ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಿ: ಸಚಿವ ಬಸವರಾಜ ರಾಯರಡ್ಡಿ
ಜಿಲ್ಲಾಡಳಿತ ಭವನದಲ್ಲಿ ಸಚಿವ ಬಸವರಾಜ ರಾಯರಡ್ಡಿ ಅಧ್ಯಕ್ಷತೆಯಲ್ಲಿ ಬರ ಕುರಿತು ಸಭೆ ಜರುಗಿತು. ಎಚ್.ಕೆ. ಪಾಟೀಲ. ಚಂದ್ರು ಲಮಾಣೀ, ಬಸನಗೌಡ ಕೋಟೂರ, ಚೇತನಾ ಪಾಟೀಲ, ಪಿ. ಎಸ್. ಪಾಟೀಲ ಹಲವರು ಇದ್ದರು.
ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ$್ಯ ತೋರದೇ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ತಮ್ಮ ಇಲಾಖೆಗೆ ಸಂಬಂಧಿತ ಮಾಹಿತಿಯನ್ನು ಸ್ಪಷ್ಟವಾಗಿ ಸರಿಯಾಗಿ ನೀಡಬೇಕು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಬರಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ ಅವರು ಅಧಿಕಾರ ವಹಿಸಿಕೊಂಡ ನಂತರ ಸಚಿವ ಸಂಪುಟ ವಿಸ್ತರಣೆ ಆಗಿದೆ. ಸಚಿವ ಸಂಪುಟ ಸಭೆಯಲ್ಲಿ ಬರಗಾಲ ಪರಿಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಸಿಎಂ ನಿರ್ದೇಶನದನ್ವಯ ಜಿಲ್ಲೆಯ ಪ್ರತಿ ತಾಲೂಕಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಬರ ಪರಿಸ್ಥಿತಿಯ ವರದಿಯನ್ನು ಸಲ್ಲಿಸಬೇಕಿದೆ. ಜಿಲ್ಲಾಡಳಿತದ ವರದಿಯನ್ವಯ ಜೂ.1 ರಿಂದ ಆ. 5 ರವರೆಗೆ ಜಿಲ್ಲೆಯ ನರಗುಂದ ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದ್ದು ಬರಪೀಡಿತ ಪ್ರದೇಶವೆಂದು ಘೋಷಿಸಲು ಪೂರಕ ವಾತಾವರಣವಿದೆ ಎಂದರು.
ನರಗುಂದದಲ್ಲಿ ವಾಡಿಕೆಗಿಂತ ಶೇ. 18ಕ್ಕೂ ಹೆಚ್ಚು ಮಳೆಯಾಗಿದೆ. ಪ್ರಾಥಮಿಕ ಹಂತದ ವರದಿಯನ್ನು ಆಧರಿಸಿ ಸರ್ಕಾರಕ್ಕೆ ಬರಗಾಲ ವರದಿ ಸಲ್ಲಿಸಲಾಗುವುದು. ನರಗುಂದದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಇನ್ನು ಮುಂದಿನ ಒಂದು ವಾರದೊಳಗೆ ನರಗುಂದಲ್ಲಿಯೂ ಸಹ ಮಳೆಯಾಗದಿದ್ದರೆ ನಿಯಮಾವಳಿ ಅನ್ವಯ ಪರಿಶೀಲನೆ ಮಾಡಿ ನರಗುಂದವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವ ಕುರಿತು ಪ್ರಯತ್ನಿಸಲಾಗುವುದು. ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲೆಯಲಿ ಕೃಷಿ ಕ್ಷೇತ್ರದಲ್ಲಿ ಶೇ. 89 ರಷ್ಟು ಬಿತ್ತನೆ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಶೇ. 126ರಷ್ಟು ಬಿತ್ತನೆ ಆಗಿದೆ. ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ ಅಪಡೇಟ್ ಆಗಬೇಕು. ಅದರಲ್ಲಿನ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿಕೊಂಡು ರೈತರಿಗೆ ಸಿಗಬೇಕಾದ ಪರಿಹಾರ ಸೌಲಭ್ಯವನ್ನು ತಲುಪಿಸುವಲ್ಲಿ ರೈತರಿಗೆ ಅನ್ಯಾಯ ಆಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ರೀತಿಯ ನಿಷ್ಕಾಳಜಿ ಸಹಿಸಲಾಗುವುದಿಲ್ಲ ಎಂದರು.
ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ ಸುಗ್ನಳ್ಳಿಯಲ್ಲಿನ ಡಿಬಿಓಟಿ ಯಿಂದ ಬರುವ ನೀರು ಸಂಸ್ಕರಣ ಆಗಬೇಕಿದೆ ಎಂದು ಸಭೆಯ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದೊಳಗಾಗಿ ಆ ನೀರಿನ ಗುಣಮಟ್ಟದ ಪರೀಕ್ಷೆಯ ವರದಿಯನ್ನು ಶಾಸಕರು ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಸಚಿವ ರಾಯರಡ್ಡಿ ಸೂಚಿಸಿದರು.
ಗದಗ ಶಾಸಕ ಡಾ.ಎಚ್.ಕೆ. ಪಾಟೀಲ ಮಾತನಾಡಿ, ಪಿಎಂಬಿಎಫ್ವೈ ಯೋಜನೆ ಸೌಲಭ್ಯ ಅರ್ಹ ರೈತರಿಗೆ ದೊರಕಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ನಿರ್ವಹಿಸಬೇಕು. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಜಿಲ್ಲೆಯಲ್ಲಿ ಬಿತ್ತನೆ ಮಾಡದೇ ಬೀಜ ಮತ್ತು ರಸಗೊಬ್ಬರವನ್ನು ತಂದಿಟ್ಟುಕೊಂಡ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಾತನಾಡಿ ಜಿಲ್ಲೆಯಲ್ಲಿ ಜೂ. 1 ರಿಂದ ಆ. 5 ರವರೆಗೆ ವಾಡಿಕೆ ಮಳೆ 171.3 ಮಿಮೀ ಆಗಿದ್ದು, ಆ ಪೈಕಿ 118 ಮಿಮೀ. ಮಳೆಯಾಗಿದೆ. ಪ್ರತಿಶತ -31 ಕಡಿಮೆ ಮಳೆಯಾಗಿದೆ. ಈಗ ಮಳೆ ಬಂದರೂ ಸಹ ಬೆಳೆಗಳು ಚೇತರಿಸಿಕೊಳ್ಳಲು ಆಗುವುದಿಲ್ಲ. ಆದಕಾರಣ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಸಲಹೆ ಮಾಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು ರೂ. 164 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ವಿಬಿಜಿರಾಮ್ಜಿ ಯೋಜನೆಯಡಿ 18,000 ಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ. ಬಿ. ಅಸೂಟಿ, ಜಿಲ್ಲಾ ಪೊಲೀಸ ವರಿಷ್ಠಾದಿಕಾರಿ ರೋಹನ್ ಜಗದೀಶ, ಉಪಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಕೆ , ಜಿಪಂ ಉಪಕಾರ್ಯದಶಿರ್ ಸಿ. ಆರ್. ಮುಂಡರಗಿ ಹಲವರು ಇದ್ದರು.