ಕನ್ನಡ ಉಳಿವಿಗೆ ಸರ್ಕಾರಿ ಶಾಲೆಗಳು ಅಗತ್ಯ

ದೇಶಭಕ್ತರ ಬಳಗದಿಂದ ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಾರಿಸು ಕನ್ನಡ ಡಿಂಡಿಮ ಕಾರ್ಯಕ್ರಮ ಗಣ್ಯರು ಉದ್ಘಾಟಿಸಿದರು.
ದೇಶಭಕ್ತರ ಬಳಗದಿಂದ ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಾರಿಸು ಕನ್ನಡ ಡಿಂಡಿಮ ಕಾರ್ಯಕ್ರಮ ಗಣ್ಯರು ಉದ್ಘಾಟಿಸಿದರು.
Published on
ಬೇಲೂರು: ಸರ್ಕಾರಿ ಶಾಲೆಗಳನ್ನು ಉಳಿಸಿ ಪೋಷಿಸಿದಾಗ ಮಾತ್ರವೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ದೇಶಭಕ್ತರ ಬಳಗದ ಅಧ್ಯಕ್ಷ ಡಾ. ಸಂತೋಷ್ ಹೇಳಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ದೇಶಭಕ್ತರ ಬಳಗದಿಂದ ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಾರಿಸು ಕನ್ನಡ ಡಿಂಡಿಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರವೇ ಕನ್ನಡ ಉಳಿಸಿ ಎಂದು ಹೇಳಿದರೆ ಸಾಲದು. ಎಲ್ಲರೂ ಕನ್ನಡ ಉಳಿಸಬೇಕೆಂದರೆ ಸರ್ಕಾರಿ ಶಾಲೆಗಳ ಉಳಿವು ಅಗತ್ಯ. ಆದ್ದರಿಂದ ಸರ್ಕಾರ ಮಕ್ಕಳ ಸಂಖ್ಯೆಯ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ಬಿಟ್ಟು ಅಗತ್ಯ ಸೌಲಭ್ಯಗಳನ್ನು ಕಲ್ಪಸಿ ಮಕ್ಕಳು ಮತ್ತು ಪಾಲಕರನ್ನು ಆಕರ್ಷಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾದರೆ ಕನ್ನಡದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮುಂದಾಗಬೇಕು. ಜತೆಗೆ ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ಭಾರತದ ಅತ್ಯಂತ ಶ್ರೇಷ್ಠ ಶಾಸ್ತ್ರೀಯ ಭಾಷೆಯಾಗಿದೆ. ಆದರೆ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಅನ್ಯಭಾಷೆಯ ಪ್ರಾಬಲ್ಯದಿಂದ ಕನ್ನಡಿಗರಿಗೆ ಅವಮಾನವಾಗುತ್ತಿದೆ. ಬೆಳಗಾವಿಯಿಂದ ಕಾಸರಗೋಡುವರೆಗೆ ಕನ್ನಡಿಗರ ಹಕ್ಕುಗಳಿಗೆ ಧಕ್ಕೆಯಾದಾಗ ನಾಡು, ನುಡಿ ವಿಚಾರವಾಗಿ ಹೋರಾಟಕ್ಕೆ ಮುಂದಾಗುವ ಕನ್ನಡಪರ ಸಂಘಟನೆಗಳಿಗೆ ಬೆಂಬಲ ನೀಡಿ ಗೌರವಿಸುವುದು ಎಲ್ಲರ ಕರ್ತವ್ಯವಾಗಬೇಕು. ಜತೆಗೆ ಕನ್ನಡಪರ ಕಾರ್ಯಕ್ರಮಗಳಿಗೆ ವಿದ್ಯ ವಿಕಾಸ ಪದವಿ ಪೂರ್ವ ಕಾಲೇಜು ಆಡಳಿತ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕನ್ನಡಿಗನ ಅಸ್ತಿತ್ವಕ್ಕೆ ಧಕ್ಕೆಯಾದಾಗ ಕರವೇ ಹೋರಾಟಕ್ಕೆ ಇಳಿಯುವುದು ಅನಿವಾರ್ಯ. ಕನ್ನಡಪರ ಹೋರಾಟದಲ್ಲಿ ನಮ್ಮ ಸಂಘಟನೆ ಯಾವಾಗಲೂ ಮುಂದೆ ಇರುತ್ತದೆ. ಮಕ್ಕಳು ಸಹ ಹೆಚ್ಚಿನ ಕನ್ನಡಾಭಿಮಾನ ಬೆಳೆಸಿಕೊಂಡು ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್, ಕರವೇ ರಾಜ್ಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಬ್ದುಲ್ ಖಾದರ್, ಸಾಹಿತಿ ಪ್ರಕಾಶ್ ಸೋಪುರ, ನಿರಂಜನ್, ಪ್ರಾಧ್ಯಾಪಕರಾದ ಸುಜಯ್, ಹರೀಶ್, ಶಿಕ್ಷಕ ಈರೇಶ್, ದೇಶಭಕ್ತರ ಬಳಗದ ಮಹದೇವ ಕುಲಕರ್ಣಿ, ಶೋಭಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net