್ವಾರದಲ್ಲಿ ಪೊಲೀಸರು ನಿಯೋಜನೆಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಂದ ಶಹಬ್ಬಾಸ್‌ಗಿರಿ
  • ರಕ್ಷಣೆ ನೀಡುವಲ್ಲಿ ಖಾಕಿ ಪಡೆ ಚಾಕಚಕ್ಯತೆ
ತಾಳೂರು ಎಸ್.ಎರ್ರಿಸ್ವಾಮಿ ಹಂಪಿ
ಇತಿಹಾಸ ಪ್ರಸಿದ್ಧ, ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಕೇವಲ ಸಾಂಸ್ಕೃತಿಕ ವೈಭವದಿಂದ ಮಾತ್ರವಲ್ಲದೆ, ಜಿಲ್ಲಾ ಪೊಲೀಸ್ ಇಲಾಖೆಯ ಚಾಕಚಕ್ಯತೆ ಮತ್ತು ಅಚ್ಚುಕಟ್ಟಾದ ಭದ್ರತಾ ವ್ಯವಸ್ಥೆಯಿಂದಾಗಿ ಸಾರ್ವಜನಿಕರ ಶಹಬ್ಬಾಸ್‌ಗಿರಿಗೆ ಪಾತ್ರವಾಗಿದೆ. ಲಕ್ಷಾಂತರ ಜನರು ಸೇರುವ ಈ ಬೃಹತ್ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಹಗಲಿರುಳು ಶ್ರಮಿಸುತ್ತಿದೆ.
ಉತ್ಸವದ ಮೂರು ದಿನಗಳ ಕಾಲ ಹಂಪಿಯ ಸುಮಾರು 60 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಸಂಪೂರ್ಣವಾಗಿ ಪೊಲೀಸ್ ಬಂದೋಬಸ್ತ್‌ಗೆ ಒಳಪಡಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳು ಹಾಗೂ ಐತಿಹಾಸಿಕ ಸ್ಮಾರಕಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಿರ್ಜನ ಪ್ರದೇಶ ಹಾಗೂ ರಸ್ತೆಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ವಿಶೇಷವಾಗಿ ಎರಡು ವಲಯಗಳಲ್ಲಿ ಪೊಲೀಸರನ್ನು ನಿಯೋಜಿಸಿರುವುದು ಈ ಬಾರಿಯ ವಿಶೇಷವಾಗಿದೆ. ಇದರಿಂದಾಗಿ ನಡುರಾತ್ರಿ ಕಾರ್ಯಕ್ರಮ ಮುಗಿದ ನಂತರವೂ ಮಹಿಳೆಯರು ನಿರ್ಭಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿ, ಸಚಿವರು ಹಾಗೂ ಗಣ್ಯರ ಉಪಸ್ಥಿತಿಯಿದ್ದರೂ ಸಹ, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಮಯಪ್ರಜ್ಞೆ ಮತ್ತು ತುರ್ತು ನಿರ್ವಹಣೆ

ಉತ್ಸವದ ಮೊದಲ ದಿನ ಮುಖ್ಯಮಂತ್ರಿ ಆಗಮನದ ವೇಳೆ ಪಟಾಕಿ ಹಚ್ಚಿ ಸ್ವಾಗತಿಸುವಾಗ ಅನಿರೀಕ್ಷಿತವಾಗಿ ಬೆಂಕಿ ಕಿಡಿ ಸಿಡಿದು ಅವಘಡ ಸಂಭವಿಸಿತ್ತು. ಆದರೆ, ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದರು. ಸಾವಿರಾರು ಜನರು ನೆರೆದಿದ್ದ ಸ್ಥಳದಲ್ಲಿ ಆತಂಕ ಮನೆಮಾಡದಂತೆ ಪರಿಸ್ಥಿತಿಯನ್ನು ನಿಭಾಯಿಸಿದ ಸಿಬ್ಬಂದಿಯ ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವೈಜ್ಞಾನಿಕ ಯೋಜನೆ-ಸಾರ್ವಜನಿಕ ಸೌಲಭ್ಯ

ರಾಜ್ಯದ ಬೇರೆಡೆ ನಡೆದ ಉತ್ಸವಗಳಲ್ಲಿ ಸಂಭವಿಸಿದ ಕಾಲ್ತುಳಿತದಂತಹ ಘಟನೆಗಳಿಂದ ಪಾಠ ಕಲಿತಿದ್ದ ಇಲಾಖೆಯು, ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜನದಟ್ಟಣೆಯನ್ನು ನಿಯಂತ್ರಿಸಲು ವೈಜ್ಞಾನಿಕ ಯೋಜನೆಯನ್ನು ರೂಪಿಸಿದೆ. ಉತ್ಸವದ ಐದು ವೇದಿಕೆಗಳ ಸುತ್ತಲೂ ವಾಹನ ಸವಾರರಿಗೆ ತೊಂದರೆಯಾಗದಂತೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕುಸ್ತಿ ಹಾಗೂ ಭಾರ ಎತ್ತುವ ಸ್ಪರ್ಧೆಗಳು ನಡೆಯುವ ಸ್ಥಳಗಳಲ್ಲಿ ಸ್ಪರ್ಧಿಗಳ ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ಹಾಗೂ ವೈದ್ಯರ ತಂಡವನ್ನು ಸನ್ನದ್ಧಗೊಳಿಸಲಾಗಿದೆ. 
ವಿದೇಶಿ ಪ್ರವಾಸಿಗರು ಸೇರಿದಂತೆ ನಾಡಿನ ಮೂಲೆ ಮೂಲೆಯಿಂದ ಬಂದಿದ್ದ ಜನಸ್ತೋಮಕ್ಕೆ ಯಾವುದೇ ಅಡೆತಡೆಯಿಲ್ಲದೆ ಉತ್ಸವ ವೀಕ್ಷಿಸಲು ಸಾಧ್ಯವಾಗಿದ್ದೇ ಪೊಲೀಸ್ ಇಲಾಖೆಯ ಯಶಸ್ಸು. ರಾತ್ರಿ ಇಡೀ ಕಾರ್ಯಕ್ರಮ ನಡೆದರೂ ನಾವು ಸುರಕ್ಷಿತವಾಗಿದ್ದೇವೆ ಎಂಬ ಪ್ರವಾಸಿಗರ ಮಾತುಗಳು ಇಲಾಖೆಯ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಹಂಪಿ ಉತ್ಸವದ ಅಭೂತಪೂರ್ವ ಯಶಸ್ಸಿನ ಹಿಂದೆ ಸಮವಸ್ತ್ರಧಾರಿಗಳ ನಿರಂತರ ಪರಿಶ್ರಮ ಅಡಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net