ಗವಿಸಿದ್ಧೇಶ್ವರ ಮಹಾರಾಜ್ ಕೀ ಜೈ..

ದಕ್ಷಿಣ ಭಾರತ ಕುಂಭಮೇಳ ಖ್ಯಾತಿಯ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿ ಮಹಾರಥೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿತು.
ದಕ್ಷಿಣ ಭಾರತ ಕುಂಭಮೇಳ ಖ್ಯಾತಿಯ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿ ಮಹಾರಥೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ರಥೋತ್ಸವಕ್ಕೆ ಚಾಲನೆ
  • ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ
  • ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಮಹಾರಥೋತ್ಸವಕ್ಕೆ ಸಾಕ್ಷಿ
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಗವಿಸಿದ್ಧೇಶ್ವರ ಮಹಾರಥೋತ್ಸವ ಸೋಮವಾರ ಸಂಜೆ ಗೋಧೂಳಿ ಸಮಯಕ್ಕೆ ಯಶಸ್ವಿಯಾಗಿ ನೆರವೇರಿತು. ಮೂಲತಃ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ, ಸದ್ಯ ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥಬೀದಿಯಲ್ಲಿ ಶೃಂಗಾರಗೊಂಡ ರಥಕ್ಕೆ ಅಭಿನವ ಗವಿಶ್ರೀ ಪೂಜೆ ಸಲ್ಲಿಸಿದರು. ನಂದಿಕೋಲು, ವಾದ್ಯಮೇಳಗಳೊಂದಿಗೆ ಉತ್ಸವ ಮೂರ್ತಿ ಕರ್ತೃ ಗದ್ದುಗೆಯಿಂದ ರಥದವರೆಗೆ ಸಾಗಿತು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸಾಥ್ ನೀಡಿದರು. ಧ್ವಜಾರೋಹಣ ಆಗುತ್ತಲೇ ಅಪಾರ ಭಕ್ತ ವೃಂದ ಗವಿಸಿದ್ಧೇಶ್ವರ ಮಹಾರಾಜ್ ಕೀ ಜೈ ಎಂಬ ಜಯಘೋಷ ಕೂಗುತ್ತ ತೇರು ಎಳೆದರು. ಗಜ ಗಾಂಭಿರ್ಯದಿಂದ ಪಾದಗಟ್ಟಿ ತಲುಪಿ, ಮತ್ತೆ ಮೂಲಸ್ಥಾನ ತಲುಪುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಟ್ರಾೃಕ್ಟರ್, ಕ್ರೂಸರ್, ಬಸ್, ದ್ವಿಚಕ್ರ ವಾಹನ ಹಾಗೂ ಪಾದಯಾತ್ರೆ ಮೂಲಕ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಮಹಾರಥೋತ್ಸವಕ್ಕೆ ಸಾಕ್ಷಿಯಾದರು. ಸಂಚಾರ ದಟ್ಟಣೆ ಉಂಟಾದರೂ ಪೊಲೀಸರು ನಿಯಂತ್ರಿಸಿದರು. ನೂಕುನುಗ್ಗಲಿನಲ್ಲಿಯೇ ಭಕ್ತರು ರಥಕ್ಕೆ ಉತ್ತತ್ತಿ ಎಸೆದು, ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯ ದಯಪಾಲಿಸುವಂತೆ ಗವಿಸಿದ್ಧೇಶ್ವರನಲ್ಲಿ ಪ್ರಾರ್ಥಿಸಿದರು.
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಖಂಡಕಿ ಗುರುದೇವ ಆಶ್ರಮದ ಶಿವಯೋಗಿಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಗಾಲಿ ಜನಾರ್ದನರೆಡ್ಡಿ, ಬಸನಗೌಡ ತುರ್ವಿಹಾಳ, ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಹಂಪನಗೌಡ ಬಾದರ್ಲಿ, ಮಹೇಶ ಟೆಂಗಿನಕಾಯಿ, ಎಂಎಲ್ಸಿಗಳಾದ ಹೇಮಲತಾ ನಾಯಕ, ಶಶೀಲ್ ನಮೋಶಿ ಇತರರಿದ್ದರು.
ಧ್ವಜಾರೋಹಣ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್. ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಗವಿಸಿದ್ಧೇಶ್ವರ ಸ್ವಾಮೀಜಿ ಇತರ ಗಣ್ಯರಿದ್ದರು.
"

