ತ್ರಿಮೂರ್ತಿ ರೂಪ ತ್ರಿಗುಣಾತೀತ ಗುರು ದತ್ತಾತ್ರೇಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಯೋಗದ ಕೆಲವು ನಿರ್ದಿಷ್ಟ ಪರಂಪರೆಗಳಲ್ಲಿ, ಯೋಗಿಗಳನ್ನು ‘ಮಂದ, ಮಧ್ಯಮ ಮತ್ತು ಉತ್ತಮ’ ಎಂದು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ. ಮಂದ ವಿಭಾಗದವರು ‘ಪ್ರಜ್ಞಾವಂತರಾಗಿರುವುದು ಎಂದರೆ ಏನು’ ಎಂಬುದನ್ನು ಆಸ್ವಾದಿಸಿರುತ್ತಾರೆ. ಅವರು ಸೃಷ್ಟಿಯ ಮೂಲವನ್ನು ಸವಿದಿರುತ್ತಾರೆ, ಐಕ್ಯತೆಯನ್ನು ಅರಿತಿರುತ್ತಾರೆ. ಆದರೆ ಅದನ್ನು ದಿನಪೂರ್ತಿ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರು ತಮಗೆ ತಾವೇ ನೆನಪಿಸಿಕೊಳ್ಳಬೇಕಾಗುತ್ತದೆ. ಅವರು ಪ್ರಜ್ಞಾವಂತರಾಗಿದ್ದಾಗ, ಆ ಅನುಭವದಲ್ಲಿರುತ್ತಾರೆ. ಇಲ್ಲದಿದ್ದರೆ, ಆ ಇಡೀ ಅನುಭವವನ್ನು ಕಳೆದುಕೊಳ್ಳುತ್ತಾರೆ. ಇದು ಕೇವಲ ಶಾಂತವಾಗಿರುವುದು ಅಥವಾ ಸಂತೋಷವಾಗಿರುವುದರ ಬಗ್ಗೆ ಅಲ್ಲ. ಇದು ಹೆಸರಿಸಲಾಗದ ಪರಮಾನಂದದ ಸ್ಥಿತಿಯಲ್ಲಿರುವುದು. ಆದ್ದರಿಂದ, ಮೊದಲ ವರ್ಗದ ಯೋಗಿಗೆ ಇದರ ಅರಿವಿರುತ್ತದೆ, ಆದರೆ ಅದನ್ನು ಅವರಿಗೆ ನೆನಪಿಸಬೇಕಾಗುತ್ತದೆ ಅಥವಾ ಅವರೇ ನೆನಪಿಸಿಕೊಳ್ಳಬೇಕಾಗುತ್ತದೆ. ಅಥವಾ ಬೇರೊಂದು ರೀತಿಯಲ್ಲಿ ಹೇಳುವುದಾದರೆ, ಅವರ ಗ್ರಹಿಕೆ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ.

ನೀವು ಪ್ರಜ್ಞಾವಂತರಾಗಿದ್ದಾಗ ಮತ್ತು ಗ್ರಹಿಸುವಾಗ, ಸಣ್ಣ ವಿಷಯಗಳಿಂದ ಹಿಡಿದು ದೊಡ್ಡ ವಿಷಯಗಳವರೆಗೆ ಎಲ್ಲವೂ ನಿಮ್ಮ ಗ್ರಹಿಕೆಯಲ್ಲಿರುತ್ತದೆ. ನೀವು ಸಾಕಷ್ಟು ಪ್ರಜ್ಞಾವಂತರಾಗಿಲ್ಲದಿದ್ದಾಗ, ನಿಮ್ಮ ಗ್ರಹಿಕೆ ಕಡಿಮೆಯಾದಾಗ, ಅವು ನಿಮ್ಮ ಗ್ರಹಿಕೆಯಲ್ಲಿರುವುದಿಲ್ಲ. ನಿಮ್ಮ ಗ್ರಹಿಕೆ ತೀರಾ ಕಡಿಮೆಯಾದಾಗ, ಅಂದರೆ ನೀವು ನಿದ್ರೆಗೆ ಜಾರಿದಾಗ, ನಿಮಗೆ ಪ್ರಪಂಚವನ್ನು ಗ್ರಹಿಸಲು ಸಹ ಸಾಧ್ಯವಾಗುವುದಿಲ್ಲ. ಅದು ನಿಮ್ಮ ಅನುಭವದಲ್ಲಿ ಕಣ್ಮರೆಯಾಗಿರುತ್ತದೆ. ಹಾಗೆಯೇ, ಒಂದು ನಿರ್ದಿಷ್ಟ ಆಯಾಮವು ಹೆಚ್ಚು ಸೂಕ್ಷ್ಮವಾಗುತ್ತ ಹೋದಂತೆ, ನಿಮಗೆ ಉನ್ನತ ಮಟ್ಟದ ಅಥವಾ ಹೆಚ್ಚು ಪ್ರಜ್ಞಾಪೂರ್ವಕವಾದ ಗ್ರಹಿಕೆಯ ಅಗತ್ಯವಿರುತ್ತದೆ. ಯಾರೂ ಸಹ 24 ಗಂಟೆಗಳ ಕಾಲ ಬಲವಂತವಾಗಿ ಪ್ರಜ್ಞಾವಂತರಾಗಿರಲು ಸಾಧ್ಯವಿಲ್ಲ. ನೀವು ಪ್ರಜ್ಞಾವಂತರಾಗಿರಲು ಪ್ರಯತ್ನಿಸುತ್ತಿದ್ದರೆ, ಅದನ್ನು ಕೆಲವು ಸೆಕೆಂಡುಗಳು ಅಥವಾ ನಿಮಿಷಗಳ ಕಾಲ ನಿರ್ವಹಿಸಲು ಸಾಧ್ಯವಾದರೆ, ಅದೇ ದೊಡ್ಡ ವಿಷಯ. ಇಲ್ಲದಿದ್ದರೆ, ಗಮನವು ಎಲ್ಲೆಂದರಲ್ಲಿ ಚದುರಿಹೋಗುತ್ತದೆ. ಆದ್ದರಿಂದ, ಯೋಗಿಯ ಮೊದಲ ಹಂತವನ್ನು ‘ಮಂದ’ ಎಂದು ಕರೆಯಲಾಗುತ್ತದೆ. ಜನರು ಸಾಮಾನ್ಯವಾಗಿ ಬಳಸುವ ಅರ್ಥದಲ್ಲಿ ಮಂದ ಎಂದರೆ ದಡ್ಡತನ ಎಂದಲ್ಲ; ಇದು ಗ್ರಹಿಕೆಯ ಮಂದತ್ವ.

ಮಧ್ಯಮ ಯೋಗಿಗಳು- ನೀಮ್ ಕರೋಲಿ ಬಾಬಾ: ಯೋಗಿಗಳ ಎರಡನೇ ವಿಭಾಗ ಅಥವಾ ಹಂತವನ್ನು ‘ಮಧ್ಯಮ’ ಎಂದು ಕರೆಯಲಾಗುತ್ತದೆ. ಇವರಿಗೆ, ಆಂತರಿಕ ಆಯಾಮ ಮತ್ತು ಅದಕ್ಕೂ ಮಿಗಿಲಾದ ಸ್ಥಿತಿಯು ನಿರಂತರವಾಗಿ ಗ್ರಹಿಕೆಯಲ್ಲಿರುತ್ತದೆ, ಆದರೆ ಇಲ್ಲಿರುವ ಭೌತಿಕ ಆಯಾಮವನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇಂದಿಗೂ ಸಹ ಪೂಜಿಸಲ್ಪಡುವ ವಿವಿಧ ಯೋಗಿಗಳು ಇದ್ದಾರೆ, ಆದರೆ ಅವರು ತಮ್ಮ ಜೀವನದಲ್ಲಿ ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರ ಜೀವನದ ಕೆಲವು ಸಂದರ್ಭಗಳಲ್ಲಿ, ಅವರಿಗೆ ಊಟ ಮಾಡಲು ಮತ್ತು ಶೌಚಗೃಹಕ್ಕೆ ಹೋಗಲು ಸಹ ನೆನಪಿಸಬೇಕಾಗಿತ್ತು. ಅವರು ತಮ್ಮೊಳಗೆ ಅದ್ಭುತ ಸ್ಥಿತಿಯಲ್ಲಿರುತ್ತಿದ್ದರು, ಆದರೆ ಅವರು ಅಸಹಾಯಕ ಶಿಶುಗಳಂತಾಗುತ್ತಿದ್ದರು, ಅವರು ಬಾಹ್ಯ ಪ್ರಪಂಚದ ಸಂಪರ್ಕದಲ್ಲಿರುತ್ತಿರಲಿಲ್ಲ.

