ನ್ಯಾಯಾಂಗ ವ್ಯವಸ್ಥೆ ಡಿಜಿಟಲೀಕರಣಕ್ಕೆ ಸರ್ಕಾರ ಐತಿಹಾಸಿಕ ಹೆಜ್ಜೆ: 704 ಕೋಟಿ ರೂ. ಬೃಹತ್ ಯೋಜನೆ

ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮುಖಾಮುಖಿಯಾಗಿಸಲು ಮತ್ತು ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 704 ಕೋಟಿ ರೂ. ವೆಚ್ಚದ ಬೃಹತ್ ಡಿಜಿಟಲೀಕರಣ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಹೊಸ ಕ್ರಾಂತಿ ನಿರೀಕ್ಷೆ ಮೂಡಿದೆ.
ನ್ಯಾಯಾಂಗ ವ್ಯವಸ್ಥೆ ಡಿಜಿಟಲೀಕರಣಕ್ಕೆ ಸರ್ಕಾರ ಐತಿಹಾಸಿಕ ಹೆಜ್ಜೆ: 704 ಕೋಟಿ ರೂ. ಬೃಹತ್ ಯೋಜನೆ
Published on: 

ಬೆಂಗಳೂರು: ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮುಖಾಮುಖಿಯಾಗಿಸಲು ಮತ್ತು ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 704 ಕೋಟಿ ರೂ. ವೆಚ್ಚದ ಬೃಹತ್ ಡಿಜಿಟಲೀಕರಣ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಹೊಸ ಕ್ರಾಂತಿ ನಿರೀಕ್ಷೆ ಮೂಡಿದೆ.

ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (ಕೆಎಸ್​ಡಿಸಿ) ಮೂಲಕ ನ್ಯಾಯಾಂಗಕ್ಕಾಗಿ ಮೀಸಲಾದ ದತ್ತಾಂಶ ಕೇಂದ್ರ ಹಾಗೂ ವಿಪತ್ತು ಮರುಸ್ಥಾಪನಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಇದರೊಂದಿಗೆ ಡಿಜಿಟಲ್ ಮೂಲಸೌಕರ್ಯಗಳನ್ನು ಬಲಪಡಿಸಲು ವಿವಿಧ ತಾಂತ್ರಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಾಗಲಿದೆ. ಈ ಪ್ರಕ್ರಿಯೆ ಸಮರ್ಪಕ ಅನುಷ್ಠಾನಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ

ಸುಧಾರಣಾ ಇಲಾಖೆ ಇ-ಆಡಳಿತ ವಿಭಾಗವನ್ನು ನೋಡಲ್ ಇಲಾಖೆಯಾಗಿ ನೇಮಿಸಲಾಗಿದೆ. ತಂತ್ರಜ್ಞಾನದ ಅಳವಡಿಕೆಯಿಂದ ಕಡತಗಳ ನಿರ್ವಹಣೆ ಸುಲಭವಾಗುವುದ ಲ್ಲದೆ, ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಯೂ ಸುಗಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ವಿಧೇಯಕ ವಾಪಸ್: ‘ದಿ ಕ್ರಿಮಿನಲ್ ಲಾ ಅಮೆಂಡ್ಮೆಂಟ್ ಆರ್ಡಿನೆನ್ಸ್, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022’ ಅನ್ನು ಹಿಂಪಡೆಯಲು ಸಂಪುಟ ಅನುಮೋದನೆ ನೀಡಿದೆ. ಉಭಯ ಸದನಗಳಿಂದ ಅಂಗೀಕಾರಗೊಂಡಿದ್ದ ಈ ವಿಧೇಯಕವನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಅದರಂತೆ ವಿಧೇಯಕವನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯಕ್ಕೆ ರವಾನಿಸಲಾಗಿತ್ತು. ಕೇಂದ್ರ ಗೃಹ ಮಂತ್ರಾಲಯವು ತನ್ನ ಪತ್ರದಲ್ಲಿ, ಪ್ರಸ್ತಾವಿತ ವಿಧೇಯಕದಲ್ಲಿ ಅಳವಡಿಸಲಾಗಿದ್ದ ಉಪಬಂಧಗಳು ಕೇಂದ್ರದ ನೂತನ ಕಾನೂನಾದ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ದುಷ್ಕೃತ್ಯದ ಆಸ್ತಿಯ ಜಪ್ತಿ ಹಾಗೂ ಮುಟ್ಟುಗೋಲು’ ವಿಷಯದಲ್ಲಿ ಈಗಾಗಲೇ ವಿಸõತವಾಗಿ ಒಳಗೊಂಡಿರುವುದಾಗಿ ತಿಳಿಸಿತ್ತು.