ರಥೋತ್ಸವಕ್ಕೆ ಚಾಲನೆ ನೀಡುವುದು ಹೆಮ್ಮೆ. ಈ ಭಾಗ್ಯ ನನಗೆ ದೊರೆತಿದೆ. ಅಭಿಮಾನದಿಂದ ಭಾಗಿಯಾಗಿರುವೆ. ದಸರಾ ವೈಭವ ಕಾಣಲು ಮೈಸೂರಿಗೆ ಹೋಗಬೇಕು. ಜಾತ್ರೆ ವೈಭವ ಕಾಣಲು ಕೊಪ್ಪಳಕ್ಕೆ ಬರಬೇಕು.

"

ಉತ್ತರದ ಪ್ರಯಾಗರಾಜ್ನಲ್ಲಿ ನಾಗಸಾಧುಗಳ ಕುಂಭಮೇಳ ನಡೆಯುತ್ತದೆ. ದಕ್ಷಿಣದಲ್ಲಿ ಭಕ್ತರ ಕುಂಭ ಮೇಳ ಕಾಣಬೇಕೆಂದರೆ ಕೊಪ್ಪಳ ಜಾತ್ರೆಗೆ ಬರಬೇಕು.

"

ಭಾರತದಲ್ಲಿ ಅತ್ಯಂತ ಐತಿಹಾಸಿಕ ಜಾತ್ರೆ. ಜನರ ಸಂಭ್ರಮ ಹೆಚ್ಚಿಸುವ ಕೆಲಸ ಗವಿಮಠ ಮಾಡುತ್ತಿದೆ.

"

ಕೊಪ್ಪಳದ ಗವಿಸಿದ್ಧೇಶ್ವರ ಎಲ್ಲರ ಮನದಲ್ಲಿ ನೆಲೆಸಿದ್ದಾನ್. ಭಕ್ತಿ ಭಾವದ ಎಲ್ಲ ವರ್ಗ, ಸಮುದಾಯ ಜನ ಭಾಗಿಯಾಗುವ ಜಾತ್ರೆ ಇದಾಗಿದೆ.

"

ಕೊಪ್ಪಳದ ಗವಿಮಠ ಜಾತ್ರೆ ಸೂರ್ಯ, ಚಂದ್ರ ಇರುವವರೆಗೂ ವೈಭವ ಇರಲಿದೆ. ವಿಶ್ವದ ಭೂಪಟದಲ್ಲಿ ಇಂಥ ಜಾತ್ರೆ ಮತ್ತೆಲ್ಲಿ ಸಿಗುವುದಿಲ್ಲ. ಅಭಿನವ ಗವಿಶ್ರೀಗಳ ತಪಸ್ಸು ಶಕ್ತಿಯಿಂದ ಇದೆಲ್ಲ ಸಾಧ್ಯವಾಗಿದೆ.

"

ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚು ಜನ ಸೇರಿದ್ದಾರೆ. ಗವಿಶ್ರೀಗಳ ಆಶೀರ್ವಾದ ನಮ್ಮ ಜಿಲ್ಲೆಗಿದೆ. ಎಲ್ಲ ಜಿಲ್ಲೆಗಳಿಂದಲೂ ರೊಟ್ಟಿ, ಹೋಳಿಗೆ ಇನ್ನಿತರ ಆಹಾರ ಬಂದಿದೆ. ಇದೊಂದು ಭಾವೈಕ್ಯದ ಜಾತ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net