ಕಬ್ಬನ್ ಪಾರ್ಕ್‌ನಲ್ಲಿ ಮಾವು ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ

ಕಬ್ಬನ್ ಪಾರ್ಕ್​ನಲ್ಲಿ ಮಾವು ಮೇಳ
ಕಬ್ಬನ್ ಪಾರ್ಕ್​ನಲ್ಲಿ ಮಾವು ಮೇಳ
Published on

ಪ್ರಮುಖ ಮುಖ್ಯಾಂಶಗಳು

  • * ನಾಲ್ಕು ದಿನಗಳಲ್ಲಿ 10 ಟನ್‌ಗೂ ಅಧಿಕ ಮಾವು ಮಾರಾಟ
ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ನಡೆಯುತ್ತಿರುವ ಮಾವು- ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಮೇಳ ಆರಂಭವಾದ ನಾಲ್ಕು ದಿನಗಳಲ್ಲಿ 10 ಟನ್‌ಗೂ ಅಧಿಕ ಮಾವು ಮಾರಾಟವಾಗಿದೆ.
ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವುದು, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಮೂಲಕ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಮಾವು ಮೇಳ ಆಯೋಜಿಸಿದ್ದು ಮೇ 10ರವರೆಗೆ ಮೇಳ ನಡೆಯಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ತಿಳಿಸಿದ್ದಾರೆ.
ಮೇಳ ಆರಂಭವಾದ ಮೊದಲ ಎರಡು ದಿನದಲ್ಲಿ ದಿನವೊಂದಕ್ಕೆ 2.5 ಟನ್ ನಂತೆ 5 ಟನ್ ಮಾವು ಮಾರಾಟವಾಗಿತ್ತು. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದು, ನಾಲ್ಕು ದಿನಗಳಲ್ಲಿ 10 ಟನ್ ಗೂ ಅಧಿಕ ಮಾವು ಮಾರಾಟವಾಗಿದೆ. ರಾಸಾಯನಿಕ ಮುಕ್ತ ಮಾವಿನ ವಿವಿಧ ತಳಿಯ ಹಣ್ಣುಗಳು, ಹಲಸು ಹೊರಗಿನ ದರಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.
ಬಾದಾಮಿ/ಆಲ್ಫಾನ್ಸೊ, ಕರಿ ಇಶಾಡ್, ರಸಪುರಿ, ಸೇಂದೂರ, ಮಲಗೋವ, ಮಲ್ಲಿಕಾ, ಬಂಗನಪಲ್ಲಿ, ದಶೇರಿ, ಕಾಲಪಾಡು, ಕೇಸರಿ, ನೀಲಂ, ತೋತಾಪುರಿ, ಇಮಾಮ್ ಪಸಂದ್ ಮುಂತಾದ ತಳಿಯ ಮಾವಿನ ತಳಿಗಳು ಲಭ್ಯ. ಇದರ ಜತೆಗೆ ಚಂದ್ರ ಹಲಸು ಸೇರಿ ನಾನಾ ಸ್ಥಳೀಯ ಹಲಸು ಸಹ ಕಡಿಮೆ ದರದಲ್ಲಿ ಸಿಗುತ್ತಿವೆ. ಮುಖ್ಯವಾಗಿ ಯಾವುದೇ ರಾಸಾಯನಿಕ ಇಲ್ಲದೇ, ನೆಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಮಾತ್ರವೇ ಮಾರಾಟ ಮಾಡಲಿದ್ದು, ತಾಜಾತನದಿಂದ ಕೂಡಿವೆ. ಬೆಂಗಳೂರಿನ ನಾಗರಿಕರು, ಕಬ್ಬನ್ ಉದ್ಯಾನಕ್ಕೆ ಭೇಟಿ ನೀಡಿ ರೈತರಿಂದ ನೇರವಾಗಿ ಮಾವು ಖರೀದಿಸಬಹುದಾಗಿದೆ. ಸ್ವತಃ ರೈತರೇ ದರ ನಿಗದಿ ಪಡಿಸಿದ್ದು, ಕೆಲವರು ರಿಯಾಯಿತಿ ದರದಲ್ಲೂ ಹಣ್ಣುಗಳ ಮಾರಾಟ ಮಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net