ರಾಜ್ಯದಲ್ಲೇ ಉತ್ತಮ ಶೈಕ್ಷಣಿಕ ತಾಣ ಎಂಬ ಹಿರಿಮೆ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಪ್ರೌಢಶಾಲಾ ಹಂತದಲ್ಲೇ ಮಕ್ಕಳು ಕಲಿಕೆಯಿಂದ ವಿಮುಖರಾಗುತ್ತಿದ್ದಾರೆ. ಶಾಲೆಯನ್ನು ಅರ್ಧದಲ್ಲೇ ಬಿಡುವುದರಲ್ಲಿ ಬಾಲಕಿಯರಿಗಿಂತ ಬಾಲಕರ ಸಂಖ್ಯೆ ಹೆಚ್ಚಾಗಿದೆ.
ಪ್ರೌಢಶಿಕ್ಷಣವು ಮಗುವಿನ ಜೀವನದಲ್ಲಿ ಅತ್ಯಂತ ನಿರ್ಣಾಯಕ ಹಂತ. ಪ್ರಾಥಮಿಕ ಶಿಕ್ಷಣದಲ್ಲಿ ಪಡೆದ ಜ್ಞಾನ ವಿಸ್ತರಿಸಿ, ಉನ್ನತ ಶಿಕ್ಷಣ, ಉದ್ಯೋಗ, ಜವಾಬ್ದಾರಿಯುತ ನಾಗರಿಕ ಜೀವನಕ್ಕೆ ಮಕ್ಕಳನ್ನು ಸಿದ್ಧಪಡಿಸುವ ಹಂತವೇ ಪ್ರೌಢಶಿಕ್ಷಣ. ಆದರೆ, ಇಂತಹ ಮಹತ್ವದ ಕಲಿಕಾಘಟ್ಟದಲ್ಲೇ ಮಕ್ಕಳು ಶಾಲೆಗೆ ಗುಡ್‌ಬೈ ಹೇಳುತ್ತಿರುವುದು ಕಳವಳಕಾರಿಯೇ ಸರಿ.
ಪ್ರೌಢಶಾಲೆ ಬಿಡುತ್ತಿರುವ ಮಕ್ಕಳು!
ಶೇ.72 ಸಾಕ್ಷರತೆ ಇರುವ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 8ರಿಂದ 10 ತರಗತಿಯಲ್ಲಿ 255 ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ಈ ಪೈಕಿ ಬಾಲಕರು ಹೆಚ್ಚಿನ ಪ್ರಮಾಣದಲ್ಲಿ ಸ್ಕೂಲ್‌ಗೆ ವಿದಾಯ ಹೇಳಿ ಕಲಿಕೆಯಿಂದಲೂ ದೂರು ಉಳಿದಿದ್ದಾರೆ.
ಬಾಲಕರ ಸಂಖ್ಯೆ ಕಳೆದ ಮೂರು ವರ್ಷದಲ್ಲಿ 157 ಆಗಿದೆ. ಈ ಅವಧಿಯಲ್ಲಿ 98 ಬಾಲಕಿಯರು ಶಾಲೆಯನ್ನು ಬಿಟ್ಟಿದ್ದಾರೆ. 2023-24ರಲ್ಲಿ 73, 2024-25ರಲ್ಲಿ 9, 2025-26ರಲ್ಲಿ 157 ಬಾಲಕರು ಶಾಲೆಯಿಂದ ಶಾಶ್ವತವಾಗಿ ತ್ಯಜಿಸಿ ಕಲಿಕೆಯನ್ನು ಮೊಟಕುಗೊಳಿಸಿದ್ದಾರೆ. ಅಂತೆಯೇ ಕ್ರಮವಾಗಿ 41, 6, 51 ಬಾಲಕಿಯರು ಸ್ಕೂಲ್ ಬ್ಯಾಗ್‌ನ ಹೊರೆ ಕೆಳಗಿಸಿ ಶಿಕ್ಷಣಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. 1ರಿಂದ 7ನೇ ತರಗತಿಯಲ್ಲಿ ಶಾಲೆ ಬಿಟ್ಟವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಶಾಲೆ ತ್ಯಜಿಸಲು ಕಾರಣ ಏನು?
