ಕಿದ್ವಾಯಿ ಸಂಸ್ಥೆಗೆ ಎಚ್‌ಎಎಲ್‌ನಿಂದ 3.85 ಕೋಟಿ ರೂ. ದೇಣಿಗೆ

 ಕಿದ್ವಾಯಿ ಸಂಸ್ಥೆಗೆ ಎಚ್‌ಎಎಲ್‌ನಿಂದ 3.85 ಕೋಟಿ ರೂ. ದೇಣಿಗೆ
ಕಿದ್ವಾಯಿ ಸಂಸ್ಥೆಗೆ ಎಚ್‌ಎಎಲ್‌ನಿಂದ 3.85 ಕೋಟಿ ರೂ. ದೇಣಿಗೆ
Published on

ಪ್ರಮುಖ ಮುಖ್ಯಾಂಶಗಳು

  • * ತಂತ್ರಜ್ಞಾನ ಆಧಾರಿತ ವೈದ್ಯಕೀಯ ಪರಿಕರಗಳ ಹಸ್ತಾಂತರ
  • * ಕ್ಯಾನ್ಸರ್ ಆರೈಕೆ, ಚಿಕಿತ್ಸೆಯಲ್ಲಿ ಕಿದ್ವಾಯಿ ಮುಂಚೂಣಿ
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ 3.85 ಕೋಟಿ ರೂ. ಮೌಲ್ಯದ ವೈದ್ಯಕೀಯ ಪರಿಕರಗಳ ಕೊಡುಗೆ ನೀಡಿದೆ.
ಕಿದ್ವಾಯಿ ಸಂಸ್ಥೆಗೆ ಸೋಮವಾರ ಭೇಟಿ ನೀಡಿದ ಎಚ್‌ಎಎಲ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರದೀಪ್ ಕುಮಾರ್, ಸಂಸ್ಥೆಯ ನಿರ್ದೇಶಕ ಡಾ.ಆರ್. ಕೃಷ್ಣಪ್ಪ ಅವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಪ್ರದೀಪ್ ಕುಮಾರ್, ಕ್ಯಾನ್ಸರ್ ರೋಗಿಗಳಿಗೆ ಅಗತ್ಯ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಲು ಕಿದ್ವಾಯಿ ಸಂಸ್ಥೆಗೆ ಎಚ್‌ಎಎಲ್ ಅಗತ್ಯ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಹಾಗೂ ಮೂಲಸೌಲಭ್ಯ ಕಲ್ಪಿಸಿಕೊಡಲಾಗುವುದು. ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಎಚ್‌ಎಎಲ್ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿ ಈ ಸೌಲಭ್ಯ ಒದಗಿಸಿದೆ ಎಂದು ಹೇಳಿದರು.
ಡಾ.ಆರ್. ಕೃಷ್ಣಪ್ಪ ಮಾತನಾಡಿ, ದೇಶದಲ್ಲಿ ಕ್ಯಾನ್ಸರ್ ಆರೈಕೆ ಒದಗಿಸುವುದರಲ್ಲಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಕಿದ್ವಾಯಿ ಸಂಸ್ಥೆ ಮೂರನೇ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇಂದು ಪಾಶ್ಚಿಮಾತ್ಯ ದೇಶಗಳಿಗೆ ಸರಿಸಮನಾಗಿ ಅತ್ಯಾಧುನಿಕ ಕ್ಯಾನ್ಸರ್ ಆರೈಕೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ಅಳವಡಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಫೆರಿಫೆರಲ್ ಕ್ಯಾನ್ಸರ್ ಘಟಕಗಳ ಮೂಲಕ ರೋಗಿಗಳಿಗೆ ಶೀಘ್ರ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಕಾರ್ಯವೂ ನಡೆಯುತ್ತಿದೆ ಎಂದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ. ನವೀನ್, ಮುಖ್ಯ ಆಡಳಿತಾಧಿಕಾರಿ ವಿ. ಅಜಯ್, ಆರ್ಥಿಕ ಸಲಹೆಗಾರ್ತಿ ಕೆ.ಸಿ. ಸೌಮ್ಯರಾಣಿ, ಅಧಿಕಾರಿಗಳಾದ ಡಾ.ಗ್ಯಾನರಾಜನ್ ಪ್ರಧಾನ್, ಕೆ.ರಮೇಶ್, ಸೌಮೆನ್ ಚೌಧರಿ ಇತರರು ಇದ್ದರು.

ಕಿದ್ವಾಯಿ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಡ ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ನೀಡಲಾಗುತ್ತಿದೆ. ಹಲವಾರು ಸಂಸ್ಥೆಗಳು ಸಿಎಸ್‌ಆರ್ ನಿಧಿ ಅಡಿಯಲ್ಲಿ ಅಗತ್ಯ ಸೌಲಭ್ಯ ಹಾಗೂ ವೈದ್ಯಕೀಯ ಪರಿಕರಗಳನ್ನು ಒದಗಿಸಿ ಪ್ರೋತ್ಸಾಹಿಸುತ್ತಿವೆ. ಈ ಪೈಕಿ ಸಂಸ್ಥೆಗೆ ಎಚ್‌ಎಎಲ್‌ನಿಂದ ಸಾಕಷ್ಟು ನೆರವು ಬಂದಿದೆ.

— ಡಾ.ಆರ್.ಕೃಷ್ಣಪ್ಪ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net