ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮತ್ತು ಸಾಗಾಣಿಕೆ ದಿನೇದಿನೇ ಹೆಚ್ಚುತ್ತಿದ್ದು, ಸರ್ಕಾರದ ನಿಯಮಗಳನ್ನು ಬದಿಗೊತ್ತಿ ಕೆಲವರು ನಿರ್ಭೀತಿಯಾಗಿ ಮಣ್ಣು ದಂಧೆ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನದಿ ತೀರಗಳು, ಕೆರೆಗಳ ಸುತ್ತಮುತ್ತ, ಕೃಷಿ ಜಮೀನುಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವೇಳೆ ಜೆಸಿಬಿ, ಟಿಪ್ಪರ್ಗಳ ಮೂಲಕ ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆದು ಸಾಗಿಸಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಎಲ್ಲವೂ ತಿಳಿದಿದ್ದರೂ ಅಹ ಸಿಬ್ಬಂದಿ ಕೊರತೆ ಹೇಳಿ ಸ್ಥಳ ಮಹಜರು ಮಾಡಲು, ಪ್ರಕರಣ ದಾಖಲಿಸಲು ಹಿಂದಡಿ ಇಟ್ಟಿದೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ರಾಜಸ್ವ ನಷ್ಟವಾಗುವುದರ ಜೊತೆಗೆ ಪರಿಸರ ಹಾನಿ, ರಸ್ತೆ ಹಾಳಾಗುವಿಕೆ, ಕೃಷಿ ಜಮೀನು ನಾಶ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯ ಉಂಟಾಗಿದೆ. ಇದರ ಭಾಗವಾಗಿ ಜಿಲ್ಲೆಯ ಲಕ್ಕುಂಡಿ ಗ್ರಾಮದ ಸರ್ವೇ ನಂ 731ರಲ್ಲಿ ಇಲಾಖೆಯಿಂದ ಅನುಮತಿ ಪಡೆದು, ಸುರಕ್ಷತಾ ಕ್ರಮಗಳಿಲ್ಲದೇ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದು, ಸ್ಥಳದಲ್ಲಿ ಆತಂಕ ಮನೆ ಮಾಡಿದೆ.