ಇದಕ್ಕೆ ಒಂದು ಉದಾಹರಣೆ ನೀಮ್ ಕರೋಲಿ ಬಾಬಾ. ತಾವು ಶೌಚಾಲಯಕ್ಕೆ ಹೋಗಬೇಕು ಎಂಬುದೇ ಅವರಿಗೆ ತಿಳಿಯುತ್ತಿರಲಿಲ್ಲ. ಅವರು ಸುಮ್ಮನೆ ಕುಳಿತಿರುತ್ತಿದ್ದರು. ಯಾರಾದರೂ ಬಂದು ‘ನೀವು ಇಷ್ಟು ಗಂಟೆಗಳಿಂದ ಹೋಗಿಲ್ಲ, ನೀವು ಹೋಗಬೇಕು’ ಎಂದು ಹೇಳಿದಾಗ ಅವರು ಹೋಗುತ್ತಿದ್ದರು. ಶಾರೀರಿಕ ಕ್ರಿಯೆಗಳು, ಲೌಕಿಕ ಚಟುವಟಿಕೆಗಳು ಅವರ ಪ್ರಜ್ಞೆಯಲ್ಲಿ ಸಂಪೂರ್ಣವಾಗಿ ಇರಲೇ ಇಲ್ಲ. ಅವರು ಅದ್ಭುತ ಸ್ಥಿತಿಯಲ್ಲಿರುತ್ತಿದ್ದರು, ಆದರೆ ಅದು ಎಷ್ಟೇ ಅದ್ಭುತವಾಗಿದ್ದರೂ, ನೀವು ಆ ಸ್ಥಿತಿಯಲ್ಲಿಯೇ ಉಳಿಯಲು ಸಾಧ್ಯವಿಲ್ಲ. ಏಕೆಂದರೆ ನೀವು ಭೌತಿಕ ಪ್ರಪಂಚದೊಂದಿಗೆ ಸಂಪರ್ಕ ಕಳೆದುಕೊಂಡಾಗ, ನೀವು ಭೌತಿಕ ದೇಹದಲ್ಲಿ ಉಳಿಯಲು ಸಾಧ್ಯವಿಲ್ಲ.

ಉತ್ತಮ ಯೋಗಿಗಳು- ಗುರು ದತ್ತಾತ್ರೇಯರ ಕಥೆ: ಯೋಗಿಗಳ ಮೂರನೇ ಸ್ಥಿತಿಯೆಂದರೆ ಪರಮ ಸತ್ಯದ ನಿರಂತರ ಗ್ರಹಿಕೆಯಲ್ಲಿರುವುದು, ಅದೇ ಸಮಯದಲ್ಲಿ, ಬಾಹ್ಯ ಪ್ರಪಂಚದೊಂದಿಗೆ ಸಂಪೂರ್ಣ ಸಾಮರಸ್ಯದಿಂದಿರುವುದು. ಇದು ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಅವರು ನಿಜವಾಗಿಯೂ ಯೋಗಿಯೇ ಅಥವಾ ಅಲ್ಲವೇ ಎಂಬುದು ನಿಮಗೆ ತಿಳಿಯುವುದೇ ಇಲ್ಲ! ಇದಕ್ಕೆ ಒಂದು ಉದಾಹರಣೆ ದತ್ತಾತ್ರೇಯರು. ಅವರ ಸುತ್ತಲಿನ ಜನರು ಅವರು ಒಂದೇ ಬಾರಿಗೆ ಶಿವ, ವಿಷ್ಣು ಮತ್ತು ಬ್ರಹ್ಮರ ಅವತಾರ ಎಂದು ಹೇಳುತ್ತಿದ್ದರು. ಇದು ಜನರು ವ್ಯಕ್ತಪಡಿಸುವ ವಿಧಾನ. ಏಕೆಂದರೆ ಅವರು ಮಾನವ ರೂಪದಲ್ಲಿದ್ದರೂ, ಅವರಲ್ಲಿ ಮಾನವ ಸಹಜವಾದದ್ದು ಏನೂ ಇರಲಿಲ್ಲ ಎಂಬುದನ್ನು ಜನರು ಕಂಡಿದ್ದರು. ಇದರರ್ಥ ಅವರು ಅಮಾನವೀಯರು ಎಂದಲ್ಲ, ಆದರೆ ಅವರು ಖಂಡಿತವಾಗಿಯೂ ಕೇವಲ ಮನುಷ್ಯರಾಗಿರಲಿಲ್ಲ. ಆದ್ದರಿಂದ, ಜನರು ಅಂತಹ ಗುಣಗಳನ್ನು ಕಂಡಾಗ, ಅವರನ್ನು ಶಿವ, ವಿಷ್ಣು ಮತ್ತು ಬ್ರಹ್ಮರಿಗೆ ಮಾತ್ರ ಹೋಲಿಸಲು ಸಾಧ್ಯವಾಯಿತು. ಜನರು ‘ಈ ಮೂವರ ಅವತಾರವೇ ಇವರಾಗಿದ್ದಾರೆ’ ಎಂದು ಹೇಳಿದರು. ಅದಕ್ಕಾಗಿಯೇ, ಕೆಲವೊಮ್ಮೆ ನೀವು ದತ್ತಾತ್ರೇಯರ ಚಿತ್ರಗಳನ್ನು ನೋಡಿದಾಗ ಅವರನ್ನು ಮೂರು ತಲೆಗಳೊಂದಿಗೆ ಚಿತ್ರಿಸಲಾಗುತ್ತದೆ, ಏಕೆಂದರೆ ಅವರನ್ನು ಈ ಮೂವರ ಅವತಾರವೆಂದು ಪರಿಗಣಿಸಲಾಗುತ್ತದೆ.

