ಸಂಶೋಧನಾ ಕ್ಷೇತ್ರಕ್ಕೆ ಸರ್ಕಾರದ ನೆರವು ಅಗತ್ಯ| ಕಂಬತ್ತಳ್ಳಿ ದತ್ತಿ ಪ್ರಶಸ್ತಿ ಸ್ವೀಕರಿಸಿ ಎಸ್​.ಪಿ. ಪದ್ಮಪ್ರಸಾದ್​ ಅಭಿಮತ

ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾನ್​ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿಯನ್ನು ಸಂಶೋಧಕ ಡಾ.ಎಸ್​.ಪಿ. ಪದ್ಮಪ್ರಸಾದ್​ ಅವರಿಗೆ ಹಿರಿಯ ಸಾಹಿತಿ ಹಂಪ. ನಾಗರಾಜಯ್ಯ ಪ್ರದಾನ ಮಾಡಿದರು. ಡಾ. ಜಯಲಕ್ಷ್ಮೀ ಅಭಯಕುಮಾರ್​, ಕೆ.ಜೆ. ಪಾರ್ಶ್ವನಾಥ, ಬೈರಮಂಗಲ ರಾಮೇಗೌಡ ಇದ್ದರು.
ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾನ್​ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿಯನ್ನು ಸಂಶೋಧಕ ಡಾ.ಎಸ್​.ಪಿ. ಪದ್ಮಪ್ರಸಾದ್​ ಅವರಿಗೆ ಹಿರಿಯ ಸಾಹಿತಿ ಹಂಪ. ನಾಗರಾಜಯ್ಯ ಪ್ರದಾನ ಮಾಡಿದರು. ಡಾ. ಜಯಲಕ್ಷ್ಮೀ ಅಭಯಕುಮಾರ್​, ಕೆ.ಜೆ. ಪಾರ್ಶ್ವನಾಥ, ಬೈರಮಂಗಲ ರಾಮೇಗೌಡ ಇದ್ದರು.
Published on

ಬೆಂಗಳೂರು: 

ಕಥೆ, ಕಾದಂಬರಿಗಳಿಗೆ ಸಿಕ್ಕಷ್ಟು ಪ್ರಚಾರ ಸಂಶೋಧನಾ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಆದ್ದರಿಂದ ಅನೇಕ ಸಂಶೋಧಕರು ತೆರೆಮರೆಯಲ್ಲೇ ಉಳಿಯುವಂತಾಗಿದೆ ಎಂದು ಜೈನ ಸಾಹಿತ್ಯ ಸಂಶೋಧಕ, ವಿದ್ವಾಂಸ ಡಾ.ಎಸ್​.ಪಿ. ಪದ್ಮಪ್ರಸಾದ್​ ಹೇಳಿದ್ದಾರೆ.

ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾನ್​ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಭಾಷಾವಿಜ್ಞಾನ ವಿಷಯವು ಅನೇಕ ವಿಶ್ವವಿದ್ಯಾಲಯಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕೋರ್ಸ್​ಗಳಿಗೆ ವಿದ್ಯಾರ್ಥಿಗಳ ಕೊರತೆ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಓಲೆಗರಿಗಳ ರಕ್ಷಣೆ, ಹಳೆಗನ್ನಡದ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ 45 ವರ್ಷದೊಳಗಿನ ಯುವಕರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಬಿ.ಎಂ.ಶ್ರೀ ಪ್ರತಿಷ್ಠಾನ ಮತ್ತು ಧರ್ಮಸ್ಥಳದ ಸಂಗ್ರಹಾಲಯಗಳಂತಹ ಸಂಸ್ಥೆಗಳಲ್ಲಿ ಮಾತ್ರ ಓಲೆಗರಿಗಳು ಸಂರಕ್ಷಣೆಯಲ್ಲಿವೆ. ಕನ್ನಡದ ಒಳಸತ್ವವನ್ನು ಪ್ರಪಂಚಕ್ಕೆ ತಿಳಿಸಬೇಕಾದರೆ ರಾಜ್ಯ ಸರ್ಕಾರವು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ.ಹಂಪ. ನಾಗರಾಜಯ್ಯ, ಜಾನಪದ, ಸಂಶೋಧನೆ, ನಾಟಕ, ಅನುವಾದ ಕವಿತೆ ಮತ್ತು ವಿಶೇಷವಾಗಿ ಪ್ರವಾಸ ಕಥನ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯಕ್ಕೆ ಡಾ. ಎಸ್​.ಪಿ. ಪದ್ಮಪ್ರಸಾದ್​ ಅವರ ಕೊಡುಗೆ ಅತ್ಯಂತ ಮೌಲ್ಯಯುತವಾಗಿದೆ. ಅವರು ಕೇವಲ ಪ್ರವಾಸಿಗರಾಗಿ ಅಲ್ಲದೆ, ವಿದೇಶಗಳ ಸಾಂಸತಿಕ ಮತ್ತು ಜನಜೀವನದ ಅಧ್ಯಯನಕ್ಕಾಗಿ ಅನೇಕ ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಕನ್ನಡದ ಪ್ರವಾಸ ಕಥನ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಕೃತಿಗಳನ್ನು ರಚಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕಿ, ಲೇಖಕಿ ಡಾ. ಜಯಲಕ್ಷ್ಮೀ ಅಭಯಕುಮಾರ್​ ಅಭಿನಂದನಾ ನುಡಿಗಳನ್ನಾಡಿದರು. ದತ್ತಿ ಪ್ರಶಸ್ತಿ ದಾನಿ, ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್​ ಕೆ.ಜೆ. ಪಾರ್ಶ್ವನಾಥ ಉಪಸ್ಥಿತರಿದ್ದರು. 

ಜೈನ-ಕನ್ನಡ ಸಾಹಿತ್ಯಕ್ಕೆ ಮನ್ನಣೆ 

ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅನನ್ಯವಾಗಿದೆ. ಆದ್ದರಿಂದ ಈ ಕಾಲಟ್ಟದಲ್ಲಿ ಕನ್ನಡ ಸಾಹಿತ್ಯ ಮತ್ತು ಜೈನ ಧರ್ಮದ ಕೊಂಡಿಯನ್ನು ಜೋಡಿಸುವ, ಹಿಂದಿನ ಕೃತಿಗಳನ್ನು ಅಧ್ಯಯನ ಮಾಡಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕಂಬತ್ತಳ್ಳಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net