ಜಲ್ಲಿ, ಸೈಜ್‌ಗಲ್ಲು, ಎಂ.ಸ್ಯಾಂಡ್ ದುಬಾರಿ: ತಮಿಳುನಾಡುನಿಂದ ರಾಜ್ಯಕ್ಕೆ ಪೂರೈಕೆ ಸ್ಥಗಿತ-Gravel, size gravel, M.Sand expensive

 ಪ್ರತಿ ಟನ್ ಎಂ ಸ್ಯಾಂಡ್ ಮತ್ತು ಜಲ್ಲಿ ಮೇಲೆ 300-400 ರೂ. ಹೆಚ್ಚಳ
ಪ್ರತಿ ಟನ್ ಎಂ ಸ್ಯಾಂಡ್ ಮತ್ತು ಜಲ್ಲಿ ಮೇಲೆ 300-400 ರೂ. ಹೆಚ್ಚಳ
Published on

ಹರೀಶ್ ಬೇಲೂರು ಬೆಂಗಳೂರು

ರಾಜಧಾನಿ ಸುತ್ತಮುತ್ತ ಜಿಲ್ಲೆಗಳಲ್ಲಿ ಪ್ರತಿ ಟನ್ ಎಂ ಸ್ಯಾಂಡ್ ಮತ್ತು ಜಲ್ಲಿ ಮೇಲೆ 300-400 ರೂ. ಹೆಚ್ಚಳವಾದರೆ, ಒಂದು ಸಾವಿರ ಸೈಜುಗಲ್ಲು ಮೇಲೆ 3,500 ರೂ. ಜಾಸ್ತಿಯಾಗಿದೆ. ಇವುಗಳ ಅಭಾವದಿಂದ ಎಲ್ಲ ಬಗೆಯ ನಿರ್ಮಾಣ ಹಂತದ ಕಾಮಗಾರಿಗಳಿಗೂ ಹಿನ್ನಡೆಯಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಕಾವೇರಿ ಕ್ರಷರ್ಸ್ ಕ್ವಾರಿಯಲ್ಲಿ ಜು.2ರಂದು ಭೀಕರ ಬಂಡೆ ಕುಸಿತ ದುರಂತ ಸಂಭವಿಸಿ 7 ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆ ಸಂಭವಿಸಿದ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮುಂಜಾಗ್ರತಾವಾಗಿ ಬೆಂಗಳೂರು ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದ 54 ಕಲ್ಲು ಕ್ವಾರಿಗಳನ್ನು ಬಂದ್ ಮಾಡಿದೆ.
ತಮಿಳುನಾಡು ಸರ್ಕಾರವು, ಸ್ಥಳೀಯವಾಗಿ ಉತ್ಪಾದನೆಯಾಗುವ ಎಂ ಸ್ಯಾಂಡ್, ಜಲ್ಲಿಕಲ್ಲು ಮತ್ತು ಸೈಜುಗಲ್ಲುಗಳನ್ನು ಹೊರ ರಾಜ್ಯಗಳಿಗೆ ಸರಬರಾಜು ಮಾಡದಂತೆ ನಿಷೇಧಿಸಿದೆ. ಈ ಎಲ್ಲ ಕಾರಣಗಳಿಂದ ಬೆಂಗಳೂರು ನಗರ, ಬೆಂ, ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಬಿಸಿ ತಟ್ಟಿದೆ. ಜತೆಗೆ, ಇದನ್ನೇ ನಂಬಿಕೊಂಡಿದ್ದ ಸಾವಿರಾರು ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕ್ವಾರಿಗಳನ್ನು ಮುಚ್ಚಿರುವುದರಿಂದ ಸರ್ಕಾರಕ್ಕೆ ಬರಬೇಕಿದ್ದ ತೆರಿಗೆ ಸಂಗಹ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಎಷ್ಟು ದರ ಏರಿಕೆ?
