ಹಾಗೆಯೇ, ಹೊಸ ಇಲಾಖೆಯು ಕೇವಲ ದೂರುಗಳನ್ನು ಸ್ವೀಕರಿಸಿ ಕೈತೊಳೆದುಕೊಳ್ಳುವುದಿಲ್ಲ. ಬದಲಿಗೆ, ಸಾರ್ವಜನಿಕರ ದೂರು ಇತ್ಯರ್ಥವಾದ ನಂತರ ಅವರ ಪ್ರತಿಕ್ರಿಯೆ ಮತ್ತು ತೃಪ್ತಿಯ ಮಟ್ಟವನ್ನು ಆಧರಿಸಿ ಇಲಾಖೆಯ ಯಶಸ್ಸನ್ನು ಅಳೆಯಲಾಗುತ್ತದೆ. ಅಂದರೆ, ಕಾಗದದ ಮೇಲೆ ‘ದೂರು ಇತ್ಯರ್ಥ’ ಎಂದು ಬರೆದರೆ ಸಾಲದು, ದೂರುದಾರನಿಗೆ ನ್ಯಾಯ ಸಿಕ್ಕಿದೆಯೇ ಎಂಬ ಗುಣಾತ್ಮಕ ಪರಿಶೀಲನೆ ಇಲ್ಲಿ ನಡೆಯಲಿದೆ. ಇದು ಆಡಳಿತದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸಲಿದೆ.