ಹಸಿರೀಕರಣಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ

ಮುಧೋಳ ನಗರದ ನಿರಾಣಿ ಸಕ್ಕರೆ ಕಾರ್ಖಾನೆ ಅವರಣದಲ್ಲಿ ಸಸಿ ನಡೆಸಲಾಯಿತು. ಸಂಗಮೇಶ ನಿರಾಣಿ, ಸಂತೋಷ ಗಾಂವಕಾರ, ಜ್ಯೋತಿಕುಮಾರ, ಸಂಜಯಕುಮಾರ ಬಡಿಗೇರ, ಶಶಿಧರ ಸೊಪ್ಪಿನ, ಅನೀಲ ಹೂಗಾರ ಇದ್ದರು.
ಮುಧೋಳ ನಗರದ ನಿರಾಣಿ ಸಕ್ಕರೆ ಕಾರ್ಖಾನೆ ಅವರಣದಲ್ಲಿ ಸಸಿ ನಡೆಸಲಾಯಿತು. ಸಂಗಮೇಶ ನಿರಾಣಿ, ಸಂತೋಷ ಗಾಂವಕಾರ, ಜ್ಯೋತಿಕುಮಾರ, ಸಂಜಯಕುಮಾರ ಬಡಿಗೇರ, ಶಶಿಧರ ಸೊಪ್ಪಿನ, ಅನೀಲ ಹೂಗಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಪರಿಸರ ದಿನಾಚರಣೆ
  • ಕಾರ್ಮಿಕರು, ಅಧಿಕಾರಿಗಳು ನಿಸರ್ಗ ಜಾಗೃತಿ ವಹಿಸಲಿ
ಮುಧೋಳ: ಒಂದು ಸಸಿ ನೂರು ಜೀವಗಳಿಗೆ ಆಧಾರವಾಗಿದೆ. ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಹಸಿರು ಪರಿಸರ ನಿರ್ಮಾಣವಾದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎಂದು ಉದ್ಯಮಿ ಸಂಗಮೇಶ ನಿರಾಣಿ ಕರೆ ನೀಡಿದರು.
ನಗರದ ನಿರಾಣಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಉಳಿವಿಗೆ ಇಂದಿನ ತಾಂತ್ರಿಕ ಯುಗದಲ್ಲಿ ಗಿಡ-ಮರಗಳ ಅವಶ್ಯಕತೆ ಹೆಚ್ಚಿದೆ. ಕಾರ್ಖಾನೆಯ ಆವರಣ ಹಸಿರೀಕರಣಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ತಾಂತ್ರಿಕ ನಿರ್ದೇಶಕ ಮುರುಗೇಶ ಹತ್ತಿಕಾಳ ಮಾತನಾಡಿ, ಪರಿಸರ ಸಂರಕ್ಷಣೆ ಎಂಬುದು ಕೇವಲ ಒಂದು ದಿನದ ಆಚರಣೆಯಾಗಬಾರದು. ನಾವು ನೆಡುವ ಪ್ರತಿ ಸಸಿ ಮುಂದಿನ ಪೀಳಿಗೆಗೆ ಆಮ್ಲಜನಕದ ಭಂಡಾರವಾಗಲಿದೆ. ಕಾರ್ಖಾನೆಯ ವತಿಯಿಂದ ನಿರಂತರವಾಗಿ ಪರಿಸರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಸಂತೋಷ ಗಾಂವಕಾರ, ಜ್ಯೋತಿಕುಮಾರ, ಸಂಜಯಕುಮಾರ ಬಡಿಗೇರ, ಶಶಿಧರ ಸೊಪ್ಪಿನ, ಅನೀಲ ಹೂಗಾರ ಸೇರಿ ಇತರರಿದ್ದರು.
ಭಾವಗೀತೆ, ನೃತ್ಯ ಪ್ರದರ್ಶನ: ಮುಧೋಳ ನಗರದ ಬಸ್ ನಿಲ್ದಾಣದ ಆವರಣದಲ್ಲಿ ನಿರಾಣಿ ಸಮೂಹದ ವಿಜಯ್ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳು ಪರಿಸರದ ಮಹತ್ವ ಸಾರುವ ಕಿರು ನಾಟಕ, ಭಾವಗೀತೆ ಹಾಗೂ ನೃತ್ಯ ಪ್ರದರ್ಶನದ ಮೂಲಕ ಪ್ರಯಾಣಿಕರ ಗಮನ ಸೆಳೆದರು. ಚಲನಚಿತ್ರ ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ ಅವರು ಪರಿಸರ ಕುರಿತ ತಮ್ಮ ಚಿತ್ರಕಥೆಯ ತುಣುಕನ್ನು ಅಭಿನಯಿಸುವ ಮೂಲಕ ಜಾಗೃತಿ ಮೂಡಿಸಿದರು.
ಶಾಲಾ ಕಾರ್ಯದರ್ಶಿ ಕಮಲಾ ಮುರುಗೇಶ ನಿರಾಣಿ ಮಾತನಾಡಿ, ಭೂಮಿ, ಗಾಳಿ, ನೀರು ಮತ್ತು ಅನ್ನ ಪ್ರಕೃತಿ ನಮಗೆ ನೀಡಿರುವ ಉಚಿತ ಕೊಡುಗೆಗಳು. ಇವುಗಳ ಗುಣಮಟ್ಟವನ್ನು ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.
ಎಲ್ಲವ್ವ ಕೆ. ಮಾಂಗ ಮತ್ತು ಸವಿತಾ ಎಂ. ಮಾಂಗ ಅವರನ್ನು ಸನ್ಮಾನಿಸಲಾಯಿತು. ಸುಪ್ರಿಯಾ ನಿಪ್ಪಾಣಿ, ರಮೇಶ್ ಕಳ್ಳಿಗುದ್ದಿ, ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ಸಿದ್ದು ದಿವಾಣ, ಶಾಲಾ ಪ್ರಾಚಾರ್ಯ ಸುರೇಶ ಅಲ್ಲೂರ, ರಾಜೇಶ್ ನಾಯಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net