

ಬೆಂಗಳೂರು : ಸೋಲಿನ ನಂತರ ಮತ್ತೆ ಯಶಸ್ಸಿನ ಹಾದಿಗೆ ಮರಳುವುದು ಹೇಗೆ? ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಚಿಂತೆಯನ್ನು ಬಿಡುವುದು ಹೇಗೆ? ನನ್ನ ದೇಹದ ಬಗ್ಗೆ ನನಗಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳುವುದು ಹೇಗೆ? ಹೀಗೆ ಹತ್ತು ಹಲವು ಯುವ ಮನಸ್ಸುಗಳ ತೊಳಲಾಟದ ಪ್ರಶ್ನೆಗಳಿಗೆ ಸರಳ ಉತ್ತರ ನೀಡುವ ಮೂಲಕ ಆರ್ಟ್ ಆ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಜೆನ್ ಝೀ ಗಳೊಂದಿಗೆ ಮುಕ್ತ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ 2 ಸಾವಿರ ಯುವಜನರು ಗುರೂಜಿಯೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಜಾಲತಾಣಗಳ ಕುರಿತ ಆತಂಕ, ಸ್ವಂತ ಗುರುತನ್ನು ರೂಪಿಸಿಕೊಳ್ಳುವುದು, ಸೋಲು, ಆತ್ಮೀಯತೆ ಮತ್ತು ಸುತ್ತಲಿನ ಜಗತ್ತಿನ ಬಗ್ಗೆ ಯುವಜನರ ಜವಾಬ್ದಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಸಂವಾದದಲ್ಲಿ ಚರ್ಚಿಸಲಾಯಿತು.
ಬೇರೆಯವರನ್ನು ಅನುಸರಿಸದೆ, ನಮ್ಮದೇ ಗುರುತನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಪ್ರಶ್ನೆಗೆ; ‘ನೀವೇ ಟ್ರೆಂಡ್‌ಸೆಟರ್ ಆಗಿ’ ಎಂಬ ಮಹತ್ವದ ಸಲಹೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುವ ಯುವಕನೊಬ್ಬನಿಗೆ, ಧ್ಯಾನ, ಸುದರ್ಶನ ಕ್ರಿಯೆ ಮತ್ತು ಭಸ್ತ್ರಿಕಾ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಕೀಳರಿಮೆ ಹೋಗಲಾಡಿಸುವ ಸರಳ ಉಪಾಯವನ್ನು ವಿವರಿಸಿದರು. ಕೆಲವೊಂದಿಷ್ಟು ಪ್ರಶ್ನೆಗಳು ವೈಯಕ್ತಿಕವೆನಿಸಿದರೂ, ಗುರುಗಳ ಉತ್ತರ ಮಾತ್ರ ವಿಶಾಲವಾದ ದೃಷ್ಟಿಕೋನವನ್ನು ತೆರೆದಿಟ್ಟವು.
ಕಾರ್ಯಕ್ರಮದಲ್ಲಿ ಹನುಮಾನ್ ಅಂಶ್ ಚಿತ್ರದ ಕಲಾವಿದರಾದ ಶೋಭಿನವ್ ಸತ್ಯ ಮತ್ತು ಪೂರ್ಣಿಮಾ ತಿವಾರಿ, ಗಾಯಕ ರಾಜೀವ್ ಮತ್ತಿತರರು ಭಾಗವಹಿಸಿದ್ದರು.
ಯುವ ಸಮುದಾಯಕ್ಕೆ ಕೆಲ ಕಿವಿಮಾತು
ಜೀವನದಲ್ಲಿ ಹಿನ್ನಡೆ ಎದುರಾದಾಗ, ಬದುಕಿನ ಸಾಧ್ಯತೆಗಳೇ ಮುಗಿದುಹೋದವು ಎಂಬುದಾಗಿ ತಪ್ಪಾಗಿ ಭಾವಿಸಬಾರದು. ಯುವಜನರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು, ಹೊಸ ಕೌಶಲ್ಯಗಳನ್ನು ಕಲಿಯಬೇಕು ಮತ್ತು ತಾವು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರೂ ಸಂಗೀತ, ಕಲೆ ಹಾಗೂ ಸೃಜನಶೀಲತೆಗೆ ತಮ್ಮ ಜೀವನದಲ್ಲಿ ಜಾಗ ನೀಡಬೇಕು. ಈ ಜಗತ್ತು ನಿಮ್ಮದು. ಅದನ್ನು ನಿಮ್ಮದಾಗಿಸಿಕೊಳ್ಳಿ; ಜವಾಬ್ದಾರಿ ತೆಗೆದುಕೊಳ್ಳಿ. ನಿಮಗೆ ಆಕಾಶವೇ ಮಿತಿ. ನಿಮ್ಮಲ್ಲಿರುವ ಉತ್ಸಾಹ ಮತ್ತು ಹುರುಪನ್ನು ಕಳೆದುಕೊಳ್ಳಬೇಡಿ ಎಂದು ಯುವ ಪ್ರೇಕ್ಷಕರಿಗೆ ಗುರೂಜಿ ಕಿವಿಮಾತು ಹೇಳಿದರು.