ನಾಗಾವಿ, ಕಳಸಾಪುರ ಗ್ರಾಮದಲ್ಲಿ ಮತ್ತೆ ಮೈನಿಂಗ್​

Gadag Minig
Gadag Minig
Published on
ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಾಣ ಕುರುಡುತನ
ಸ್ಥಳ ಮಹಜರು ಮಾಡದೇ ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು
ಶಿವಾನಂದ ಹಿರೇಮಠ, ಗದಗ
ಜಿಲ್ಲೆಯಾದ್ಯಂತ ಮೆತ್ತಗಿದ್ದ ಮಣ್ಣು ಗಣಿಗಾರಿಕೆ ಈಗ ಮತ್ತೇ ಬಾಯ್ತೆರೆದು ತನ್ನ ಬಾಹು ವಿಸ್ತತರಿಸುತ್ತಿದೆ. ನಗರದ ಪ್ರಮುಖ ಕೇಂದ್ರವಾದ ಆರ್​ಇಓ ಕಚೇರಿಯ ಮುಂಭಾಗದಲ್ಲಿ ಅಗೆಯುತ್ತಿದ್ದ ಬೂಗಳ್ಳರು ಈಗ ಮತ್ತೇ ತಾಲೂಕಿನ ನಾಗಾವಿ, ಕಳಸಾಪುರ ಗ್ರಾಮದಲ್ಲಿ ಮೈನಿಂಗ್​ ಆರಂಭಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೇ ಅಕ್ರಮ ಮಣ್ಣು ಸಾಗಾಟ ಆರಂಭಿಸಿದ್ದು. ಸರ್ಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂ. ನಷ್ಟವಾಗುತ್ತಿದೆ. ಈ ಬಗ್ಗೆ ತಿಳಿದೂ ತಿಳಿಯದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ಅನುಸರಿಸುತ್ತಿದ್ದಾರೆ. ಸ್ಥಳ ಮಹಜರು ಮಾಡದೇ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ಇಲಾಖೆಯಿಂದ ಅನುಮತಿ ಪಡೆಯದೇ ಅಂದಾಜು ಅಂದಾಜು 30 ಎಕರೆಗೂ ಹೆಚ್ಚು ಗುಡ್ಡ ಈಗಾಗಲೇ ಮಾಯವಾಗಿದೆ. ಬಳ್ಳಾರಿಯನ್ನೇ ಹೋಲುವಂತೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ನಮಗೆ ಗೊತ್ತೇ ಇಲ್ಲದಂತೆ ಇಲಾಖಾ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮೊದಲು ನೆಪಮಾತ್ರಕ್ಕೆ ಅನುಮತಿ ಪಡೆದು ಭೂಮಿ ಸಮತಟ್ಟು ನೆಪದಲ್ಲಿ ಮಣ್ಣುಗಣಿಗಾರಿಕೆ ನಡೆಸುತ್ತಿದ್ದರು. ಈಗ ಅನುಮತಿ ಪಡೆಯದೇ ಕಪ್ಪತಗುಡ್ಡಕ್ಕೆ ಹೊಂದಿಕೊಂಡಿರುವ ಗದಗ ಸಮೀಪಿದ ನಾಗಾವಿ ಮತ್ತು ಕಳಸಾಪೂರ ಗ್ರಾಮದ ಗುಡ್ಡಗಳಲ್ಲಿ ಮೈನಿಂಗ್​ ಆರಂಭಿಸಿದ್ದಾರೆ. ಮಣ್ಣು ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಬೆಳೆದ ಗಿಡಮರಗಳ ಮಾರಣಹೋಮವು ನಡೆದಿದೆ. ಅರಣ್ಯ ಇಲಾಖೆಯು ಸಹ ಈ ಬಗ್ಗೆ ಮೌನ ವಹಿಸಿದ್ದು ಅನುಮಾನ ಮುಡುವಂತೆ ಮಾಡಿದೆ. ಕಳಸಾಪುರ, ನಾಗಾವಿ ಗ್ರಾಮದಲ್ಲಿ ಕೆಲವರು ರಾಜ್ಯಪಾಲರ ಹೆಸರಿನಲ್ಲಿ ಇರುವ ಭೂಮಿಯನ್ನೇ ನುಂಗಿದ್ದಾರೆ. ಮಣು ಗಣಿಗಾರಿಕೆಯಿಂದ ಭೂಗಳ್ಳರಿಗೆ ಕೋಟ್ಯಂತರ ರೂ ಲಾಭ ಸಿಗುತ್ತಿದ್ದು, ಸರ್ಕಾರದ ಬೊಮ್ಮಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
ದಾಳಿ, ಅನುಮಾನ:
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಹಿಂದೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಅತ್ಯಧಿಕ ಮಣ್ಣು ಗಣಿಗಾರಿಕೆ ನಡೆಸಿದವರಿಗೆ ಸಾವಿರಾರು ರೂ. ಗಳಲ್ಲಿ ದಂಡ ಹಾಗೂ ಕೆಲವರಿಗೆ ಕೋಟ್ಯಮತರ ರೂ ದಂಡ ವಿಧಿಸಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ವರೆಗೂ ಇಲಾಕಾ ಅಧಿಕಾರಿಗಳ ಮೇಲೆ ದೂರ ನೀಡಲಾಗಿತ್ತು. ಜನತಾ ದರ್ಶನದಲ್ಲೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಸಚಿವರು ತರಾಟೆ ತೆಗೆದುಕೊಂಡಿದ್ದರು. ದಂಡ ವಿಧಿಸುವ ಪ್ರಕ್ರಿಯೆ ಹಿಂದೆ ಕುರುಡು ಕಾಂಚಾಣದ ಶಬ್ಧ ಕೇಳಿತ್ತು ಎಂದು ಜಿಲ್ಲಾಡಳಿತ ಭವನದಲ್ಲಿ ಮಾತುಗಳು ಕೇಳಿ ಬಂದಿದ್ದವು. ತದ ನಂತೆ ತಣ್ಣಗಾಗಿದ್ದ ಮಣ್ಣು ಗಣಿಗಾರಿಕೆ ಈಗ ಎಗ್ಗಿಲ್ಲದೇ ನಡೆದಿದೆ.
ರಾತ್ರಿ ಕೆಲಸ:
ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 12 ಗಂಟೆ ವರೆಗೂ ಭೂ ಗಳ್ಳರು ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಕ್ರಮ ತಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ರಾತ್ರಿ ಸ್ಥಳಕ್ಕೆ ಧಾವಿಸಿ ಅಕ್ರಮ ಮುಟ್ಟುಗೋಲು ಹಾಕಲು ಭಯ ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಅಧಿಕಾರಿಗಳೇ ಮಾರ್ಗದರ್ಶನದಲ್ಲೇ ರಾತ್ರಿ ಸಮಯದಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಅಕ್ರಮ ಗಣಿಗಾರಿಕೆ ನಡೆಸುವ ಮೂಲಗಳು ತಿಳಿಸಿವೆ. ಇದರಲ್ಲಿ ಯಾವುದು ಸತ್ಯ? ಯಾವುದು ಮಿತ್ಯ ಎಂಬುದು ತನಿಖೆ ನಡೆದಾಗಲೇ ತಿಳಿದು ಬರಲಿದೆ.