ಹಸು, ಎಮ್ಮೆ ಖರೀದಿಗೆ ಸಹಾಯ ಧನ: ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ 9,600 ಅರ್ಹ ಮಹಿಳಾ ಫಲಾನುಭವಿಗಳಿಗೆ ಶೇ. 25 ಸಹಾಯಧನದಲ್ಲಿ ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಪೋ›ತ್ಸಾಹಧನ ನೀಡುವ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಬಜೆಟ್​ನಲ್ಲಿ ಘೋಷಿಸಿದಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ದೇವದಾಸಿಯರು, ವಿಧವೆಯರು, ತೃತೀಯ ಲಿಂಗದವರು, ಜೀವನಧಾರವಿಲ್ಲದ ಸಂಕಷ್ಟಕ್ಕೊಳಗಾದವರು, ಪರಿತ್ಯಕ್ತೆಯರು, ಕೂಲಿ ಕಾರ್ವಿುಕರು ಹಾಗೂ ನಿರ್ಗತಿಕ ಮಹಿಳೆಯರಿಗೆ ಈ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ. ಕುರಿ ಮತ್ತು ಮೇಕೆ ಸಾಕಾಣಿಕೆ ಉತ್ತೇಜಿಸಲು 9,777 ಅರ್ಹ ಫಲಾನುಭವಿಗಳಿಗೆ ಶೇ. 25 ಸರ್ಕಾರಿ ಸಹಾಯಧನದೊಂದಿಗೆ 10+1 ಕುರಿ/ಮೇಕೆ ಘಟಕಗಳನ್ನು ಸ್ಥಾಪಿಸಲು ಒಟ್ಟು ರೂ. 22.00 ಕೋಟಿ ಅನುದಾನವನ್ನು ಕಾಯ್ದಿರಿಸಲಾಗಿದೆ.

ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್

ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು ಮತ್ತು ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಪುರಸ್ಕೃತ ಯುವ ಆಪದ್ ಮಿತ್ರ ಯೋಜನೆಯಡಿ ಆಯ್ಕೆಯಾದ ಸ್ವಯಂಸೇವಕರಿಗೆ ರಕ್ಷಣಾ ಸಾಮಗ್ರಿಗಳನ್ನೊಳಗೊಂಡ ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್ ಖರೀದಿಸಲು ಅನುಮೋದನೆ ನೀಡಲಾಗಿದೆ. ಸ್ಕೌಟ್ಸ್ ಮತ್ತು ಎನ್​ಎಸ್​ಎಸ್ ಹಾಗೂ ‘ಮೇರಾ ಯುವ ಭಾರತ್’ ಏಜೆನ್ಸಿ ಮೂಲಕ ಒಟ್ಟು 10,350 ಸ್ವಯಂಸೇವಕರಿಗೆ ತರಬೇತಿ ನೀಡಿ, ತಲಾ 10,000 ರೂ. ವೆಚ್ಚದಲ್ಲಿ ರಕ್ಷಣಾ ಉಪಕರಣಗಳನ್ನೊಳಗೊಂಡ ಕಿಟ್ ಒದಗಿಸಲಾಗುತ್ತದೆ.

ಸಂಪುಟ ಸಭೆ ಮುಖ್ಯಾಂಶಗಳು

  • ಬೆಂಗಳೂರು ಪೊಲೀಸ್ ವ್ಯವಸ್ಥೆಯ ಮರುಸಂಘಟನೆಗೆ 5 ಪ್ರತ್ಯೇಕ ಕಮಿಷನರೇಟ್ ಸ್ಥಾಪನೆ, 1,022 ಹುದ್ದೆ ಸೃಜನೆ

  • ಎಸ್​ಟಿ ನಿರುದ್ಯೋಗಿ ಯುವಕ/ ಯುವತಿಯರಿಗೆ ಫಾಸ್ಟ್ ಫುಡ್ ಕಿಯೋಸ್ಕ್ ಯೋಜನೆಗೆ 4 ಲಕ್ಷ ರೂ. ಸಹಾಯಧನ

  • ಕೆಎಸ್​ಆರ್​ಟಿಸಿಗೆ 40, ವಾಯವ್ಯ ಸಾರಿಗೆಗೆ 200, ಬಿಎಂಟಿಸಿಗೆ 200 ಬಸ್ ಖರೀದಿಗೆ -ಠಿ;304 ಕೋಟಿ

  • ಜಾನುವಾರುಗಳ ಔಷಧ, ರಾಸಾಯನಿಕ, ಫೀಡ್ ಸಪ್ಲಿಮೆಂಟ್​ಗಾಗಿ 79.27 ಕೋಟಿ ರೂ.

  • ನ್ಯಾಯಬೆಲೆ ಅಂಗಡಿಗಳಲ್ಲಿ ಬಳಸುವ ತೂಕದ ಯಂತ್ರ ಬಾಡಿಗೆ ಪಡೆಯಲು 44.37 ಕೋಟಿ ರೂ.

  • ಮಳೆ ಮಾಪನ ಕೇಂದ್ರ ಸ್ಥಾಪನೆಗೆ 39.97 ಕೋಟಿ ರೂ.

  • ಮೈಸೂರು ವಿಮಾನ ನಿಲ್ದಾಣದ ರನ್​ವೇ ವಿಸ್ತರಣೆಗೆ ಸಂಬಂಧಿಸಿದಂತೆ ಕಾಮಗಾರಿಗೆ 183.66 ಕೋಟಿ ರೂ.

  • ಪ್ರಜಾಸೇವೆ ಇಲಾಖೆಗೆ ಹುದ್ದೆಗಳನ್ನು ಸೃಜಿಸಲು ಕರ್ನಾಟಕ ಸಾಮಾನ್ಯ ಸೇವೆಗಳು (ವೃಂದ ಮತ್ತು ನೇಮಕ) ನಿಯಮಕ್ಕೆ ಅನುಮೋದನೆ

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು (ಹಿರಿಯ ವೈದ್ಯಾಧಿಕಾರಿ/ ತಜ್ಞರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು) ವಿಶೇಷ ನಿಯಮಕ್ಕೆ ಅನುಮೋದನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net