ಶಾಲೆ ಬಿಡಲು ಅನೇಕ ಕಾರಣಗಳಿವೆ. ಈ ಪೈಕಿ ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪರಿಸ್ಥಿತಿ, ಶಿಕ್ಷಣದಲ್ಲಿ ಆಸಕ್ತಿ ಕಡಿಮೆಯಾಗಿ ಕಲಿಕೆಯಲ್ಲಿ ಹಿಂದುಳಿಯುವುದು, ಪಾಲಕರ ನಿರ್ಲಕ್ಷೃ ಅಥವಾ ಮೇಲ್ವಿಚಾರಣೆ ಕೊರತೆ,
ಗ್ರಾಮೀಣ ಪ್ರದೇಶದಲ್ಲಿ ದೂರದಲ್ಲಿರುವ ಶಾಲೆಗೆ ಹೋಗಲು ಸಾರಿಗೆ ಸಮಸ್ಯೆ, ಮಕ್ಕಳಿಗೆ ಮನೆಯ ಜವಾಬ್ದಾರಿ ಹೆಚ್ಚಾಗುವುದು, ಬಾಲ್ಯವಿವಾಹ, ಬಾಲಕಾರ್ಮಿಕತೆ, ಸ್ನೇಹಿತರ ಪ್ರಭಾವ, ಮೊಬೈಲ್-ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆ, ಶಾಲೆಯಲ್ಲಿ ಸೌಕರ್ಯ ಕೊರತೆ, ಶೌಚಗೃಹ, ಕುಡಿಯುವ ನೀರು, ಅಸುರಕ್ಷಿತ ವಾತಾವರಣ, ಪರೀಕ್ಷಾ ಒತ್ತಡ ಮತ್ತು ಅನುತ್ತೀರ್ಣತೆಯ ಭಯ, ವಿಶೇಷ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಬೆಂಬಲದ ಕೊರತೆ...ಹೀಗೆ ವಿವಿಧ ಕಾರಣಕ್ಕೆ ಮಕ್ಕಳು ಶಾಲೆಯನ್ನು ಬಿಡುತ್ತಿದ್ದಾರೆ.
ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು
ಡ್ರಾಪ್ ಔಟ್ ಪ್ರಮಾಣ ತಗ್ಗಿಸಲು ಶಾಲಾ ಶಿಕ್ಷಣ ಇಲಾಖೆಯಿಂದ ವಿವಿಧ ಕ್ರಮ ವಹಿಸಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಿದ್ಯಾವಾಹಿನಿ ಪೋರ್ಟಲ್ ಮೂಲಕ ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಪತ್ತೆಯಾದ ಮಕ್ಕಳನ್ನು ಮರಳಿ ಸಮೀಪದ ಶಾಲೆಗೆ ದಾಖಲಿಸಲಾಗುತ್ತಿದೆ.
ಶೈಕ್ಷಣಿಕ ವರ್ಷ ಆರಂಭದಲ್ಲೇ ದಾಖಲಾತಿ ಆಂದೋಲನ ನಡೆಸಿ ಶಿಕ್ಷಣ ಮಹತ್ವದ ಕುರಿತು ಪಾಲಕರು, ಮಕ್ಕಳಿಗೆ ಜಾಗೃತಿ ಮೂಡಿಸಲಾಗಿದೆ. ನವೆಂಬರ್ ಮತ್ತೆ ಜಾಗೃತಿ ದಾಖಲಾತಿ ಆಂದೋಲನ ನಡೆಸಿ ಇಂತಹ ಮಕ್ಕಳನ್ನು ಮರಳಿ ಶಾಲೆಯತ್ತ ಸೆಳೆಯಲಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ಎಐ ಆಧಾರಿತ ಡಿಜಿಟಲ್ ಹಾಜರಾತಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
ಅದಕ್ಕಾಗಿ ನಿರಂತರ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಎಸ್‌ಡಿಎಂಸಿ ಸಭೆ, ಪಾಲಕರ-ಶಿಕ್ಷಕರ ಸಭೆ ನಡೆಸಿ ಮಕ್ಕಳ ಮೇಲೆ ನಿಗಾ ವಹಿಸಲಾಗಿದೆ. ದಾಖಲಾತಿ ಕಲ್ಪಿಸುವ ಉದ್ದೇಶದಿಂದ ಸೇತುಬಂಧ ಶಿಕ್ಷಣ, ಪರಿಹಾರಾತ್ಮಕ ಬೋಧನೆ ಸೇರಿದಂತೆ ಶಾಲಾ ಆಧಾರಿತ ತರಬೇತಿಯನ್ನು ನೀಡಲಾಗುತ್ತಿದೆ.
