ಒಳ್ಳೆಯ ಕೆಲಸದಿಂದ ಹೆಸರು ಶಾಶ್ವತ deeds

ಒಳ್ಳೆಯ ಕೆಲಸದಿಂದ ಹೆಸರು ಶಾಶ್ವತ deeds
ಒಳ್ಳೆಯ ಕೆಲಸದಿಂದ ಹೆಸರು ಶಾಶ್ವತ deeds
Published on
ಟೇಕಲ್​: ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿದರೆ ಶಾಶ್ವತವಾಗಿ ನಮ್ಮ ಹೆಸರು ಉಳಿಯುತ್ತದೆ. ಇತಿಹಾಸದಲ್ಲಿ ಉಳಿಯುವ ಗ್ರಾಪಂ ಆಡಳಿತದ ಮೇಲಂತಸ್ತಿನ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.deeds
ತಾಲೂಕಿನ ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿಯಿಂದ ಶಾಸಕರ ಅನುದಾನದಡಿ ನಿರ್ಮಿಸಿರುವ ಗಾಂಧಿ ಗ್ರಾಮಸೌಧ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಏನಾದರೂ ಶಾಶ್ವತವಾದ ಕೆಲಸ ಮಾಡಬೇಕೆಂದು ನರೇಗಾದಲ್ಲಿ ಶಾಸಕರ ಅನುದಾನ ಬಳಸಿಕೊಂಡು 25 ಲಕ್ಷ ರೂ. ವೆಚ್ಚದಲ್ಲಿ ಗಾಂಧಿ ಗ್ರಾಮಸೌಧ ಕಟ್ಟಡ ನಿರ್ಮಿಸಿದ್ದಾರೆ. ಕೆಜಿ ಹಳ್ಳಿಯಲ್ಲಿ ಬೈಪಾಸ್​ ರಸ್ತೆ ನಿಮಾರ್ಣ ಮಾಡಲು ಹೊರಟ ವೇಳೆ ಒತ್ತಡಗಳು ಬಂದವು. ವಿರೋಧದ ನಡುವೆ 38 ಎಕರೆಯನ್ನು ಜಿಲ್ಲಾಡಳಿತದಿಂದ ಮಂಜೂರು ಮಾಡಿಸಿಕೊಂಡು ಬೈಪಾಸ್​, ರೈಲ್ವೆ ಸೇತುವೆ, ಐಟಿಐ ಕಾಲೇಜು, ನಾಡಕಚೇರಿ, ಕಾಲೇಜು ಕಟ್ಟಡ, ಇನ್ನಿತರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಬಸ್​ ನಿಲ್ದಾಣ ನಿರ್ಮಿಸಲಾಗುವುದು, ಮಾಜಿ ಸಂಸದ ಎಸ್​.ಮುನಿಸ್ವಾಮಿ ಅವರು ರೈಲ್ವೆ ಮೇಲ್ಸೇತುವೆ ನಿಮಾರ್ಣಕ್ಕೆ ಪಕ್ಷಾತಿತವಾಗಿ ಸಹಕಾರ ನೀಡಿದ್ದಾರೆ ಎಂದರು.
ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 2,500 ಕೋಟಿ ರೂ. ಅನುದಾನ ತಂದು 4 ಪಥದ ರಸ್ತೆ ನಿರ್ಮಾಣ, ನಗರದಲ್ಲಿ ಮೇಲ್ಸೇತುವೆ, ಹದಗೆಟ್ಟ ರಸ್ತೆ ಅಭಿವೃದ್ಧಿ ಸೇರಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು 45 ಕೋಟಿ ರೂ. ಅನುದಾನ ತಂದಿದ್ದೇನೆ ಎಂದರು.
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಸರ್ಕಾರ ಬಡವರಿಗೆ ಕೂಲಿ ನೀಡಲು ಮನರೇಗಾ ಯೋಜನೆ ಜಾರಿಗೆ ತಂದಿತ್ತು, ಆದರೆ ಈಗಿನ ಬಿಜೆಪಿ ಸರ್ಕಾರ ನರೇಗಾ ಕಾಯ್ದೆ ರದ್ದುಪಡಿಸಿ ಜಿ ರಾಮ್​ ಜಿ ಯೋಜನೆ ಜಾರಿಗೊಳಿಸಿದೆ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ನೂತನ ಯೋಜನೆ ಅಡಿ ಕಾಮಗಾರಿಗಳು ಆಗುವುದಿಲ್ಲ, ಕೂಲಿ ಕಾರ್ಮಿಕರಿಗೆ ಬ್ಯಾಂಕ್​ ಖಾತೆಯ ಮೂಲಕ ಜಮೆ ಆಗುತ್ತಿದ್ದ ಹಣವು ಸಹ ಅವರ ಖಾತೆಗೆ ಹೋಗುವುದಿಲ್ಲ. ಗುತ್ತಿಗೆದಾರರೇ ಕಾಮಗಾರಿ ನಡೆಸುತ್ತಾರೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಕಾಂಗ್ರೆಸ್​ ಸರ್ಕಾರ ಹೊಸ ಕಾಯ್ದೆ ರದ್ದು ಪಡಿಸಿ ಹಿಂದಿನಂತೆ ಮನರೇಗಾವನ್ನು ಕಾರ್ಯರೂಪಕ್ಕೆ ತರಲು ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ರವಾನಿಸಿದೆ ಎಂದು ಹೇಳಿದರು.
ವಿಧಾನಪರಿಷತ್​ ಸದಸ್ಯ ಎಂಎಲ್​ ಅನಿಲ್​ ಕುಮಾರ್​ ಮಾತನಾಡಿ, ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಗಾಂಧಿಯ ಹೆಸರು ನಾಮಕರಣ ಮಾಡಲಿರುವ ಕಾನೂನು ಅನುಷ್ಠಾನಗೊಳಿಸಲಿದೆ. ಅದಕ್ಕೂ ಮೊದಲು ಗಾಂಧಿ ಗ್ರಾಮಸೌಧ ಕಟ್ಟಡ ನಿಮಾರ್ಣವನ್ನು ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿಮಾರ್ಣ ಮಾಡಲಾಗಿದೆ ಎಂದು ಹೇಳಿದರು.
ಮಾಸ್ತಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಎಸ್​.ಜೆ.ರಾಮಮೂರ್ತಿ, ತಾಪಂ ಮಾಜಿ ಸದಸ್ಯ ರಮೇಶ್​ಗೌಡ, ಮಾಜಿ ಗ್ರಾಪಂ ಅಧ್ಯಕ್ಷ ಸತೀಶ್​ ರಾಜಣ್ಣ, ದರಕಾಸ್ತು ಸಮಿತಿ ಸದಸ್ಯ ಸತೀಶ್​, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ತಿಮ್ಮರಾಯಪ್ಪ, ಪಿಡಿಒ ವೆಂಕಟೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net