ದತ್ತಾತ್ರೇಯರು ಅತ್ಯಂತ ನಿಗೂಢ ಜೀವನ ನಡೆಸಿದರು. ಇಂದು ಕೂಡ, ಕೆಲವು ನೂರು ತಲೆಮಾರುಗಳ ನಂತರವೂ, ದತ್ತಾತ್ರೇಯರ ಆರಾಧಕರು ಶಕ್ತಿಶಾಲಿ ಪಂಗಡವಾಗಿದ್ದಾರೆ. ನೀವು ‘ಕಾನ್​ಫಟ್’ರ ಬಗ್ಗೆ ಕೇಳಿರಬಹುದು. ಇಂದು ಕೂಡ, ಅವರು ಕಪ್ಪು ನಾಯಿಗಳೊಂದಿಗೆ ತಿರುಗಾಡುತ್ತಾರೆ. ದತ್ತಾತ್ರೇಯರ ಸುತ್ತ ಯಾವಾಗಲೂ ಸಂಪೂರ್ಣ ಕಲೆರಹಿತ ಕಪ್ಪು ಬಣ್ಣದ ನಾಯಿಗಳಿರುತ್ತಿದ್ದವು. ನಿಮ್ಮ ಮನೆಯಲ್ಲಿ ಒಂದು ನಾಯಿ ಇದ್ದರೆ, ಅದು ನಿಮಗಿಂತ ಸ್ವಲ್ಪ ಹೆಚ್ಚು ಗ್ರಹಿಕೆಯನ್ನು ಹೊಂದಿದೆ ಎಂಬುದು ನಿಮಗೆ ತಿಳಿಯುತ್ತದೆ. ಅದು ವಾಸನೆ, ಕೇಳುವಿಕೆ ಮತ್ತು ನೋಟದಲ್ಲಿ ನಿಮಗಿಂತ ಸ್ವಲ್ಪ ಉತ್ತಮವಾಗಿದೆ ಎಂದು ತೋರುತ್ತದೆ. ಆದ್ದರಿಂದ, ದತ್ತಾತ್ರೇಯರು ನಾಯಿಯ ಆ ಶಕ್ತಿಯನ್ನು ಬೇರೆ ಮಟ್ಟಕ್ಕೆ ಕೊಂಡೊಯ್ದರು ಮತ್ತು ಅವರು ಸಂಪೂರ್ಣ ಕಪ್ಪಗಿನ ನಾಯಿಗಳನ್ನು ಆರಿಸಿಕೊಂಡರು. ಇಂದು ಕೂಡ, ಕಾನ್​ಫಟ್ಸ್ ತಮ್ಮೊಂದಿಗೆ ಈ ದೊಡ್ಡ ನಾಯಿಗಳನ್ನು ಹೊಂದಿರುತ್ತಾರೆ. ಅವರು ತಮ್ಮ ನಾಯಿಗಳನ್ನು ನಡೆಸದೆ, ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಾರೆ. ಏಕೆಂದರೆ ಅದು ದತ್ತಾತ್ರೇಯರ ಸಾಕುಪ್ರಾಣಿಯಾಗಿತ್ತು. ಆದ್ದರಿಂದ, ಅವರು ಅದನ್ನು ತುಂಬ ವಿಶೇಷವಾಗಿ ನಡೆಸಿಕೊಳ್ಳುತ್ತಾರೆ. ಅವರು ಸ್ಥಾಪಿಸಿದ್ದು ಇಂದಿಗೂ ನಡೆಯುತ್ತಿದೆ ಮತ್ತು ಇದು ಆಧ್ಯಾತ್ಮಿಕ ಸಾಧಕರ ಅತಿ ದೊಡ್ಡ ಪಂಗಡಗಳಲ್ಲಿ ಒಂದಾಗಿದೆ.

