ಕಸದ ತೊಟ್ಟಿಯಾದ ಸೀರೆ ಮಳಿಗೆ ಸ್ಥಳ / DODABALLAPUR

ದೊಡ್ಡಬಳ್ಳಾಪುರದ ಡಿ.ಕ್ರಾಸ್​ ರಸ್ತೆಯಲ್ಲಿ ಜ.9ರಂದು ನೇಕಾರ ಸೀರೆ ಮಳಿಗೆಗೆ ಭೂಮಿಪೂಜೆ ನೇರವೇರಿಸಿದ್ದ ಸಚಿವ ಕೆ.ಎಚ್​.ಮುನಿಯಪ್ಪ, ಶಾಸಕ ಧೀರಜ್​ ಮುನಿರಾಜ.
ದೊಡ್ಡಬಳ್ಳಾಪುರದ ಡಿ.ಕ್ರಾಸ್​ ರಸ್ತೆಯಲ್ಲಿ ಜ.9ರಂದು ನೇಕಾರ ಸೀರೆ ಮಳಿಗೆಗೆ ಭೂಮಿಪೂಜೆ ನೇರವೇರಿಸಿದ್ದ ಸಚಿವ ಕೆ.ಎಚ್​.ಮುನಿಯಪ್ಪ, ಶಾಸಕ ಧೀರಜ್​ ಮುನಿರಾಜ.
Published on
ವೆಂಕಟರಾಜು ಎಸ್​., ದೊಡ್ಡಬಳ್ಳಾಪುರ
ಸಚಿವ ಕೆ.ಎಚ್​.ಮುನಿಯಪ್ಪ ಹಾಗೂ ಶಾಸಕ ಧೀರಜ್​ಮುನಿರಾಜು ಪೈಪೋಟಿಗೆ ಬಿದ್ದು ನೇಕಾರರ ಸೀರೆ ಮಳಿಗೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಹೋಗಿ 6 ತಿಂಗಳಾದರೂ ಕಾಮಗಾರಿ ಆರಂಭವಾಗದಿರುವುದು ನೇಕಾರರ ಸಮುದಾಯ ರಾಜಕೀಯ ದಾಳಕ್ಕೆ ಸೀಮಿತವಾಯಿತೇ ಎಂಬ ಚರ್ಚೆ ಹುಟ್ಟುಹಾಕಿದೆ.
ನಗರ ಭಾಗದಲ್ಲಿ 50 ಸಾವಿರಕ್ಕೂ ಹೆಚ್ಚು ಸಮುದಾಯದವರಿದ್ದು, ಆದರೆ ಇಲ್ಲಿನ ಕಾರ್ಮಿಕರ ಪರಿಸ್ಥಿತಿ ಇಂದಿಗೂ ಶೋಚನಿಯವಾಗಿದೆ. ನೇಕಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ನೇಕಾರರ ಸೀರೆ ಮಳಿಗೆ ಮಾಡಲು ಜ.7ರಂದು ಶಾಸಕ ಧೀರಜ್​ ಮುನಿರಾಜು, ಜ.9ರಂದು ಸಚಿವ ಕೆ.ಎಚ್​.ಮುನಿಯಪ್ಪ ಭೂಮಿ ಪೂಜೆ ನೆರವೇರಿಸಿ ಮತಬುಟ್ಟಿಗೆ ಕೈ ಹಾಕಿದ್ದರು. ಆದರೆ ಭೂಮಿ ಪೂಜೆಯಾಗಿ 6 ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಮೀಸಲಿರಿಸಿದ್ದ ಸ್ಥಳ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
1.95 ಕೋಟಿ ಅನುದಾನ: ನಗರದ ಡಿ ಕ್ರಾಸ್​ ಸಮೀಪದ ನಗರ ಠಾಣೆ ಎದುರು 10 ಗುಂಟೆ ಜಾಗದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ಸೀರೆ ಮಳಿಗೆ ನಿರ್ಮಿಸಲು ನಿರ್ಧರಿಸಲಾಗಿದೆ. 1 ಕೋಟಿ ರೂ. ಸಿಎಂಐಡಿಪಿ ನಿಧಿ, 50 ಲಕ್ಷ ರೂ. ಶಾಸಕರ ನಿಧಿ, ಬಯಲುಸೀಮೆ ಪ್ರಾಧಿಕಾರದಿಂದ 45 ಲಕ್ಷ ರೂ. ನಿಧಿ ಮೀಸಲಿಡಲಾಗಿದೆ.
ಪೈಪೋಟಿಗೆ ಬಿದ್ದವರಂತೆ ಭೂಮಿ ಪೂಜೆ : ನೇಕಾರರ ಸೀರೆ ಮಳಿಗೆ ನಿರ್ಮಾಣಕ್ಕೆ ಜ.7ರಂದು ಶಾಸಕ ಧೀರಜ್​ ಮುನಿರಾಜು ಭೂಮಿ ಪೂಜೆ ಮಾಡಿದರು. ಇದನ್ನು ವಿರೋಧಿಸಿದ ಕಾಂಗ್ರೆಸ್​ನವರು ಶಿಷ್ಟಾಚಾರ ಪಾಲನೆ ಮಾಡಿಲ್ಲ, ನಮಗೆ ಆಹ್ವಾನವಿಲ್ಲ ಎಂದು ದೂರಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು. ಜ.9ರಂದು ಸಚಿವ ಕೆ.ಎಚ್​.ಮುನಿಯಪ್ಪ ಮತ್ತೆ ಭೂಮಿ ಪೂಜೆ ನೇರವೇರಿಸಿದರು. ಮಳಿಗೆ ನಿಮಾರ್ಣಕ್ಕೆ ಎರಡೆರಡು ಭಾರಿ ಭೂಮಿ ಪೂಜೆಯಾದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಭೂಮಿ ಪೂಜೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಜನಪ್ರತಿನಿಧಿಗಳು ಕಾಮಗಾರಿ ಪ್ರಾರಂಭಿಸಲು ಮೀನಮೇಷ ಎಣಿಸುತ್ತಿದ್ದಾರೆ.
ರೇಷ್ಮೆನಗರಿ ದೊಡ್ಡಬಳ್ಳಾಪುರ : ರೇಷ್ಮೆ ನಗರಿ ಎಂದು ದೊಡ್ಡಬಳ್ಳಾಪುರ ಖ್ಯಾತಿ ಪಡೆದಿರುವುದೇ ನೇಕಾರ ಸಮುದಾಯದಿಂದ. ಇಲ್ಲಿನ ನೇಕಾರರು ಕೈ ಮಗ್ಗದ ಸೀರೆಗಳನ್ನು ನೇಯ್ಗೆ ಮಾಡುವುದರಿಂದ ಹಿಡಿದು ಆಧುನಿಕ ಮಾದರಿಯ ಮಗ್ಗಗಳವರೆಗೂ ತನ್ನ ಇರುವಿಕೆಯನ್ನು ಗಟ್ಟಿಗೊಳಿಸುವುದರ ಜತೆಗೆ ಮಾರುಕಟ್ಟೆಯ ಸವಾಲನ್ನು ಮೆಟ್ಟಿನಿಂತು ನೇಕಾರಿಕೆ ಉಳಿಸಿಕೊಂಡಿದ್ದಾರೆ.

