ಸರ್ಕಾರಕ್ಕಿದೆ ಕೈಗಾರಿಕಾ ಜಮೀನು ಮರುವಶ ಅಧಿಕಾರ| High court

High court
High court
Published on
ಶ್ರವಣ್​ ನೀರಬಿದಿರೆ ಬೆಂಗಳೂರು
ಕೈಗಾರಿಕಾ ಉದ್ದೇಶಕ್ಕಾಗಿ ಸರ್ಕಾರದಿಂದ ಪಡೆದ ಜಮೀನನ್ನು ದಶಕಗಳ ಕಾಲ ಬಳಸದೆ ಖಾಲಿ ಬಿಟ್ಟರೆ ಅದನ್ನು ಮರಳಿ ಪಡೆಯುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೈಕೋರ್ಟ್​ ತೀರ್ಪು ನೀಡಿದೆ.
ಮಂಗಳೂರಿನಲ್ಲಿ ಬೃಹತ್​ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶದಿಂದ 1995ರಿಂದ 2000ದ ಅವಧಿಯಲ್ಲಿ ಜೈಪ್ರಕಾಶ್​ ಇಂಜಿನಿಯರಿಂಗ್​ ಆ್ಯಂಡ್​ ಸ್ಟೀಲ್​ ಕಂಪನಿಗೆ (ಜೆಸ್ಕೊ) ನೀಡಿದ್ದ 986 ಎಕರೆ ಕೈಗಾರಿಕಾ ಜಮೀನನ್ನು ಮರಳಿ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್​ ಎತ್ತಿಹಿಡಿದಿದೆ.
ಸರ್ಕಾರದ ನಿರ್ಧಾರ ಪ್ರಶ್ನಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಜಮೀನು ಬಳಸದೆ ಉಳಿಸಿಕೊಂಡಿದ್ದ ಜೆಸ್ಕೊ ಕಂಪನಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ. ಸಾರ್ವಜನಿಕ ಆಸ್ತಿಯನ್ನು ಯಾವುದೇ ಉದ್ದೇಶವಿಲ್ಲದೆ ತಮ್ಮ ವಶದಲ್ಲಿಟ್ಟುಕೊಳ್ಳಲು ಕಂಪನಿಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮರಳಿ ಪಡೆದ ಜಮೀನಿನ ಪೈಕಿ 160 ಎಕರೆಯನ್ನು ಕರಾವಳಿ ರಕ್ಷಣಾ ಪಡೆಯ ತರಬೇತಿ ಕೇಂದ್ರಕ್ಕಾಗಿ ಈಗಾಗಲೇ ನೀಡಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯೋಜನೆ ಆಗಿರುವುದರಿಂದ ಖಾಸಗಿ ಕಂಪನಿಯ ಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ಪೀಠ ಸಹಮತ ವ್ಯಕ್ತಪಡಿಸಿದೆ. 
ಕಂಪನಿಯು 30 ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ಸರ್ಕಾರಕ್ಕೆ ಪಾವತಿಸಿರುವುದರಿಂದ ಜಾಗದ ಮೇಲೆ ತನಗೆ ಹಕ್ಕು ಇದೆ ಎಂಬ ಜೆಸ್ಕೊದ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ಕಂಪನಿಯು ತನಗೆ ನೀಡಲಾದ ಜಮೀನಿಗೆ ಸಂಬಂಧಿಸಿ ಸರ್ಕಾರದೊಂದಿಗೆ ಅಧಿಕೃತ ಗುತ್ತಿಗೆ ಅಥವಾ ಮಾರಾಟದ ಒಪ್ಪಂದ ಮಾಡಿಕೊಂಡಿಲ್ಲ. ಆದ್ದರಿಂದ, ಕಂಪನಿ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಆದರೆ, ಪಾವತಿಸಿರುವ ಹಣವನ್ನು ಮರಳಿ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.‘

ಉಕ್ಕಿನ ಸ್ಥಾವರಕ್ಕೆ ನೀಡಿದ್ದ ಜಾಗ:

