ಕನಿಷ್ಠ ವೇತನಕ್ಕೆ ಗ್ರಾಪಂ ನೌಕರರ ಆಗ್ರಹ

ಬೆಳಗಾವಿ ಜಿಪಂ ಎದುರು ಮಂಗಳವಾರ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಬೆಳಗಾವಿ ಜಿಪಂ ಎದುರು ಮಂಗಳವಾರ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿ ಮತ್ತಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದಲ್ಲಿ ಮಂಗಳವಾರ ಸಿಐಟಿಯು ಮತ್ತು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಮ್ಮ ವೃತ್ತದಿಂದ ರ‌್ಯಾಲಿ ಮೂಲಕ ಜಿಲ್ಲಾ ಪಂಚಾಯಿತಿಗೆ ಆಗಮಿಸಿದ ನೌಕರರು, ಧರಣಿ ಕುಳಿತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿದರು. ಬಳಿಕ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.
ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರು ಸರಬರಾಜುದಾರರು, ಜವಾನ, ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನವನ್ನು ಪರಿಗಣಿಸಿ ವೇತನ ಮುಂಬಡ್ತಿ ನೀಡಬೇಕು. ನಿವೃತ್ತರು ಅಥವಾ ಅಕಾಳಿಕ ಮರಣ ಹೊಂದಿದರೆ ರೂ. 6 ಲಕ್ಷ ಇಡಗಂಟು ನೀಡಬೇಕು. ಠರಾವು ಮೂಲಕ ನೇಮಕಾತಿಯಾಗಿರುವ ಸಿಬ್ಬಂದಿಗೆ ಜಿಪಂ ಅನುಮೋದನೆ ಆಗದಿದ್ದರೂ ಇಡಗಂಟು ನೀಡಲು ಆದೇಶಿಸಬೇಕು. ತರಬೇತಿ ಪಡೆದಿರುವ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿವರ್ಷದ ನವೀಕರಣ ಪದ್ಧತಿ ರದ್ದುಪಡಿಸಬೇಕು. 15ನೇ ಹಣಕಾಸು ಆಯೋಗದಡಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. 2017ರ ಒಳಗೆ ನೇಮಕಗೊಂಡು ಹೆಚ್ಚುವರಿ ಕರವಸೂಲಿಗಾರರಿಗೆ ಅನುಮೋದನೆ ನೀಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯಮಟ್ಟದಲ್ಲಿ ಕೊಡುವ ಮುಂಬಡ್ತಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು. ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಜನಸಂಖ್ಯೆ ಆಧರಿಸಿ ಗ್ರಾಪಂಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬುದು ಸೇರಿದಂತೆ ಒಟ್ಟು 13 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿಕೊಂಡರು.
ಎಂ.ಬಿ.ನಾಡಗೌಡ, ಜಿ.ಎಂ.ಜೈನೇಖಾನ್, ವಿ.ಎನ್.ಕಂಪ್ಲಿ, ಕೇಶವ ದಾಸರ, ಜಿತೇಂದ್ರ ಕಾಗನಕರ, ಸಂಗಮೇಶ ಸಿದ್ನಾಳ, ಯಲ್ಲನಗೌಡ ಪಾಟೀಲ, ರಮೇಶ ಹೊಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net