ಯಾವುದೇ ಕಾಮಗಾರಿಗಳಿಗೆ ಭೂಮಿಪೂಜೆ ಹಮ್ಮಿಕೊಳ್ಳುವುದು ಆಯಾ ಇಲಾಖೆಯಿಂದ ಸಿದ್ಧಗೊಂಡ ಬಳಿಕ. ಆದರೆ, ಈ ಭೂಮಿ ಪೂಜೆಯನ್ನು ಇಲಾಖೆಯವರು ಮಾಡಿಲ್ಲ. ಬದಲಾಗಿ ಶಾಸಕರು ಪ್ರತಿಷ್ಠೆಗೆ, ಸ್ವಹಿತಾಸಕ್ತಿಗಾಗಿ ಮಾಡಿದ್ದಾರೆ. ರೇಷ್ಮೆ ಇಲಾಖೆಯಿಂದ ಜವಳಿ ಇಲಾಖೆಗೆ ಆಗತಾನೆ ಪಹಣಿ ಹಸ್ತಾಂತರ ಕಾರ್ಯ ಮುಗಿದಿತ್ತು. ಶಾಸಕರು ಯಾರನ್ನು ಮೆಚ್ಚಿಸಲು ಭೂಮಿ ಪೂಜೆ ಮಾಡಿದರೋ ಗೊತ್ತಿಲ್ಲ. ಜವಳಿ ಇಲಾಖೆಯಲ್ಲೂ ಯಾವುದೇ ಸ್ಪಷ್ಟತೆ ಇಲ್ಲ. ಸ್ಥಳಿಯರು ಸೂರತ್​ ಸೀರೆಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಶಾಸಕರು ಮಾಡಿದ ಸೀರೆ ಮೇಳದಲ್ಲಿ ಸ್ಥಳಿಯರದು ಶೇ.10 ವ್ಯಾಪಾರ ಆಗಿದ್ದರೆ, ಸೂರತ್​ ಸೀರೆಗಳಿಗೆ ಶೇ.90 ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಯಾವ ನೇಕಾರರ ಪರ ನಿಲುವು ಎಂಬುದನ್ನು ಸ್ಪಷ್ಟಪಡಿಸಬೇಕು.

— > ಬಿ.ಜೆ ಹೇಮಂತರಾಜು ಅಧ್ಯಕ್ಷ, ನೇಕಾರ ಹೋರಾಟ ಸಮಿತಿ

ದೊಡ್ಡಬಳ್ಳಾಪುರದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ನೇಕಾರರ ಅನುಕೂಲಕ್ಕಾಗಿ ಸೀರೆ ಮಳಿಗೆ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ 1 ಕೋಟಿ ರೂ. ನಿಧಿಗಾಗಿ ಸಿಎಂಐಡಿಪಿ ಪ್ರಸ್ತಾವನೆ ಕಳಿಸಲಾಗಿದೆ. 50 ಲಕ್ಷ ರೂ. ಶಾಸಕರ ನಿಧಿಯಡಿ ಮತ್ತು 45 ಲಕ್ಷ ರೂ.ಗಳನ್ನು ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದಿಂದ ಮೀಸಲಿಡಲಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು.

— > ಶಿವಶಂಕರ್​ ಉಪ ನಿರ್ದೇಶಕ ಜವಳಿ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net