13 ಕೋಟಿ ಬಾಕಿ ಭಾರದಲ್ಲೂ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುತ್ತಿರುವ ಸಂಸ್ಥೆ

ಗದಗ
ಗದಗ
Published on
ವಿಜಯವಾಣಿ ವಿಶೇಷ ಗದಗ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರದಿಂದ ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿವೆ. ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ರೋಗಿಗಳ ಹಿತದೃಷ್ಟಿಯಿಂದ ಸೇವೆ ನಿರಂತರವಾಗಿ ಮುಂದುವರೆದಿದೆ.13 ಕೋಟಿ ಬಾಕಿ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಕೆ.ವಿ. ಹಂಚಿನಾಳ ಸಂಸ್ಥೆ ಸ್ಕ್ಯಾನಿಂಗ್ ಕಾರ್ಯವನ್ನು ನಡೆಸುತ್ತಿದೆ.
13 ಕೋಟಿ ಬಾಕಿ:
ಕೆ.ವಿ. ಹಂಚಿನಾಳ ಸಂಸ್ಥೆ 2019 ರಿಂದ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳನ್ನು ಆರಂಭಿಸಿದೆ. ಸಾವಿರಾರು ರೋಗಿಗಳಿಗೆ ಸಮಯಕ್ಕೆ ತಕ್ಕಂತೆ ಅತ್ಯಗತ್ಯ ಪರೀಕ್ಷೆಗಳನ್ನು ಸಂಸ್ಥೆ ಒದಗಿಸಿದೆ. ಆದರೆ 2023 ರಿಂದ ಸರ್ಕಾರದಿಂದ ಬರಬೇಕಾದ ಬಿಲ್ ಮೊತ್ತ ಇನ್ನೂ ಪಾವತಿಯಾಗದೆ ಉಳಿದಿದೆ. ಈ ಅವಧಿಯಲ್ಲಿ ಸರ್ಕಾರದಿಂದ ನಾಲ್ಕು ಬಾರಿ ಗುಣಮಟ್ಟದ ಪರೀಕ್ಷಾ (ಆಡಿಟ್)ಗಳು ನಡೆದಿದ್ದು, ಸೇವೆಯ ಗುಣಮಟ್ಟಕ್ಕೂ ಯಾವುದೇ ಆಕ್ಷೇಪಣೆ ಬಂದಿಲ್ಲ. ಆದರೂ ಹಣ ಬಿಡುಗಡೆ ಆಗದಿರುವುದು ಸಂಸ್ಥೆಯ ದಿನನಿತ್ಯದ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿದೆ.
ಸದ್ಯ ಸರ್ಕಾರದಿಂದ ಒಟ್ಟು 13 ಕೋಟಿ ರುಪಾಯಿ ಬಾಕಿ ಹಣ ಕೆ.ವಿ.ಹಂಚಿನಾಳ ಸಂಸ್ಥೆಗೆ ಬರಬೇಕಿದೆ. ಸಿಬ್ಬಂದಿ ವೇತನ, ಯಂತ್ರೋಪಕರಣಗಳ ನಿರ್ವಹಣೆ, ವಿದ್ಯುತ್ ವೆಚ್ಚ, ತಾಂತ್ರಿಕ ಸೇವೆಗಳು ಎಲ್ಲವೂ ನಿರಂತರ ಹಣಕಾಸು ಅಗತ್ಯವಿರುವ ಕಾರ್ಯಗಳೇ. ಇಷ್ಟೆಲ್ಲ ಆರ್ಥಿಕ ಒತ್ತಡದ ನಡುವೆಯೂ, ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಒಂದೇ ಉದ್ದೇಶದಿಂದ ಸಂಸ್ಥೆ ಗದಗ ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೇವೆಯನ್ನು ಸ್ಥಗಿತಗೊಳಿಸದೇ ಮುಂದುವರಿಸಿದೆ.
ಬಾಕ್ಸ್
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರದಿಂದ ಹಣ ಸಂದಾಯವಾಗದ ಕಾರಣ ಸ್ಕ್ಯಾನಿಂಗ್ ಕೇಂದ್ರಗಳು ಸೇವೆ ಸ್ಥಗಿತಗೊಳಿಸಿರುವುದು ಸತ್ಯ. ಇದರಿಂದ ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಗಳ ದುಬಾರಿ ಸ್ಕ್ಯಾನಿಂಗ್‌ಗಳಿಗೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಈ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗಿದ್ದು ಇದು ಕೂಡಾ ರೋಗಿಗಳಲ್ಲಿ ಭರವಸೆಯನ್ನು ಉಳಿಸಿದೆ.
ಭರವಸೆ:
ರೋಗಿಗಳ ಹಿತವೇ ಮೊದಲ ಆದ್ಯತೆ
ಸಿಟಿ ಮತ್ತು ಎಂಆರ್‌ಐ ಪರೀಕ್ಷೆಗಳು ಇಂದು ಕೇವಲ ಆಯ್ಕೆಯಲ್ಲ, ಅನೇಕ ಜೀವ ಉಳಿಸುವ ಚಿಕಿತ್ಸೆಗಳ ಮೊದಲ ಹಂತ. ಅಪಘಾತ, ಹೃದಯ, ಮೆದುಳು, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ನಿರ್ಧಾರದಲ್ಲಿ ಈ ಸ್ಕ್ಯಾನಿಂಗ್‌ಗಳ ಪಾತ್ರ ಅತ್ಯಂತ ಮಹತ್ವದ್ದು. ಇಂತಹ ಸಂದರ್ಭದಲ್ಲಿ ಸೇವೆ ಸ್ಥಗಿತಗೊಂಡರೆ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ಅರಿತು. ಕೆ.ವಿ. ಹಂಚಿನಾಳ ಸಂಸ್ಥೆ ಮಾನವೀಯ ನೆಲೆಯಲ್ಲಿ ಸೇವೆ ಮುಂದುವರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರು ಕೂಡಾ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಕೋಟ್.
ಗದಗ ಜಿಲ್ಲೆಯ ರೋಗಿಗಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಗಮವಾಗಿ ಮುಂದುವರಿಯಲು, ಸರ್ಕಾರ ಕೂಡಲೇ ಬಾಕಿ ಇರುವ 13 ಕೋಟಿ ರುಪಾಯಿ ಹಣವನ್ನು ಬಿಡುಗಡೆ ಮಾಡಬೇಕು. ಸಮಯಕ್ಕೆ ಹಣ ಸಂದಾಯವಾದರೆ ಮಾತ್ರ ಈ ರೀತಿಯ ಅಗತ್ಯ ಸೇವೆಗಳು ದೀರ್ಘಾವಧಿಗೆ ನಿರಂತರವಾಗಿ ಮುಂದುವರಿಯಲು ಸಾಧ್ಯ ಎನ್ನುವುದು ಹಲವಾರು ಬಡ ರೋಗಿಗಳ ಅಭಿಪ್ರಾಯವಾಗಿದೆ.
* ಕೆ.ವಿ. ಹಂಚಿನಾಳ ಸಂಸ್ಥೆಯ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net