ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ಗ್ಯಾಂಗ್​, ಬೆಚ್ಚಿಬಿದ್ದ ಪುಟ್ಟರಾಜ ನಗರದ ನಿವಾಸಿಗಳು

  ಗದಗ ಪುಟ್ಟರಾಜ ನಗರದಲ್ಲಿ ಕಳ್ಳರ ಗ್ಯಾಂಗ್​ ಸಂಚರಿಸುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿರುವುದು.
ಗದಗ ಪುಟ್ಟರಾಜ ನಗರದಲ್ಲಿ ಕಳ್ಳರ ಗ್ಯಾಂಗ್​ ಸಂಚರಿಸುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿರುವುದು.
Published on
ವಿಜಯವಾಣಿ ಸುದ್ದಿಜಾಲ ಗದಗ
ಇಲ್ಲಿನ ಪುಟ್ಟರಾಜ ನಗರ ಹಾಗೂ ಕೇಶವ ಬಡಾವಣೆಯಲ್ಲಿ ಬುಧವಾರ ನಸುಕಿನ ಜಾವ ಮುಖಕ್ಕೆ ಮಾಸ್ಕ್​ ಹಾಗೂ ಕೈಗವಸು ಧರಿಸಿ, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವ ಕಳ್ಳರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಮತ್ತು ಮನೆಯೊಂದರ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ.
ಇಲ್ಲಿನ ಪುಟ್ಟರಾಜ ನಗರದ ಎರಡನೇ ಹಂತದ ನಿವಾಸಿ ಕರಿಬಸಪ್ಪ ಗೋಕಾವಿ ಅವರ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು, ಹಿತ್ತಲ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಕಳ್ಳತನದ ಸದ್ದಿನಿಂದಾಗಿ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಲೈಟ್​ ಹಚ್ಚಿ ಜೋರಾಗಿ ಶಬ್ದ ಮಾಡಿದ್ದಾರೆ. ಸಾರ್ವಜನಿಕರು ಜಾಗೃತಗೊಳ್ಳುತ್ತಿದ್ದಂತೆ ಗಾಬರಿಗೊಂಡ ಕಳ್ಳರು ತಾವು ತಂದಿದ್ದ ಕಬ್ಬಿಣದ ಹಾರಿ ಹಾಗೂ ಪಿಕಾಸಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ವೃತ್ತಿನಿರತ ಕಳ್ಳರ ಗ್ಯಾಂಗ್​ ಶಂಕೆ?
ಬರಿ ಗೋಕಾವಿ ಅವರ ಮನೆ ಮಾತ್ರವಲ್ಲದೆ, ಇದಕ್ಕೂ ಮೊದಲು ಅಕ್ಕಪಕ್ಕದ ಬಡಾವಣೆಗಳಾದ ಸಂಭಾಪುರ ರಸ್ತೆಯ ಕೇಶವ ಬಡಾವಣೆಯಲ್ಲಿಯೂ ಕಳ್ಳರು ಓಡಾಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಮನೆಗಳನ್ನು ನೋಡಿ ಅಂತಿಮವಾಗಿ ಗೋಕಾವಿ ಮನೆಗೆ ಕನ್ನ ಹಾಕಿದ್ದಾರೆ. ಕಳ್ಳರು ಮುಖಕ್ಕೆ ಮಾಸ್ಕ್​ ಹಾಗೂ ಕೈಗಳಿಗೆ ಗವಸು ಧರಿಸಿರುವುದು ಕಂಡುಬಂದಿದೆ. ಕೈಯಲ್ಲಿ ಲಾಂಗ್​, ಮಚ್ಚುಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವುದು ನೋಡಿದರೆ, ಇವರು ಮಹಾರಾಷ್ಟ್ರ ಮೂಲದ ವೃತ್ತಿನಿರತ ಕಳ್ಳರಿರಬಹುದು ಎಂದು ಅಂದಾಜಿಸಲಾಗಿದೆ.
ಒಂದೇ ರಾತ್ರಿ ಎರಡು ಬಡಾವಣೆಗಳಲ್ಲಿ ಕಳ್ಳರು ಸಂಚರಿಸಿರುವುದು ಮತ್ತು ಸಿಸಿಟಿವಿಯಲ್ಲಿ ಅವರ ಭಯಾನಕ ದೃಶ್ಯಗಳು ವೈರಲ್​ ಆಗಿರುವುದು ನಿವಾಸಿಗಳ ನಿದ್ದೆಗೆಡಿಸಿದೆ. ಸದ್ಯ ಕಳ್ಳರು ಬಿಟ್ಟು ಹೋಗಿರುವ ಕಬ್ಬಿಣದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net