Government recruitment: ಸರ್ಕಾರಿ ಹುದ್ದೆ ನೇಮಕಾತಿ: ಒಂದೇ ಹುದ್ದೆಗೆ ಎರಡು ಪರೀಕ್ಷೆ ಏಕೆ?

ವಿಧಾನಸೌಧ
ವಿಧಾನಸೌಧ
Published on

ಪ್ರಮುಖ ಮುಖ್ಯಾಂಶಗಳು

  • ಎರಡು ಅವಕಾಶಗಳನ್ನು ಕಲ್ಪಿಸುವುದು ಅಭ್ಯರ್ಥಿಗಳ ದೃಷ್ಟಿಯಿಂದ ಒಳಿತಾದರೂ ಅನಗತ್ಯವಾಗಿ ಪ್ರಕ್ರಿಯೆ ವಿಳಂಬ
  • ಈ ಮೊದಲು ಕೇವಲ ಪೊಲೀಸ್ ಇಲಾಖೆಗೆ ಅಷ್ಟೇ ನಡೆಸುತ್ತಿದ್ದ ಪ್ರತ್ಯೇಕ ಪರೀಕ್ಷೆಯನ್ನು ಈಗ ಎಲ್ಲ ಇಲಾಖೆಗಳಿಗೂ ಅನ್ವಯಿಸಲಾಗಿದೆ.
  • ಪರೀಕ್ಷೆ ಎಷ್ಟೇ ಬಾರಿ ಮಾಡಿದರೂ ಮೀಸಲಾತಿ ಪ್ರಕಾರವೇ ಹುದ್ದೆಗಳನ್ನು ಹಂಚಿಕೆ ಮಾಡಬೇಕಿದೆ. ಆ ಪ್ರಕಾರವೇ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದಾಗಿದೆ
ಎನ್.ಎಲ್. ಶಿವಮಾದು
ಬೆಂಗಳೂರು:

ರಾಜ್ಯದಲ್ಲಿ ನೇಮಕಾತಿ ಪರ್ವ ಆರಂಭವಾಗಿದ್ದು, ಎಲ್ಲ ಇಲಾಖೆಗಳಲ್ಲಿಯೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆದರೆ, ಒಂದೇ ಹುದ್ದೆಗೆ ಎರಡು ಪರೀಕ್ಷೆಗಳನ್ನು ಏಕೆ ಮಾಡಬೇಕು ಎಂಬುದು ಅಭ್ಯರ್ಥಿಗಳ ಪ್ರಶ್ನೆಯಾಗಿದೆ.

ಪ್ರಸ್ತುತ ಕೆಇಎ ಪ್ರಕಟಿಸಿರುವ ಗ್ರಾಮ ಆಡಳಿತ ಅಧಿಕಾರಿ, ವಸತಿ ಶಾಲೆಗಳ ಶಿಕ್ಷಕರ ನೇಮಕ, ಭೂಮಾಪಕರು ಹೀಗೆ ಎಲ್ಲ ಪರೀಕ್ಷೆಗಳನ್ನು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮೀಸಲಾತಿಗೆ ಅನ್ವಯ ಒಂದು ದಿನ ಪರೀಕ್ಷೆ,, ಇತರೆ ಜಿಲ್ಲೆಗಳಿಗೆ ಮೀಸಲಾತಿ ಅನ್ವಯ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ಒಂದೇ ಹುದ್ದೆಗೆ ಎರಡು ಪರೀಕ್ಷೆಗಳನ್ನು ನಡೆಸುವುದರಿಂದ ಪ್ರಕ್ರಿಯೆ ವಿಳಂಬವಾಗಲಿದೆ. ಒಂದೇ ಪರೀಕ್ಷೆ ನಡೆಸಿದರೆ ಆಡಳಿತದ ದೃಷ್ಟಿಯಿಂದ ಪ್ರಕ್ರಿಯೆಗೆ ವೇಗ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡು ಅವಕಾಶಗಳನ್ನು ಕಲ್ಪಿಸುವುದು ಅಭ್ಯರ್ಥಿಗಳ ದೃಷ್ಟಿಯಿಂದ ಒಳಿತಾದರೂ ಅನಗತ್ಯವಾಗಿ ಪ್ರಕ್ರಿಯೆ ವಿಳಂಬವಾಗಲಿದೆ. ಪರೋಕ್ಷವಾಗಿ ಇದು ವಯೋಮಿತಿ ಮೀರುವ ಅಂಚಿನಲ್ಲಿರುವ ಹುದ್ದೆ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ, ಒಂದೇ ಪರೀಕ್ಷೆ ನಡೆಸುವುದು ಉತ್ತಮ ಎಂದಿದ್ದಾರೆ.

