ಅಹಿಂದ ಮತಗಳು ತಮಗೇ ಬೀಳುತ್ತವೆ ಎನ್ನುವುದು ಖಾತರಿ ಇದ್ದ ಮೇಲೆ ನೀವು ಎಲ್ಲಿ ಬೇಕಾದರೂ ಚುನಾವಣೆ ನಿಲ್ಲಬಹುದಿತ್ತಲ್ಲವೇ? ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡಲು ಹೊರಟಿದ್ದೀರಿ. ಹಾಗಿದ್ದ ಮೇಲೆ ನಿಮ್ಮ ಮಗನ ಕ್ಷೇತ್ರವನ್ನು ಖಾಲಿ ಮಾಡಿಸಿ ಅಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಏಕೆ? ಎಂದು ಕೇಳಿದರು.
ಕೋಲಾರ, ಬಾದಾಮಿ ಎಂದು ಎಂದು ಚುನಾವಣೆ ನಿಲ್ಲಲು ಹೊರಟಿದ್ದ ನೀವು ಕೊನೆಗೆ ನಿಮ್ಮ ಮಗನ ಕ್ಷೇತ್ರಕ್ಕೆ ಬಂದು ನಿಂತಿದ್ದೀರಿ. ಈಗ ಅಹಿಂದ ಹೇಳುತ್ತಿದ್ದೀರಿ. ಅಹಿಂದ ಮತಗಳು ಬೀಳುತ್ತವೆ ಎಂದಾಗಿದ್ದರೆ ಸಮಸ್ಯೆ ಏನಿತ್ತು? ಯಾವ ಲೇಬಲ್ ಇಟ್ಟುಕೊಂಡು ಅಹಿಂದ ಮಾಡಲು ಹೊರಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
*ಈಗ ಅಹಿಂದ ಹೇಳುತ್ತಿದ್ದೀರಲ್ಲ? ಆಗ ನೀವು ಕೋಲಾರ, ಬಾದಾಮಿ ಎಂದು ಎಂದು ಚುನಾವಣೆ ನಿಲ್ಲಲು ಹೊರಟಿದ್ದು ಏಕೆ? ಕೊನೆಗೆ ನಿಮ್ಮ ಮಗನ ಕ್ಷೇತ್ರಕ್ಕೆ ಬಂದು ನಿಂತಿದ್ದೇಕೆ?-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
ಅಹಿಂದ ವ್ಯಾಖ್ಯಾನ ಮಾಡುವುದು ನಮಗೆ ಕಷ್ಟವಿದೆ. ಅಹಿಂದ ಹೆಸರು ಹೇಳಲು ಕೂಡ ನಾವು ತಡವರಿಸುತ್ತೇವೆ. ಅಹಿಂದ ವರ್ಗಕ್ಕೆ ಯಾರು ಹೆಚ್ಚು ನ್ಯಾಯ ಕೊಟ್ಟರು ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಮಹಿಳೆಯರಿಗೆ ಚುನಾವಣೆಯಲ್ಲಿ ಮೀಸಲಾತಿ ಕೊಟ್ಟವರು ಯಾರು?ಮುಸ್ಲೀಂ, ನಾಯಕ ಸಮುದಾಯ ಸೇರಿದಂತೆ ಹಲವು ಸಮುದಾಯಕ್ಕೆ ಮೀಸಲಾತಿ ಕೊಟ್ಟವರು ಯಾರು? ಎಂದು ಕೇಳಿದ ಅವರು, ನಮ್ಮ ಅಧಿಕಾರವಧಿಯಲ್ಲಿ ಏನೇನು ಮಾಡಿದ್ದೇವೆ ಎನ್ನುವುದು ಜನರಿಗೆ ತಿಳಿದಿದೆ. ನಾವೇ ಸಿದ್ದರಾಮಯ್ಯ ಅವರನ್ನು ಗುರುತಿಸಿದ್ದೇವೆ ಎಂದು ಈಗ ಹೇಳುವುದಿಲ್ಲ ಎಂದು ಹೇಳಿದರು.
ನಾನು ಯಾವ ಟೀಕೆಗೂ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಎಷ್ಟಾದರೂ ಟೀಕೆ ಟಿಪ್ಪಣಿ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅವರ ಮೊದಲ ಮಗ ಸತ್ತಾಗ ಅವರ ಮನೆಗೆ ಹೋಗಿ ಬಂದಿದ್ದೇನೆ ಎಂದು ಹೇಳಿದರು.