ನಗರಸಭೆ ಗುದ್ದುಗೆ ಗುದ್ದಾಟ ಮುಂದುವರಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಾನೂನು ಸಮರದಲ್ಲಿ ಹಾವು ಏಣಿ ಆಟಕ್ಕೆ ರ್ಪೂಣವಿರಾಮ ಇಲ್ಲದಂತಾಗಿದೆ. ಈ ಕಾನೂನು ಸಮರದಲ್ಲಿ ಒಮ್ಮೆ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಮತ್ತೊಮ್ಮೆ ಬಿಜೆಪಿ ತನ್ನ ಹಿಡಿತ ಸಾಧಿಸುತ್ತಿದೆ. ಅದರ ಭಾಗವಾಗಿ ಧಾರವಾಡ ಹೈಕೋರ್ಟ ದ್ವಿಸದಸ್ಯ ಪೀಠ ಬುಧವಾರ ಆದೇಶ ನೀಡಿದ್ದು, ಈ ಹಿಂದೆ ಏಕ ಸದಸ್ಯ ಪೀಠ ನೀಡಿದ್ದ ಅನರ್ಹತೆ ಆದೇಶ ರದ್ದು ಪಡಿಸಿ, ಮತದಾನ ಹಕ್ಕು, ನಗರಸಭೆಯ ಇತರೆ ಅಧಿಕಾರಗಳು ಮೂವರು ಸದಸ್ಯರಿಗೆ ನೀಡಿದೆ. ಮುಂದುವರಿದು, ಈ ಮೂವರು ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಳ್ಳಬೇಕಾದ ಸಂದರ್ಭ ಬಂದಲ್ಲಿ ಕೂಲಂಕುಷವಾಗಿ ವಿಚಾರಣೆ ನಡೆಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ನ್ಯಾಯಾಧೀಶರಾದ ಬಿ.ಎಂ. ಶ್ಯಾಮಪ್ರಸಾದ ಹಾಗೂ ಶಿವಶಂಕರ ಅಮರಣ್ಣವರ ಇದ್ದ ದ್ವಿಸದಸ್ಯ ಪೀಠವು ಬುಧವಾರ ಆದೇಶಿಸಿದೆ. ಸದ್ಯಕ್ಕೆ ಅನರ್ಹತೆ ರದ್ದುಗೊಂಡ ಉಷಾ ದಾಸರ, ಅನೀಲ ಅಬ್ಬಿಗೇರಿ ಮತ್ತು ಗೋಳೆಪ್ಪ ಮುಷಿಗೇರಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾಂಗ್ರೆಸ್ಸಿನ ಮುಂದಿನ ನಡೆ ನಿಗೂಢವಾಗಿದೆ.