

ಬೆಂಗಳೂರು : ಗಾನ ಚಂದ್ರಿಕಾ ಕಲ್ಚರಲ್ ಫೌಂಡೇಶನ್ ಸಂಸ್ಥೆಯ 12ನೇ ವಾರ್ಷಿಕೋತ್ಸವ ಹಾಗೂ ಪಂಡಿತ್ ವಸಂತ ಕನಕಾಪುರ್ ರಾಗ ಸಂಯೋಜನೆಯ ಗಾಯನ ಶಿಬಿರದ ಸಮಾರೋಪ ಸಮಾರಂಭವು ಶನಿವಾರ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕಿ ಇಂಧು ವಿಶ್ವನಾಥ ಉದ್ಘಾಟಿಸಿದರು.
ಗಾನಚಂದ್ರಿಕಾ ಸಂಸ್ಥೆಯ ವತಿಯಿಂದ ಪಂಡಿತ್ ವಸಂತ ಕನಕಾಪುರ್ ಸಂಗೀತ ಸಂಯೋಜನೆಯ ಗಾಯನ ಶಿಬಿರವನ್ನು ಆಯೋಜಿಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ವಿವಿಧ ಗಾಯಕರು ಈ ಗಾಯನ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರಾರ್ಥಿಗಳಿಗೆ ಗಾಯನ ತರಬೇತಿಯನ್ನು ನೀಡಿದ್ದರು. ಹಾಗೆ ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ವಿವಿಧ ಗೀತೆಗಳನ್ನು ಪ್ರಸ್ತುತಿ ಪಡಿಸಿದರು.
ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಗಾಯಕಿ ರಾಧಾ ದೇಸಾಯಿ, ಸಂಗೀತ ಸಂಯೋಜಕ ವಿಶ್ವನಾಥ ನಾಕೋಡ, ಸಂಸ್ಕಾರ ಭಾರತಿ ಸದಸ್ಯ ಶ್ರೀಪತಿ, ಕಾರ್ಯಕ್ರಮದ ಆಯೋಜಕಿ ನಾಗಚಂದ್ರಿಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು.