ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ : ರಂಭಾಪುರಿ ಜಗದ್ಗುರುಗಳು

Soodi jukthi hiremath program
Soodi jukthi hiremath program
Published on
ವಿಜಯವಾಣಿ ಸುದ್ದಿಜಾಲ ಗದಗ
ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬದುಕು ಬಂಗಾರ. ಮರೆತು ಮಲಗಿದರೆ ಬದುಕು ಬಂಧನಕಾರಿ. ಮಹಾತ್ಮರ ಸಂದೇಶಗಳು ಎಲ್ಲರಿಗೂ ದಾರಿದೀಪ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಭಾನುವಾರ ಸೂಡಿ ಜುಕ್ತಿ ಹಿರೇಮಠದ ನೂತನ ರಥದ ಲೋಕಾರ್ಪಣೆ ಮತ್ತು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮ್ಮೇಳನದ ಸಾನ್ನಿದ್ಯ ವಹಿಸಿ ಮಾತನಾಡಿದರು.
ಭೌತಿಕ ಬದುಕಿಗೆ ಸಂಪತ್ತು ಅಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ರಾಷ್ಟ್ರಪ್ರಜ್ಞೆ ಅಗತ್ಯ. ಮಾನವನಿಗೆ ಯೋಗ್ಯ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಜ್ಞಾನ ಕ್ರಿಯಾತ್ಮಕವಾದ ಶಿವಾದ್ವೈತ ಸಿದ್ಧಾಂತವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಅವರು ಸಾಮಾಜಿಕ ಸಂವೇದನಾಶೀಲ ಮೌಲ್ಯಗಳನ್ನು ಬೆಳೆಸಿದ್ದನ್ನು ಮರೆಯಲಾಗದು. ಧರ್ಮ ಸತ್ಯ ಮತ್ತು ಪ್ರಾಮಾಣಿಕವಾಗಿ ಬದುಕಿದರೆ ಇದೇ ಜನ್ಮದಲ್ಲಿ ಸುಖ ಇದೆ ಎಂದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ನಿರಂತರ ಶ್ರಮ ಸಾಧನೆಯಿಂದ ಅದ್ಭುತ ಕಾರ್ಯಗಳನ್ನು ಮಾಡಿದ್ದಾರೆ. ನೂತನ ರಥ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳ ಶ್ರಮಪಟ್ಟಿದ್ದನ್ನು ಕಾಣುತ್ತೇವೆ. ಶ್ರೀಗಳವರ ನಿರಂತರ ಧರ್ಮ ಕಾರ್ಯ ಕಂಡು ಅತ್ಯಂತ ಸಂತೋಷವಾಗಿದೆ ಎಂದರು
ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಮಾತನಾಡಿ ಮಠ ಮಂದಿರಗಳು ನಮ್ಮ ಸಂಸ್ಕೃತಿಯ ಸಂರಕ್ಷಣೆಯ ಕೇಂದ್ರಗಳಾಗಿವೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ಅಧರ್ಮದ ಕವಚ ಹೊತ್ತ ಮನುಷ್ಯನ ವಿಚಾರಗಳು ಬಹಳ ಕಾಲ ಬಾಳಲಾರವು. ಸೂಡಿ ಶ್ರೀಗಳ ಶ್ರಮ ಭಕ್ತರ ಸಹಕಾರ ಇಂದಿನ ಎಲ್ಲ ಸಂಭ್ರಮಕ್ಕೆ ಕಾರಣವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಜಗದ್ಗುರುಗಳು ಮಾತನಾಡಿ ಅತಿ ಶತ್ರುಗಳನ್ನು ನಿಯಂತ್ರಿಸಬಹುದು. ಆದರೆ ಮತಿ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟ. ನದಿಯ ನೀರು ಎಷ್ಟು ತುಂಬಿದರೂ ಅದು ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಅದು ಖಾಲಿಯಾಗುವುದಿಲ್ಲ. ವೀರಶೈವ ಧರ್ಮ ವಿಶ್ವ ಬಂಧುತ್ವದ ಮೂಲಕ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸುತ್ತ ಬಂದಿದೆ ಎಂದರು.
ಶ್ರೀ ಕಾಶೀ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ, ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಧರ್ಮದ ದಾರಿ ಮೋಕ್ಷಕ್ಕೆ ಹೆದ್ದಾರಿ. ಮೋಹದ ದಾರಿ ತೊರೆದರೆ ಮೋಕ್ಷದ ದಾರಿ ದೊರಕುತ್ತದೆ. ಸಂಪತ್ತು ಬೆಳೆದಂತೆಲ್ಲಾ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಬೋಧಿಸಲ್ಪಟ್ಟ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಭವಿ ಭಕ್ತನಾಗುವ, ಅಂಗ ಲಿಂಗವಾಗುವ, ದೇಹ ದೇವಾಲಯವಾಗುವ ವಿಶಿಷ್ಠ ಸಂಸ್ಕೃತಿ ಹೊಂದಿದೆ. ಸೂಡಿ ಶ್ರೀಗಳವರ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳು ಭಕ್ತ ಸಂಕುಲಕ್ಕೆ ಹರುಷ ಉಂಟು ಮಾಡಿವೆ ಎಂದರು.
ಕಾಶೀ ನೂತನ ಜಗದ್ಗುರು ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ನಾಗರೀಕತೆ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ನಾಶಗೊಳ್ಳಬಾರದು. ರಾಷ್ಟç ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು. ಸೂಡಿಯ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ವಿದ್ಯಾ ವಿನಯ ಸಂಪನ್ನರಾಗಿ ವೀರಶೈವ ಧರ್ಮ ಸಂಸ್ಕೃತಿ ಸಂವರ್ಧಿಸುವ ಕಾರ್ಯದ ಮೂಲಕ ಎಲ್ಲರ ಮೆಚ್ಚಗೆಗೆ ಪಾತ್ರರಾಗಿದ್ದಾರೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ನಿವೃತ್ತ ಪೋಲೀಸ ಮಹಾ ನಿರ್ದೇಶಕ ಶಂಕರ ಬಿದರಿ ಅವರು ಮಾತನಾಡಿ ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಸಂಸ್ಕಾರದಿಂದ ಬದುಕು ಉಜ್ವಲಗೊಳ್ಳುತ್ತದೆ. ಗುರಿಯಿಲ್ಲದ ಗುರಿ ಸಾಧಿಸದ ಜೀವನ ನಿರರ್ಥಕವಾಗುತ್ತದೆ. ಮನುಷ್ಯನ ದೈಹಿಕ ವಿಕಾಸಕ್ಕೆ ನೀರು ಅನ್ನ ಮುಖ್ಯವಾಗಿರುವಂತೆ ಬದುಕನ್ನು ವಿಕಾಸಗೊಳಿಸುವ ಶಕ್ತಿ ಧರ್ಮಕ್ಕಿದೆ. ಸೂಡಿಯಲ್ಲಿ ಹಮ್ಮಿಕೊಂಡ ಎಲ್ಲಾ ಕಾರ್ಯಗಳು ಅತ್ಯಂತ ವೈಭವದಿಂದ ಜರುಗುತ್ತಿವೆ. ಇದಕ್ಕೆಲ್ಲ ಸೂಡಿ ಕೊಟ್ಟೂರು ಬಸವೇಶ್ವರರ ಶ್ರಮ ಮತ್ತು ಭಕ್ತರ ಸಹಕಾರ ದೊಡ್ಡದು ಎಂದರು.
ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಾರತೀಯ ಉತ್ಕೃಷ್ಟ ಸಾಹಿತ್ಯ ಸಂಪತ್ತನ್ನು ಮರೆಯಲಾಗದು. ಆಚಾರ್ಯರ ಮತ್ತು ಋಷಿ ಮುನಿಗಳ ಆಧ್ಯಾತ್ಮಿಕ ಚಿಂತನಗಳು ಮನುಷ್ಯ ಜೀವನದ ಉಜ್ವಲತೆಗೆ ಕಾರಣವಾಗಿವೆ. ಸೂಡಿ ಪಟ್ಟಾಧ್ಯಕ್ಷರು ಸಾರ್ಥಕ ಸಮಾರಂಭ ಹಮ್ಮಿಕೊಂಡಿರುವುದು ಎಲ್ಲ ಭಕ್ತರೂ ಸಂತಸಗೊಂಡಿದ್ದಾರೆ ಎಂದರು.

ಗ್ರಂಥ ಬಿಡುಗಡೆ ಮಾಡಿದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಸಕಲರ ಬಾಳಿನಲ್ಲೂ ಹೊಸ ಶಕ್ತಿ ಮೂಡಿಸಿದೆ. ದಾನಿಗಳ ದಾನ ಸತ್ಪಾತ್ರಕ್ಕೆ ತಲುಪಿರುವುದೆಂಬ ಆತ್ಮ ಸಂತೃಪ್ತಿ ತಮ್ಮದಾಗಿದೆ ಎಂದರು.

ನೇತೃತ್ವ ವಹಿಸಿದ ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸೂಡಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿದ್ದು ಎಲ್ಲ ಭಕ್ತ ಮಂಡಳಿಗೆ ಹರುಷವಾಗಿದೆ. 50 ವರುಷಗಳಿಂದ ನಡೆದುಕೊಂಡು ಬರುತ್ತಿರುವ ಜಾತ್ರೆಯಲ್ಲಿ ಈ ವರುಷ ಭವ್ಯ ಸುಂದರ ರಥ ನಿರ್ಮಾಣಗೊಂಡು ಲೋಕಾರ್ಪಣೆ ಗೊಳ್ಳುತ್ತಿರುವುದು ಎಲ್ಲಿಲ್ಲದ ಹರುಷ ತಂದಿದೆ ಎಂದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ, ಶ್ರೀ ಕಾಶೀ ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಜಗದ್ಗುರುಗಳ ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ದಾನಿಗಳ ನಾಮಫಲಕ ಅನಾವರಣ ಗೊಳಿಸಲಾಯಿತು. ಬನ್ನಿಕೊಪ್ಪದ ಡಾ.‌ಸುಜ್ಞಾನದೇವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಎಸಳೂರು ಚನ್ನಸಿದ್ಧೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು, ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ರೋಣ ಕಾಂಗ್ರೆಸ್ ಮುಖಂಡ ಮಿಥುನ್ ಪಾಟೀಲ, ಶರಣು ಗುಡಿಮನಿ, ಚಂದ್ರು ಬಾಳಿಹಳ್ಳಿಮಠ, ಸಂಗಮೇಶ ಉತ್ತಂಗಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net