ಬಂಡೆ ಕುಸಿತ ದುರಂತ ಸಂಭವಿಸುವ ಮುನ್ನ ಪ್ರತಿ ಟನ್ ಜಲ್ಲಿಗೆ 600-650 ರೂ. ಇತ್ತು. ಇದೀಗ 750 ರೂ.ನಿಂದ 900 ರೂ. ಆಗಿದೆ. ಟನ್ ಎಂಸ್ಯಾಂಡ್‌ಗೆ(ಡಬಲ್ ವಾಶ್) 725-750 ರೂ. ಇತ್ತು. ಈಗ 900 ರೂ.ನಿಂದ 1,000 ರೂ. ಆಗಿದೆ. ಸಾವಿರ ಸೈಜುಗಲ್ಲು 23 ಸಾವಿರ ರೂ. ಇತ್ತು. ಇದೀಗ 26.500 ರೂ.ಆಗಿದೆ. 6 ಚಕ್ರದ ಲಾರಿಯಲ್ಲಿ ತುಂಬಿದ ಬೋಲ್ಡರ್ಸ್‌ಗೆ 8 ಸಾವಿರ ರೂ.ನಿಂದ 10,500 ರೂ. ಏರಿಕೆಯಾಗಿದೆ. ಬೋಲ್ಡಸ್,ಎಂಸ್ಯಾಂಡ್,ಜಲ್ಲಿಕಲ್ಲು ಮತ್ತು ಸೈಜುಗಲ್ಲು ಸರಿಯಾಗಿ ದೊರೆಯದ ಕಾರಣದಿಂದ ಪ್ರತಿ ಸಿಮೆಂಟ್ ಬ್ಲಾಕ್ ಬೆಲೆ 3 ರೂ. ಏರಿಕೆಯಾಗಿದೆ. ಕೆಲವರು ಅನ್ಯ ಮಾರ್ಗವಿಲ್ಲದೆ ಹೆಚ್ಚು ಹಣ ಕೊಟ್ಟು ಜಲ್ಲಿ ಮತ್ತು ಎಂ ಸ್ಯಾಂಡ್ ಖರೀದಿಸಿ ಅರ್ಧಕ್ಕೆ ನಿಂತಿದ್ದ ಮನೆಗಳ ಕಾಮಗಾರಿಗಳ ಮುಗಿಸಲು ಮುಂದಾದರೆ, ದಾಸ್ತಾನು ಇಟ್ಟುಕೊಂಡಿರುವವರು ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ತೊಡಗಿದ್ದಾರೆ.
ಸಾವಿರಾರು ಕೋಟಿ ರೂ. ಆದಾಯ ಸೋರಿಕೆ
ಪ್ರಸ್ತುತ ರಾಜ್ಯದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. 80 ರೂ. ರಾಜಧನ, 18 ರೂ. ಜಿಲ್ಲಾ ನಿರ್ವಹಣೆ ನಿಧಿ, ಜಿಎಸ್‌ಟಿ ಸೇರಿ ಇತರ ಶುಲ್ಕ ಸೇರಿ ಒಟ್ಟು 198 ರೂ. ಪ್ರತಿ ಟನ್ ಕಲ್ಲುಗೆ ಸರ್ಕಾರಕ್ಕೆ ಶುಲ್ಕ ಕಟ್ಟಲಾಗುತ್ತಿದೆ. ಸದ್ಯ ಗುತ್ತಿಗೆ ಆಧಾರದ ಮೇಲೆ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳಿಂದ ಪ್ರತಿ ನಿತ್ಯ ಅಂದಾಜು 12 ಲಕ್ಷ ಟನ್ ಜಲ್ಲಿ, ಎಂಸ್ಯಾಂಡ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಕಾನೂನುಬದ್ಧ ಗಣಿಗಾರಿಕೆ ನಡೆಸುವುದಕ್ಕೆ ಸಮರ್ಪಕವಾಗಿ ನಿಯಮ ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಅಂದಾಜು 8 ಸಾವಿರ ರೂ.ನಿಂದ 10 ಸಾವಿರ ಕೋಟಿ ರೂ. ಆದಾಯ ಖೋತಾವಾಗುತ್ತಿದೆ. ರಾಜ್ಯದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸ್ಪಷ್ಟ ನಿಯಮಗಳನ್ನು ಅನುಷ್ಠಾನಕ್ಕೆ ತರದಿರುವ ಕಾರಣ ಕೇರಳ, ಮಹಾರಾಷ್ಟ್ರ ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರತಿ ನಿತ್ಯ 2 ಲಕ್ಷ ಟನ್ ಜಲ್ಲಿ ಕಲ್ಲು ಮತ್ತು ಎಂ ಸ್ಟಾೃಂಡ್ ಅಕ್ರಮವಾಗಿ ಸರಬರಾಜು ಆಗುತ್ತಿದೆ. ಇದರಿಂದ ಸರ್ಕಾರ ಬರಬೇಕಿದ್ದ ಸಾವಿರಾರು ಕೋಟಿ ರೂ. ಜಿಲ್ಲಾ ಖನಿಜ ನಿಧಿ (ಡಿಎಂಎಫ್​​​), ರಾಜಧನ, ಜಿಎಸ್‌ಟಿ ಆದಾಯ ನಷ್ಟವಾಗುತ್ತಿದೆ.
ಬಂಡೆ ಕುಸಿತ ದುರಂತ ಸಂಭವಿಸಿದ ಬಳಿಕ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 54 ಕಲ್ಲುಕ್ವಾರಿಗಳನ್ನು ಮುಚ್ಚಲಾಗಿದೆ. ತಮಿಳುನಾಡುನಿಂದ ಬೆಂಗಳೂರು ನಗರ ಸುತ್ತಮುತ್ತ ಜಿಲ್ಲೆಗಳಲ್ಲಿ ಸರಬರಾಜುವಾಗುತ್ತಿದ್ದ ಕಟ್ಟಡ ನಿರ್ಮಾಣ ಸಾಮಗ್ರಿಗಳು ಬರುತ್ತಿಲ್ಲ. ಇದರಿಂದಾಗಿ ಎಂ ಸ್ಯಾಂಡ್, ಜಲ್ಲಿಕಲ್ಲು, ಸೈಜುಗಲ್ಲು, ಬೋಲ್ಡಸ್ ಅಭಾವ ಎದುರಾಗಿದೆ. ಬಂದ್ ಮಾಡಿರುವ ಕ್ವಾರಿಗಳು ಸೋಮವಾರದಿಂದ ಕಾರ್ಯಾಚರಣೆಗೆ ನಡೆಸಲಿವೆ. ಬೆಂಗಳೂರು ಸುತ್ತಮುತ್ತ ಹೊರತುಪಡಿಸಿ ರಾಜ್ಯದ ಉಳಿದ ಭಾಗದಲ್ಲಿ ಅಭಾವವಾಗಿಲ್ಲ.
- ಎಸ್. ರಂಗಪ್ಪ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕಲ್ಲುಗಣಿ ಪರವಾನಗಿ ನೀಡುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಪರವಾನಗಿ ನವೀಕರಣ ವ್ಯವಸ್ಥೆಯೂ ಸರಿಯಾಗಿಲ್ಲ. ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು ಸರಬರಾಜು ಆಗುತ್ತಿವೆ. ಇದರಿಂದಾಗಿ ಸರ್ಕಾರಕ್ಕೆ ಬರಬೇಕಿದ್ದ ಆದಾಯವೂ ಖೋತಾವಾಗುತ್ತಿದೆ. ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ನಿಯಮಗಳು ಇಲ್ಲದ ಕಾರಣ ಎಂ ಸ್ಯಾಂಡ್, ಜಲ್ಲಿಕಲ್ಲು, ಸೈಜುಗಲ್ಲು ಮೇಲೆ ಬೆಲೆ ಜಾಸ್ತಿಯಾಗುತ್ತಿದೆ.
ಡಾ. ರವೀಂದ್ರ ಶೆಟ್ಟಿ, ಅಧ್ಯಕ್ಷ
ಫೆಡರೇಷನ್ ಆಫ್​ ಕರ್ನಾಟಕ ಕ್ವಾರಿ ಆ್ಯಂಡ್
ಸ್ಟೋನ್ ಕ್ರಷರ್ ಓನರ್ಸ್‌ ಅಸೋಸಿಯೇಷನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net