ಪರಶುರಾಮರು ಗುರುಗಳನ್ನು ಅರಸುತ್ತ ಹೋದಾಗ: ಮಹಾಭಾರತ ಕಾಲದ ಮಹತ್ತರ ಯೋಧ ಋಷಿಯಾಗಿದ್ದವರು ಪರಶುರಾಮರು. ಅನೇಕ ವಿಧಗಳಲ್ಲಿ, ಅದರಲ್ಲಿ ಭಾಗವಹಿಸದೆಯೇ, ಪರಶುರಾಮರು ಕುರುಕ್ಷೇತ್ರ ಯುದ್ಧದ ವಿಧಿಯನ್ನು ನಿರ್ಧರಿಸಿದರು. ಅವರು ಕರ್ಣನ ಸಾಮರ್ಥ್ಯವನ್ನು ಆರಂಭದಲ್ಲೇ ಕಟ್ಟಿಹಾಕಿದ್ದರು. ಆದ್ದರಿಂದ, ಅವರು ಅಪಾರ ಸಾಮರ್ಥ್ಯಗಳನ್ನು ಹೊಂದಿದ್ದರು, ಆದರೆ ಅವರ ಭಾವನಾತ್ಮಕ ಅಸ್ಥಿರತೆಯು ಅವರ ಜೀವನದ ಪ್ರತಿ ಕ್ಷಣದಲ್ಲೂ ದೈವಿಕತೆಯನ್ನು ಗ್ರಹಿಸಲು ಬಿಡಲಿಲ್ಲ. ಅವರು ಆಗಾಗ ಆ ಸ್ಥಿತಿಯಿಂದ ಹೊರಬರುತ್ತಿದ್ದರು- ಹೆಚ್ಚಿನ ಸಮಯ ಅಸ್ಥಿರತೆಯಿಂದಿರುತ್ತಿದ್ದರು. ಆದ್ದರಿಂದ, ಅವರು ಅನೇಕ ಗುರುಗಳು ಅಥವಾ ಶಿಕ್ಷಕರ ಬಳಿಗೆ ಹೋದರು. ತಾವು ಹುಡುಕುತ್ತಿರುವುದು ಅವರಲ್ಲಿ ಇಲ್ಲ ಎಂದು ತಿಳಿದಾಗ, ಅವರು ಅವರನ್ನು ಕೊಡಲಿಯಿಂದ ವಧಿಸುತ್ತಿದ್ದರು. ಕೊನೆಗೆ ಜನರು ಅವರಿಗೆ ‘ದತ್ತಾತ್ರೇಯರೇ ನಿಮ್ಮ ಪ್ರಶ್ನೆಗೆ ಉತ್ತರ’ ಎಂದು ಹೇಳಿದರು. ಆಗ ಅವರು ದತ್ತಾತ್ರೇಯರಿದ್ದ ಕಡೆಗೆ ಬಂದರು. ಅವರು ತಮ್ಮ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡೇ ಬಂದರು. ಅವರು ದತ್ತಾತ್ರೇಯರು ಇದ್ದ ಕಡೆಗೆ ಬರುತ್ತಿದ್ದಾಗ, ಅಲ್ಲಿ ಅನೇಕ ಇತರ ಆಧ್ಯಾತ್ಮಿಕ ಸಾಧಕರು ನೆರೆದಿದ್ದರು. ಆದರೆ ಅವರುಗಳು ಆಶ್ರಮದೊಳಗೆ ಇಣುಕಿ ನೋಡಿ ಓಡಿಹೋಗುತ್ತಿದ್ದರು!

