ಸಾಸಲು ಬೆಟ್ಟದಲ್ಲಿ ಕೊಂಬಿನ ಗೂಬೆ ಪತ್ತೆ / DODABALLAPUR

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಬೆಟ್ಟದ ಸಾಲಿನಲ್ಲಿ ಅಮ್ಮನ ಮಡಲಿನಲ್ಲಿರುವ ಕೊಂಬಿನ ಗೂಬೆ ಮರಿ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಬೆಟ್ಟದ ಸಾಲಿನಲ್ಲಿ ಅಮ್ಮನ ಮಡಲಿನಲ್ಲಿರುವ ಕೊಂಬಿನ ಗೂಬೆ ಮರಿ.
Published on
ದೊಡ್ಡಬಳ್ಳಾಪುರ : ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ ಕೊಂಬಿನ ಗೂಬೆ (ಕೊಂಬಿನ ಗುಮ್ಮ, ಇಂಡಿಯನ್​ ಗ್ರೇಟ್​ ಹಾರನ್ಸ್​ ಔಲ್​/ಇಂಡಿಯನ್​ ಈಗಲ್​ ಔಲ್​) ಸಾಸಲು ಹೋಬಳಿಯ ಬೆಟ್ಟದ ಸಾಲಿನಲ್ಲಿ ಕಂಡುಬಂದಿದೆ. ಮರಿಯನ್ನು ಪೋಷಣೆ ಮಾಡುತ್ತಿರುವ ತಾಯಿ ಹಾಗೂ ಆಹಾರ ತಂದು ಕೊಡುತ್ತ ಸಮೀಪದ ಮರದಲ್ಲಿ ಕುಳಿತು ಕಾವಲು ಕಾಯುತ್ತಿರುವ ಗಂಡು ಗೂಬೆ ಅಲ್ಲಿ ಕಾಣಿಸಿಕೊಂಡಿವೆ.
ಬೇರೆ ಬೇರೆ ರೀತಿಯ ಮೂಢನಂಬಿಕೆಯಿಂದಾಗಿ ಕೊಂಬಿನ ಗೂಬೆ ಬೇಟೆ ಹೆಚ್ಚಾದ ಕಾರಣದಿಂದ ಈ ಪಕ್ಷಿಯ ಸಂತತಿ ಕ್ಷೀಣಿಸುತ್ತಿದೆ. ಅದರಲ್ಲೂ ಬಯಲು ಪ್ರದೇಶದ ಭಾಗದಲ್ಲಿ ಕೊಂಬಿನಗುಮ್ಮ ಪಕ್ಷಿ ಮೊಟ್ಟೆಯಿಟ್ಟು ಮರಿ ಮಾಡುವವರೆಗೂ ಅತ್ಯಂತ ಅಪಾಯದ ದಿನಗಳನ್ನು ಎದುರಿಸುವಂತಾಗಿದೆ. ವೈರಿ ಪ್ರಾಣಿ, ಪಕ್ಷಿಗಳ ಆತಂಕ ಒಂದು ಕಡೆಯಾದರೆ, ವಾಮಾಚಾರ ಮೂಢನಂಬಿಕೆ ಆಚರಣೆಗೆ ಈ ಪಕ್ಷಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದಾಗಿ ಇತರ ಪಕ್ಷಿಗಳಿಗಿಂತಲೂ ಮನುಷ್ಯರ ಕಣ್ಣು ಕೊಂಬಿನ ಗುಮ್ಮದ ಕಡೆಗೆ ಸದಾ ನೆಟ್ಟಿರುತ್ತದೆ. ಈ ಕಾರಣದಿಂದಾಗಿಯೇ ಬಯಲು ಪ್ರದೇಶದ ಕಲ್ಲು ಬೆಟ್ಟಗಳಲ್ಲಿ, ಕುರುಚಲು ಪ್ರದೇಶದ ಕಾಡುಗಳಲ್ಲಿ ಕೊಂಬಿನ ಗುಮ್ಮದ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಂಬಿನಗುಮ್ಮ ಸಾಮಾನ್ಯವಾಗಿ ಗರುಡನ ಗಾತ್ರದ ಪಕ್ಷಿಯಾಗಿದೆ. ಇದರ ಪಾದಗಳವರೆಗೂ ಪುಕ್ಕಗಳು ಮುಚ್ಚಿಕೊಂಡಿದ್ದು, ಎದೆ ಬೂದು ಬಣ್ಣ, ಎದೆಯ ಮೇಲೆಲ್ಲ ಕಪ್ಪು ಗೀರುಗಳ ಮಚ್ಚೆಯನ್ನು ಹೊಂದಿದೆ. ಇದು ನಿಶಾಚರ ಪಕ್ಷಿ. ಹಗಲೆಲ್ಲ ನಿದ್ರಿಸಿ ರಾತ್ರಿ ಇಲಿ, ಹಾವು, ನಿದ್ರಿಸುತ್ತಿರುವ ಹಕ್ಕಿಗಳು, ನೀರಿನ ಬಳಿಯ ಕಪ್ಪೆ, ಮೀನು, ಎಡಿ ಇತ್ಯಾದಿ ಜಲಚರಗಳನ್ನು ಹಿಡಿದು ತಿನ್ನುತ್ತದೆ. ನವೆಂಬರ್​ನಿಂದ ಏಪ್ರಿಲ್​ವರೆಗೆ ಗೂಡು ಮಾಡಿ ಮೊಟ್ಟೆಯಿಟ್ಟು, ಮರಿಗಳನ್ನು ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net