ಜೆಸ್ಕೊ ಕಂಪನಿಯು ಮಂಗಳೂರಿನಲ್ಲಿ ಬೃಹತ್​ ಉಕ್ಕಿನ ಸ್ಥಾವರ ಸ್ಥಾಪಿಸಲು 2 ಸಾವಿರ ಕೋಟಿ ರೂ. ಹೂಡಿಕೆ ಮಾಡಲು 1992ರಲ್ಲಿ ಮುಂದೆ ಬಂದಿತ್ತು. ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸುಮಾರು 1,600 ಎಕರೆ ನೀಡಲು ಅನುಮೋದನೆ ನೀಡಿತ್ತು. 1995ರಿಂದ 2000ದ ಅವಧಿಯಲ್ಲಿ ಮಂಗಳೂರಿನ ಕೆಂಜಾರು, ತೋಕೂರು ಮತ್ತು ಕುಲಾಯಿ ಗ್ರಾಮಗಳಲ್ಲಿ ಒಟ್ಟು 986.52 ಎಕರೆ ಜಮೀನನ್ನು ಜೆಸ್ಕೊಗೆ ನೀಡಿತ್ತು. ಕಂಪನಿಯು 30.79 ಕೋಟಿ ರೂ. ಪಾವತಿಸಿ ಜಮೀನು ಪಡೆದುಕೊಂಡಿತ್ತು. 
ಆದರೆ, 2001ರಲ್ಲಿ ಜಾಗತಿಕವಾಗಿ ಉಕ್ಕಿನ ಮಾರುಕಟ್ಟೆಯಲ್ಲಿ ಹಿಂಜರಿತ ಉಂಟಾದ ಕಾರಣ, ಕಂಪನಿಯು ಉಕ್ಕಿನ ಸ್ಥಾವರ ನಿರ್ಮಾಣದ ಯೋಜನೆಯನ್ನು ಕೈಬಿಟ್ಟಿತು. ಬದಲಿಗೆ ಐಟಿ ಪಾರ್ಕ್​, ಆರೋಗ್ಯ ಸಂಕೀರ್ಣ ಮತ್ತು ಹಾಲಿಡೇ ವಿಲೇಜ್​ ಸೇರಿ 7 ವಿಭಿನ್ನ ಯೋಜನೆ ಜಾರಿಗೊಳಿಸುವುದಕ್ಕಾಗಿ ಹೊಸ ಪ್ರಸ್ತಾವನೆಯನ್ನು 2008ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಇದಕ್ಕೆ ಯೋಜನೆಗಳನ್ನು ಎರಡು ವರ್ಷದೊಳಗೆ ಜಾರಿಗೆ ತರಬೇಕೆಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿತ್ತು. ಅಲ್ಲದೆ, ರಸಗೊಬ್ಬರ ಮತ್ತು ರಾಸಾಯನಿಕ ಸಂಕೀರ್ಣ ಮತ್ತು ಟೌನ್​ಶಿಪ್​ ಸ್ಥಾಪಿಸಲು ಸಲ್ಲಿಸಿದ್ದ ಪ್ರಸ್ತಾವನೆಗೂ ಅನುಮತಿ ನೀಡಲಾಗಿತ್ತು. ಆದರೆ, 193.57 ಎಕರೆ ಮರಳಿಸಲು ನಿರ್ದೇಶನ ನೀಡಲಾಗಿತ್ತು.
2010ರ ವೇಳೆಗೆ ಜೆಸ್ಕೊ ಕಂಪನಿಯು ಹೂಡಿಕೆದಾರರನ್ನು ಸೆಳೆಯಲು 550 ಎಕರೆಗೆ ಕ್ರಯಪತ್ರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿತು. ಮೊದಲಿಗೆ 193.57 ಎಕರೆ ಜಾಗ ಮರಳಿ ಕೊಡಿ ಎಂದು ಕೆಐಎಡಿಬಿಯು ಕಂಪನಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು. ಇದನ್ನು ವಿರೋಧಿಸಿದ ಕಂಪನಿ, ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಜಮೀನು ಮರಳಿಸಿದ್ದೇವೆ ಎಂದು ವಾದಿಸಿತ್ತು. 2013ರ ವೇಳೆಗೆ ಯಾವುದೇ ಯೋಜನೆಯಲ್ಲೂ ಪ್ರಗತಿ ಸಾಧಿಸದ ಕಾರಣ, ಜೆಸ್ಕೊ ಕಂಪನಿಗೆ ನೀಡಲಾಗಿದ್ದ ಅಷ್ಟೂ ಜಾಗವನ್ನು (986.52 ಎಕರೆ) ಮರಳಿ ಪಡೆಯಲು ಸರ್ಕಾರ ನಿರ್ಧರಿಸಿತು. ಇದನ್ನು ಪ್ರಶ್ನಿಸಿ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು.

ತನಿಖೆಗೆ ಆದೇಶಿಸಿದ್ದ ಏಕಸದಸ್ಯ ಪೀಠ 

2024ರ ಸೆ.26ರಂದು ತೀರ್ಪು ನೀಡಿದ ಏಕಸದಸ್ಯ ನ್ಯಾಯಪೀಠ, ಜೆಸ್ಕೊ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು. ಅಲ್ಲದೆ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಇಷ್ಟು ದೊಡ್ಡ ಪ್ರಮಾಣದ ಜಾಗವನ್ನು ಕಂಪನಿಗೆ ನೀಡಿದ ಅಧಿಕಾರಿಗಳ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳಿಂದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಕರಾವಳಿ ರಕ್ಷಣಾ ಪಡೆಗೆ ಜಮೀನು 

ದೇಶದ ಮೊದಲ ಕರಾವಳಿ ರಕ್ಷಣಾ ಪಡೆಯ ಅಕಾಡೆಮಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕೆಂಜಾರು ಗ್ರಾಮದಲ್ಲಿ 160 ಎಕರೆ ಮಂಜೂರು ಮಾಡಲಾಗಿದೆ. ಇದನ್ನು ತನ್ನ ವಾದದಲ್ಲಿ ಪ್ರಸ್ತಾಪಿಸಿದ್ದ ರಾಜ್ಯ ಸರ್ಕಾರ, ಖಾಸಗಿ ಕಂಪನಿಯ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ ಎಂದು ವಾದಿಸಿತ್ತು. ಜೆಸ್ಕೊದ ಮೇಲ್ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿರುವುದರಿಂದ ಅಕಾಡೆಮಿ ನಿರ್ಮಾಣ ಕಾರ್ಯಗಳು ಸೂಸೂತ್ರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net