ಮರಳು ಮಾಫಿಯಾದಷ್ಟೇ ಜಿಲ್ಲೆಯಾದ್ಯಂತ ಕೆಂಪು ಗರಸು ಮಣ್ಣು ಕಳ್ಳತನ ಮಾಫಿಯಾ ತನ್ನ ಬುಜಂಗ ಬಾಹು ಪಸರಿಸಿದೆ. ಬೆಲೆ ಎದ್ದು ಹೊಲ ಮೆಯ್ದಂತೆ ಇಲಾಖಾ ಅಧಿಕಾರಿಗಳ ವರ್ತನೆ ಸ್ಪಷ್ಟಪಡಿಸುತ್ತಿದೆ. ಸಾರ್ವಜನಿಕ ವಲಯದಲ್ಲಿ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಅದಲ್ಲದೇ ಕೆಂಪು ಗರಸು ಮಣ್ಣಿನ ಮಾಫಿಯಾ ಅಡ್ಡೆಗಳ ಮೇಲೆ ದಾಳಿ ನಡೆಸುವ ಇಲಾಖಾ ಅಧಿಕಾರಿಗಳ ಸ್ಥಳ ಮಹಜರು ವಿಚಾರವಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಸ್ಥಳದಲ್ಲಿ ನಡೆದ ಅಕ್ರಮವನ್ನು ಮುಚ್ಚಿಹಾಕುತ್ತಿರುವ ಇಲಾಖೆಯು ಕೇವಲ ಹೆಸರಿಗಷ್ಟೇ ಪ್ರಕರಣ ದಾಖಲಿಸಿ ಕಡಿಮೆ ಮೊತ್ತದ ದಂಡ ವಿಧಿಸಿ ಪ್ರಕರಣದಿಂದ ನೂಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅನದೀಕೃತ ಅಡ್ಡೆಗಳೇ ಹೆಚ್ಚು?
ಅನುಮತಿ ಪಡೆದ ಮಣ್ಣು ಗಣಿಗಾರಿಕೆಗಳಿಂದ ಅನುಮತಿ ಪಡೆಯದೇ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಲೇ ಅಧಿಕವಾಗಿವೆ. ಇದರಲ್ಲಿ ಕಳಸಾಪುರ ಮತ್ತು ನಾಗಾವಿ ಗ್ರಾಮದ ವ್ಯಾಪ್ತಿ, ಆರ್​ಟಿಓ ಕಚೇರಿ ಮುಂಭಾಗದಲ್ಲಿ ಅನುಮತಿ ಪಡೆಯದೇ ಮಣ್ಣು ಗಣಿಗಾರಿಕೆ ನಡೆಯುತ್ತಿದೆ.
ಸಿಬ್ಬಂದಿ ಕೊರತೆ:
ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಸಿಬ್ಬಂದಿಯಷ್ಟೇ ದಾಳೆ ನಡೆಸಲು ಸಾಧ್ಯವಿಲ್ಲ. ಸಿಬ್ಬಂದಿಗಳಿಗೆ ಪೊಲೀಸ್​ ಭದ್ರತೆಯೂ ಇಲ್ಲ. ಜಿಲ್ಲೆಯಾದ್ಯಂತ ಅಕ್ರಮ ಅಡ್ಡೆಗಳ ಸ್ಥಳ ಮಹಜರು ನಡೆಸಲು ಇಲಾಖೆಗೆ ಒಂದೇ ವಾಹನ ಇದ್ದು ಸಮರ್ಪಕ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿದೆ ಇಲಾಖೆ ಮೂಲಗಳು ತಿಳಿಸಿವೆ.
ಕೋಟ್​:
ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದರೆ ಪೊಲೀಸ್​ ಠಾಣೆಗೆ ತಿಳಿಸಬೇಕು. ನಾವು ಬಂದು ಮಹಜರು ಮಾಡುವಷ್ಟರಲ್ಲಿ ಭೂಗಳ್ಳರು ಸ್ಥಳದಿಮದ ಓಡಿ ಹೋಗುತ್ತಿದ್ದಾರೆ. ಟಿಪ್ಪರ್​ ಲಾರಿ, ಜೆಸಿಬಿಗಳ ಜತೆಗೆ ಪರಾರಿ ಆಗುತ್ತಾರೆ.
ನಾಗಭೂಷಣ, ಗಣಿ ಮತ್ತು ಬೂವಿಜ್ಞಾನ ಇಲಾಖೆ ಅಧಿಕಾರಿ.
ಕೋಟ್​
ಇಲಾಖೆಯಿಂದ ಯಾರಿಗೂ ಮಣ್ಣು ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಹೀಗಿದ್ದರೂ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ವರದಿ ಪಡೆದು ಕ್ರಮಕ್ಕೆ ಸೂಚಿಸಲಾಗುವುದು.
ಅರುಣ ಮಂಟೂರು, ಕಂದಾಯ ಅಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net