ಪರಶುರಾಮರು ದತ್ತಾತ್ರೇಯರ ನಿವಾಸದೊಳಗೆ ಕಾಲಿಟ್ಟಾಗ, ಒಂದು ಮಡಿಲಿನಲ್ಲಿ ಮದ್ಯದ ಪಾತ್ರೆ ಮತ್ತು ಮತ್ತೊಂದು ಮಡಿಲಿನಲ್ಲಿ ಯುವತಿಯನ್ನು ಕುಳ್ಳಿರಿಸಿಕೊಂಡು ಕುಳಿತಿದ್ದ ಒಬ್ಬರನ್ನು ಕಂಡರು. ಅವರು ಸುಮ್ಮನೆ ನೋಡಿದರು. ದತ್ತಾತ್ರೇಯರು ಕುಡಿದಂತೆ ಕಾಣುತ್ತಿದ್ದರು. ಪರಶುರಾಮರು ಅವರನ್ನು ನೋಡಿ, ತಮ್ಮ ಕೊಡಲಿಯನ್ನು ಕೊನೆಯ ಬಾರಿಗೆ ಕೆಳಗಿಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದರು. ಉಳಿದವರೆಲ್ಲರೂ ಹೊರಟುಹೋದರು. ಅವರು ನಮಸ್ಕರಿಸಿದ ತಕ್ಷಣ, ಆ ಮದ್ಯದ ಪಾತ್ರೆ ಮತ್ತು ಮಹಿಳೆ ಕಣ್ಮರೆಯಾದರು ಮತ್ತು ದತ್ತಾತ್ರೇಯರು ತಮ್ಮ ಪಾದದ ಬಳಿ ನಾಯಿಯೊಂದಿಗೆ ಸುಮ್ಮನೆ ಕುಳಿತಿದ್ದರು. ಪರಶುರಾಮರು ದತ್ತಾತ್ರೇಯರಲ್ಲಿ ತಮ್ಮ ಮುಕ್ತಿಯನ್ನು ಕಂಡರು.

ತಾವು ಜಗತ್ತಿನಲ್ಲಿ ಏನನ್ನಾದರೂ ಮಾಡಬಹುದು ಮತ್ತು ಆದರೂ ಅದರಲ್ಲಿ ಕಳೆದುಹೋಗುವುದಿಲ್ಲ ಎಂಬುದನ್ನು ದತ್ತಾತ್ರೇಯರು ತೋರ್ಪಡಿಸುತ್ತಿದ್ದರು. ಇದು ಪರಶುರಾಮರಿಗೆ ಒಂದು ಪ್ರಾತ್ಯಕ್ಷಿಕೆಯಾಗಿತ್ತು. ಏಕೆಂದರೆ ಪರಶುರಾಮರು ಅಪಾರ ಸಾಮರ್ಥ್ಯದ ವ್ಯಕ್ತಿ, ಆದರೆ ಈ ಸಾಮರ್ಥ್ಯವು ಕೋಪದಲ್ಲಿ ವ್ಯಕ್ತವಾಗುತ್ತಿತ್ತು, ಭಾವನಾತ್ಮಕ ಅಸ್ಥಿರತೆಯ ಸ್ಥಿತಿಯಲ್ಲಿ ಯಾವಾಗಲೂ ನಕಾರಾತ್ಮಕವಾಗಿ ವ್ಯಕ್ತವಾಗುತ್ತಿತ್ತು. ಆದ್ದರಿಂದ, ದತ್ತಾತ್ರೇಯರು ಒಂದು ನಿರ್ದಿಷ್ಟ ತಂತ್ರವನ್ನು ಬಳಸಿದರು, ಮತ್ತು ಪರಶುರಾಮರು ಆ ಮದ್ಯ ಮತ್ತು ಮಹಿಳೆಯನ್ನು ಹಾಗೂ ಅವರ ಮದ್ಯಪಾನದ ಸ್ಥಿತಿಯನ್ನು ಮೀರಿ ನೋಡಿ, ದತ್ತಾತ್ರೇಯರು ನಿರಂತರವಾಗಿ ದೈವಿಕತೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಅರಿತುಕೊಂಡಾಗ, ಆ ಕ್ಷಣವೇ ಅವರಿಗೆ ಜ್ಞಾನೋದಯವಾಯಿತು. ಒಂದು ವೇಳೆ ಅವರು ತಮ್ಮ ಜೀವನದುದ್ದಕ್ಕೂ ಅಷ್ಟೊಂದು ಗ್ರಹಿಕಾ ಶಕ್ತಿಯನ್ನು ಹೊಂದಿದ್ದರೆ, ಬಹಳಷ್ಟು ಜನರು ಕೊಡಲಿಯ ಏಟಿನಿಂದ ಪಾರಾಗುತ್ತಿದ್ದರು!

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

ಡಿಡಿಡಿ.ಜಿಠಜಚ.ಠಚಛಜಜ್ಠr.ಟ್ಟಜ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net