ಹೊಸ ನಿಯಮವೇನು?

ಈ ಮೊದಲು ಕೇವಲ ಪೊಲೀಸ್ ಇಲಾಖೆಗೆ ಅಷ್ಟೇ ನಡೆಸುತ್ತಿದ್ದ ಪ್ರತ್ಯೇಕ ಪರೀಕ್ಷೆಯನ್ನು ಈಗ ಎಲ್ಲ ಇಲಾಖೆಗಳಿಗೂ ಅನ್ವಯಿಸಲಾಗಿದೆ. ಇದರಿಂದ ಪ್ರತಿ ಪರೀಕ್ಷೆಯನ್ನು ಎರಡು ದಿನ ಮಾಡಬೇಕಿದೆ. ಇದರಿಂದ ಪರೀಕ್ಷಾ ಪ್ರಾಧಿಕಾರಗಳು ಒಂದೇ ಪರೀಕ್ಷೆಯನ್ನು ಎರಡು ದಿನ ನಡೆಸಲು ಸಾಕಷ್ಟು ಶ್ರಮ ಹಾಕಬೇಕಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ಅಭ್ಯರ್ಥಿಗಳ ನೋಂದಣಿ, ಪ್ರವೇಶ ಪತ್ರ ವಿತರಣೆ, ಪರೀಕ್ಷಾ ಸಿದ್ಧತೆ, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಒಂದೇ ಕೆಲಸವನ್ನು ಎರಡು ಬಾರಿ ಮಾಡಬೇಕಿದೆ. ಇದು ಪರೀಕ್ಷಾ ಪ್ರಾಧಿಕಾರಗಳಿಗೂ ಅನಗತ್ಯ ಕೆಲಸಗಳಾಗಲಿವೆ.

ಪರೀಕ್ಷಾ ಪ್ರಾಧಿಕಾರಗಳಿಗೂ ಒತ್ತಡ

ಒಂದೇ ಪರೀಕ್ಷೆಗೆ ಎರಡು ಅವಕಾಶಗಳನ್ನು ನೀಡುವುದರಿಂದ ಒಂದೇ ಅಭ್ಯರ್ಥಿಯು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ. ಎರಡು ಅವಕಾಶಗಳನ್ನು ನೀಡಿದಾಗ ಸಹಜವಾಗಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳವಾಗಲಿದೆ. ಪರೀಕ್ಷಾ ಪ್ರಾಧಿಕಾರವು ಅವುಗಳನ್ನು ಮೌಲ್ಯಮಾಪನ ಮಾಡಿ ಲಿತಾಂಶ ನೀಡಲು ವಿಳಂಬವಾಗಲಿದೆ ಎಂಬುದು ಇಲಾಖೆ ಮೂಲಗಳ ಮಾಹಿತಿಯಾಗಿದೆ.
ಇಡೀ ದೇಶದಲ್ಲಿ ಪರೀಕ್ಷೆ ನಡೆಸುವ ಯುಪಿಎಸ್‌ಸಿ, ಎಸ್‌ಎಸ್‌ಸಿ, ರಾಜ್ಯದ ವಿವಿಧ ವಿಶ್ವವಿದ್ಯಾಳಯಗಳ ಪರೀಕ್ಷೆಗಳು, ಬ್ಯಾಂಕಿಂಗ್ ಸೇರಿ ಎಲ್ಲ ಕಡೆ ಪರಿಶೀಲಿಸಿಕೊಂಡು ಪರೀಕ್ಷಾ ದಿನವನ್ನು ನಿಗದಿ ಮಾಡಬೇಕಿದೆ. ಪರೀಕ್ಷೆಯನ್ನು ಕೇವಲ ಭಾನುವಾರ ಮಾತ್ರ ನಡೆಸಬೇಕಿರುವುದರಿಂದ ಪರೀಕ್ಷೆ ದಿನಾಂಕ ನಿಗದಿ ಮಾಡುವುದೇ ದೊಡ್ಡ ಸವಾಲಾಗಲಿದೆ.

ಎರಡು ಅವಕಾಶಗಳು ಹೇಗೆ?