ಇದರೊಂದಿಗೆ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ ಕ್ಷೇಮವನ್ನು ಉತ್ತೇಜಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸ್ವರಕ್ಷಣಾ ಕೌಶಲ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ, ಸಮಗ್ರ ಅಭಿವೃದ್ಧಿಗಾಗಿ ಪಿಎಂ ಪೋಷಣ್, ವಿದ್ಯಾವಿಕಾಸ್, ಪ್ರತಿಭಾ ಕಾರಂಜಿ, ಕಲಾ ಉತ್ಸವ ಅನುಷ್ಠಾನಗೊಳಿಸಲಾಗಿದೆ.
ಜತೆಗೆ, ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು, ಉಚಿತ ಪಠ್ಯಪುಸ್ತಕ, ನೋಟ್ ಪುಸ್ತಕ, ಶೂ-ಸಾಕ್ಸ್, ಎರಡು ಜೋಡಿ ಸಮವಸ್ತ್ರ ಸೇರಿದಂತೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಹೀಗೆ ವಿವಿಧ ಕ್ರಮಗಳ ಮೂಲಕ ಶಿಕ್ಷಣದ ಸಾರ್ವತ್ರಿಕ ಲಭ್ಯತೆಯನ್ನು ಮತ್ತಷ್ಟು ಬಲಪಡಿಸಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತದೆ. ಆದಾಗ್ಯೂ, ಮಕ್ಕಳು ಶಾಲೆಯನ್ನು ಬಿಡುವುದು ಈಗಲೂ ತಪ್ಪಿಲ್ಲ.
ಶಾಲೆ ಬಿಡುವ ಸಾಧ್ಯತೆ ಗುರುತಿಸಿ:
ಶಾಲೆ ಬಿಟ್ಟ ನಂತರ ಮಗುವನ್ನು ಮತ್ತೆ ಶಾಲೆಗೆ ಸೇರಿಸುವುದಕ್ಕಿಂತ, ವಿದ್ಯಾರ್ಥಿಗಳು ಶಾಲೆ ಬಿಡುವ ಸಾಧ್ಯತೆಯನ್ನು ಮೊದಲೇ ಗುರುತಿಸಿ ತಡೆಯುವುದು ಹೆಚ್ಚು ಪರಿಣಾಮಕಾರಿ. ಪ್ರತಿ ಶಾಲೆಯಲ್ಲೂ ಯಾವ ವಿದ್ಯಾರ್ಥಿ ಶಾಲೆಯಿಂದ ಹೊರಗುಳಿಯುವ ಹಂತದಲ್ಲಿ ಎಂಬುದನ್ನು ಮೊದಲೇ ಗುರುತಿಸಬೇಕಿದೆ.
ಪ್ರೌಢಶಾಲಾ ಹಂತದಲ್ಲಿ ಮಕ್ಕಳು ಶಾಲೆ ಬಿಡುವುದು ಮಗುವಿನ ವೈಯಕ್ತಿಕ ಭವಿಷ್ಯಕ್ಕೆ ಮಾತ್ರವಲ್ಲ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೂ ಪರಿಣಾಮ ಉಂಟುಮಾಡುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮಕ್ಕಳ ಶಿಕ್ಷಣವನ್ನು ಚಿವುಟುವುದಕ್ಕಿಂತ ಚಿಗುರೊಡೆಯುವಂತೆ ಮಾಡಬೇಕಿದೆ.
"
ಪ್ರತಿ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಗುರುತಿಸಿದ ಮಕ್ಕಳನ್ನು ಯಶಸ್ಸಿಯಾಗಿ ಔಷಚಾರಿಕ ಶಿಕ್ಷಣದ ಮುಖ್ಯವಾಹಿನಿಗೆ ಸೇರಿಸುವ ಕಾರ್ಯ ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.