ಜೆಡಿಎಸ್ ಬೆಳ್ಳಿ ಮಹೋತ್ಸವಕ್ಕೆ ಗುಮ್ಮಟ ನಗರಿ ಸಜ್ಜು, ಬೃಹತ್ ಸಮಾವೇಶಕ್ಕೆ ಕ್ಷಣಗಣನೆ, ಕಿತ್ತೂರು ಕರ್ನಾಟಕ ಭಾಗದಲ್ಲಿ ರಣಕಹಳೆ

ವಿಜಯಪುರ ನಗರದಲ್ಲಿ ನಡೆಯಲಿರುವ ಜೆಡಿಎಸ್ ಬೆಳ್ಳಿ ಮಹೋತ್ಸವಕ್ಕೆ ಸಜ್ಜುಗೊಂಡ ಭವ್ಯ ವೇದಿಕೆ.
ವಿಜಯಪುರ ನಗರದಲ್ಲಿ ನಡೆಯಲಿರುವ ಜೆಡಿಎಸ್ ಬೆಳ್ಳಿ ಮಹೋತ್ಸವಕ್ಕೆ ಸಜ್ಜುಗೊಂಡ ಭವ್ಯ ವೇದಿಕೆ.
Published on

ಪ್ರಮುಖ ಮುಖ್ಯಾಂಶಗಳು

  • ಗುಮ್ಮಟ ನಗರಿಯಲ್ಲಿ ಜೆಡಿಎಸ್ ಬೆಳ್ಳಿ ಮಹೋತ್ಸವ
  • ರಾಜ್ಯದ ಅಂದಾಜು 1 ಲಕ್ಷ ಜನ ಭಾಗಿ ನಿರೀಕ್ಷೆ
  • ಕಿತ್ತೂರು ಕರ್ನಾಟಕ ಭಾಗದಲ್ಲಿ ಶಕ್ತಿ ಪ್ರದರ್ಶನ
ವಿಜಯಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ಹುಡುಕಾಟ ನಡೆದಿರುವಾಗಲೇ ಮನರೇಗಾ ಹಾಗೂ ವಿಬಿಜಿ ರಾಮ್ ಜಿ ವಿಷಯಗಳನ್ನಿಟ್ಟುಕೊಂಡು ಪ್ರಜಾ ಪ್ರಭುವಿನ ಮುಂದೆ ಹೋಗುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜೆಡಿಎಸ್ ಕೂಡ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ‘ಜೆಡಿಎಸ್ ಬೆಳ್ಳಿ ಹಬ್ಬ’ದ ಹೆಸರಲ್ಲಿ ಫೆ. 27ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ವಿಜಯಪುರದ ಐತಿಹಾಸಿಕ ಗೋಳಗುಮ್ಮಟಕ್ಕೆ ಅನತಿ ದೂರದಲ್ಲಿರುವ ಸಿಂದಗಿ ಬೈಪಾಸ್ ಬಳಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.
ವಿಜಯಪುರ ನಗರದಲ್ಲಿ ನಡೆಯಲಿರುವ ಜೆಡಿಎಸ್ ಬೆಳ್ಳಿ ಮಹೋತ್ಸವಕ್ಕೆ ಸಜ್ಜುಗೊಂಡ ಭವ್ಯ ವೇದಿಕೆ.
ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಏಳು ಜಿಲ್ಲೆಗಳ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನೊಳಗೊಂಡು ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಸ್ಥಳದಲ್ಲಿ ಬೃಹತ್ ಶಾಮಿಯಾನಾ ಹಾಕಲಾಗುತ್ತಿದ್ದು, 60 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಬೃಹತ್ ವೇದಿಕೆ ಮನಸೂರೆಗೊಳ್ಳುತ್ತಿದೆ. ಅಲ್ಲಲ್ಲಿ ಪಾರ್ಕಿಂಗ್ ಸೌಲಭ್ಯ, ಕುಡಿಯುವ ನೀರು, ಶೌಚಗೃಹ ಸೇರಿ ಅನೇಕ ಮೂಲ ಸೌಕರ್ಯ ಕಲ್ಪಿಸಲಾಗಿದೆ. ನಗರದ ಪ್ರಮುಖ ಮಾರ್ಗಗಳು ಬ್ಯಾನರ್‌ಗಳು, ಬಾವುಟಗಳಿಂದ ರಾರಾಜಿಸುತ್ತಿವೆ. ಮಹಾತ್ಮರ ವೃತ್ತಗಳೆಲ್ಲ ಅಲಂಕೃತಗೊಂಡಿದ್ದು, ಚುನಾವಣೆ ವಾತಾವರಣ ನೆನಪಿಸುತ್ತಿವೆ.

ಕಾರ್ಯಕರ್ತರಲ್ಲಿ ನವ ಚೈತನ್ಯ

ವಿಧಾನ ಸಭೆ ಚುನಾವಣೆ ಬಳಿಕ ಮಂಕಾಗಿದ್ದ ಜೆಡಿಎಸ್ ಕಾರ್ಯಕರ್ತರು ಇದೀಗ ಬೆಳ್ಳಿ ಮಹೋತ್ಸವದ ಹಿನ್ನೆಲೆ ಸಕ್ರಿಯವಾಗಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಭೇಟಿ ಮುಖಂಡರಲ್ಲಿ ನವ ಚೈತನ್ಯ ತುಂಬಿದೆ. ಪಕ್ಷದ ಕಾರ್ಯಾಲಯ ಝಗಮಗಿಸತೊಡಗಿದೆ.

ದೇವಾನಂದ ಚವಾಣ್, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net