ಉದಾ- ಇತರೆ ಜಿಲ್ಲೆಗಳಿಗೆ ಪರೀಕ್ಷೆ ನಡೆಸುವ ವೇಳೆ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಯು ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುತ್ತಾನೆ. ಇದೇ ಅಭ್ಯರ್ಥಿಯು ತಮ್ಮ ಭಾಗದಲ್ಲಿ ಪರೀಕ್ಷೆ ನಡೆಸುವ ಪರೀಕ್ಷೆಗೂ ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುತ್ತಾನೆ. ಇದರಿಂದ ಅನುಕೂಲ ಇರುವವರು ಶುಲ್ಕ ಪಾವತಿಸಿ ಎರಡು ಬಾರಿ ನೋಂದಣಿ ಮಾಡಿಕೊಳ್ಳುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಕೇವಲ ಒಂದೇ ಅವಕಾಶಕ್ಕೆ ಕೊನೆಯಾಗಬೇಕಿದೆ.

ಮೀಸಲಾತಿ ಪ್ರಕಾರ ಹುದ್ದೆ ನಿಗದಿ:

ಕಲ್ಯಾಣ ಕರ್ನಾಟಕ ಭಾಗದ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ.80 ಮತ್ತು ಇತರೆ ಜಿಲ್ಲೆಗಳ ಅಭ್ಯರ್ಥಿಗಳಿಗೆ ಶೇ.20 ಮೀಸಲಾತಿ ನಿಗದಿ ಮಾಡಲಾಗಿದೆ. ಅದೇ ರೀತಿ ಇತರೆ ಜಿಲ್ಲೆಗಳ ಪರೀಕ್ಷೆಯಲ್ಲಿ ಇತರೆ ಜಿಲ್ಲೆಗಳಿಗೆ ಶೇ.92 ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿ ಪಡೆಯುವ ಅಭ್ಯರ್ಥಿಗಳಿಗೆ ಶೇ.8ರಷ್ಟು ಹುದ್ದೆಗಳನ್ನು ನಿಗದಿ ಮಾಡಲಾಗಿದೆ.

ಪರೀಕ್ಷೆ ಒಂದೇ, ಪಟ್ಟಿ ಎರಡು ಮಾಡಿದರೆ ಪರಿಹಾರ

ಒಂದೇ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರೆ ಜಿಲ್ಲೆಗಳ ಮೀಸಲಾತಿ ಪ್ರಕಾರವೇ ಹುದ್ದೆಗಳನ್ನು ಹಂಚಿಕೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದರೆ, ಅಭ್ಯರ್ಥಿಗಳು ತಮಗೆ ಬೇಕಾದ ಕಡೆ ಅರ್ಜಿಗಳನ್ನು ಸಲ್ಲಿಸುತ್ತಾರೆ. ಅದೇ ಪ್ರಕಾರ ಕಲ್ಯಾಣ ಕರ್ನಾಟಕ ಹಾಗೂ ಇತರೆ ಜಿಲ್ಲೆಗಳ ಮೀಸಲಾತಿ ಪ್ರಕಾರವೇ ಮೆರಿಟ್ ಆಧಾರದಲ್ಲಿ ಮತ್ತು ಮೀಸಲಾತಿ ಅನ್ವಯ ಹುದ್ದೆಗಳನ್ನು ಹಂಚಿಕೆ ಮಾಡಬಹುದಾಗಿದೆ. ಪರೀಕ್ಷೆ ಎಷ್ಟೇ ಬಾರಿ ಮಾಡಿದರೂ ಮೀಸಲಾತಿ ಪ್ರಕಾರವೇ ಹುದ್ದೆಗಳನ್ನು ಹಂಚಿಕೆ ಮಾಡಬೇಕಿದೆ. ಆ ಪ್ರಕಾರವೇ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕೆಇಎನಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ.
"

ಸರ್ಕಾರದ ನಿರ್ದೇಶನದಂತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸರ್ಕಾರ ಏನು ನಿಯಮ ಹೇಳಿದೆಯೋ ಅದರ ಪ್ರಕಾರ ಪರೀಕ್ಷೆ ನಡೆಸಿ ಪಟ್ಟಿಯನ್ನು ನೀಡುವುದಷ್ಟೇ ನಮ್ಮ ಕೆಲಸ. ಒಂದು ವೇಳೆ ಒಂದೇ ಪರೀಕ್ಷೆಯನ್ನು ನಡೆಸಬೇಕಾದರೆ, ಸರ್ಕಾರದ ಹಂತದಲ್ಲಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ.

— - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net